ಶಹಾಪುರಃ ಡಿಗ್ರಿ ಕಾಲೇಜಿನಲ್ಲಿ ಮತ ಎಣಿಕೆ, ಸೂಕ್ತ ಬಂದೋಬಸ್ತ್, ಸುತ್ತಲೂ ಪೊಲೀಸ್ ಸರ್ಪಗಾವಲು
ಶಹಾಪುರಃ ಡಿಗ್ರಿ ಕಾಲೇಜಿನಲ್ಲಿ ಮತ ಎಣಿಕೆ
ಎಣಿಕೆಗಾಗಿ 276 ಜನ ಅಧಿಕಾರಿಗಳು, ಸೂಕ್ತ ಪೊಲೀಸ್ ಬಂದೋಬಸ್ತ್, ಎಣಿಕೆ ಕೇಂದ್ರದ ಸುತ್ತಲೂ ಕಟ್ಟೆಚ್ಚರ
ಮಲ್ಲಿಕಾರ್ಜುನ ಮುದ್ನೂರ
ಶಹಾಪುರಃ ಗ್ರಾಮ ಪಂಚಾಯತ್ ಚುನಾವಣೆ ಮತ ಎಣಿಕೆ ನಿಗದಿತ ಡಿ.30 ಬುಧವಾರ ಬೆಳಗ್ಗೆ ಆರಂಭವಾಗಲಿದೆ. ಎಣಿಕೆಗೆ ಬೇಕಾದ ಸಕಲ ವ್ಯವಸ್ಥೆ ತಾಲೂಕು ಆಡಳಿತ ಈಗಾಗಲೇ ಸಜ್ಜುಗೊಳಿಸಿದೆ. ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಗ್ಗೆ 7 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಓರ್ವ ಅಭ್ಯರ್ಥಿ ಜೊತೆಗೆ ಓರ್ವ ಏಜೆಂಟರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಮತ ಎಣಿಕೆ ಕೇಂದ್ರದ ಸುತ್ತಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು ಕಟ್ಟೆಚ್ಚರವಹಿಸಲಾಗಿದೆ.
ಮಹಿಮಹಿಬೂಬಿ. ತಹಸೀಲ್ದಾರ. ಶಹಾಪುರ.
ತಾಲೂಕಿನ ಒಟ್ಟು 24 ಗ್ರಾಮ ಪಂಚಾಯತಿಗಳಲ್ಲಿ ಗೋಗಿ(ಪಿ) ಗ್ರಾಪಂಗೆ ಮತಪಟ್ಟಿ ಲೋಪದೋಷಗಳಿಂದಾಗಿ ಚುನಾವನೆ ನಡೆದಿರುವದಿಲ್ಲ. ಇನ್ನೊಂದು ಶಿರವಾಳ ಗ್ರಾಪಂಗೆ ಎಲ್ಲಾ ಸದಸ್ಯರು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆ ಇನ್ನುಳಿದ 22 ಪಂಚಾಯತಿಗಳಿಗೆ ಮಾತ್ರ ಚುನಾವಣೆ ನಡೆಸಲಾಗಿತ್ತು.
ಡಿ.30 ರಂದು 22 ಗ್ರಾಪಂಗಳ ಮತ ಎಣಿಕೆ ನಡೆಯಲಿದ್ದು, ಮತ ಎಣಿಕೆಗೆ 11 ಕೋಣೆಗಳಲ್ಲಿ 69 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆಯಲ್ಲಿ ಮೇಲ್ವಿಚಾರಕರು, ಸಹಾಯಕ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಆಯಾ ಗ್ರಾಪಂ ಚುನಾವಣೆ ಅಧಿಕಾರಿಗಳು ಮತ್ತು ಸಹಾಯಕ ಚುನಾವಣೆ ಅಧಿಕಾರಿಗಳು ಹಾಜರಿದ್ದು, ಜವಬ್ದಾರಿಯಿಂದ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಹಶೀಲ್ದಾರ ಮಹಿಬೂಬಿ ತಿಳಿಸಿದ್ದಾರೆ.
ಮತ ಎಣಿಕೆಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ. 24 ಗ್ರಾಪಂಗಳಲ್ಲಿ ಒಂದು ಗ್ರಾಪಂಗೆ ಚುನಾವಣೆ ನಡೆದಿರುವದಿಲ್ಲ. ಇನ್ನೊಂದರಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ. ಹೀಗಾಗಿ 22 ಗ್ರಾಪಂಗೆ ಮಾತ್ರ ಚುನಾವಣೆ ನಡೆಸಲಾಗಿತ್ತು. 180 ಮತಗಟ್ಟೆಗಳಲ್ಲಿ ಮತದಾನ ನಡೆಸಲಾಗಿದೆ. ಮತ ಎಣಿಕೆ ಕೇಂದ್ರದಿಂದ ಅಂದಾಜು 100 ಮೀಟರ್ ಅಂತರದಲ್ಲಿ ಯಾರಿಗೂ ಪ್ರವೇಶವಿಲ್ಲ. ವಾಹನಗಳಿಗೂ ನಿಷೇಧಿಸಲಾಗಿದೆ. ಇನ್ನುಳಿದಂತೆ ಮತ ಎಣಿಕೆಗೆ ಬರುವ ವಾಹನಗಳು, ಸಿಬ್ಬಂದಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ಕೇಂದ್ರಕ್ಕೆ ಮಧ್ಯ ಪ್ರವೇಶ ಮಾಡದಂತೆ ನಿರ್ಬಂದಿಸಲಾಗಿದೆ. ಅದಕ್ಕೆ ಬೇಕಾದ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದರು.
ಮತ ಎಣಿಕೆ ಕೇಂದ್ರಕ್ಕೆ ಪೊಲೀಸ್ ಸರ್ಪಗಾವಲು
ಬುಧವಾರ ಮತ ಎಣಿಕೆ ಹಿನ್ನೆಲೆ ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೊಲೀಸ್ ಪರೇಡ್ ನಡೆದಿದ್ದು, ಕೇಂದ್ರದ ಸುತ್ತಲೂ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಾಗವಾನ್ ನಿರ್ದೇಶನದ ಮೇರೆಗೆ ಡಿವೈಎಸ್‍ಪಿ ವೆಂಕಟೇಶ ಹುಗಿಬಂಡಿ, ಸಂತೋಷ ಬನಹಟ್ಟಿ ಬಂದೋಬಸ್ತ್ ಜವಬ್ದಾರಿ ಹೊತ್ತು ಡಿಗ್ರಿ ಕಾಲೇಜಿನಲ್ಲಿ ಪೊಲೀಸ್ ಸಿಬ್ಬಂದಿಗೆ ಸಮರ್ಪಕ ಸೂಚನೆ ನೀಡಿದರು. ಅಲ್ಲದೆ ಜವಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.
ಶಹಾಪುರ ಗ್ರಾಮೀಣ ಸಿಪಿಐ ಶ್ರೀನಿವಾಸ್ ಅಲ್ಲಾಪುರೆ, ಪಿಐ ಚನ್ನಯ್ಯ ಹಿರೇಮಠ ನೇತೃತ್ವದಲ್ಲಿ ಗೋಗಿ, ಭೀ.ಗುಡಿ, ಶಹಾಪುರ ಸೇರಿದಂತೆ ಒಟ್ಟು 6 ಜನ ಪಿಎಸ್‍ಐ, 13 ಜನ ಎಎಸ್‍ಐ, 34 ಜನ ಮುಖ್ಯ ಕಾನ್ಸಟೇಬಲ್, 75 ಜನ ಕಾನ್ಸಟೇಬಲ್ ಸೇರಿದಂತೆ ಜಿಲ್ಲಾ ಕಾಯ್ದಿಟ್ಟ ಪಡೆಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಒಟ್ಟು 130 ಜನ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ನಲ್ಲಿ ಇರಲಿದ್ದು, ಸಮರ್ಪಕ ಕರ್ತವ್ಯ ನಿಭಾಯಿಸಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.