ಪ್ರಮುಖ ಸುದ್ದಿ

ಕೋವಿಡ್ ಮುಕ್ತ ಜಿಲ್ಲೆಗೆ ಸಹಕರಿಸಿ – ಡಾ.ರಾಗಪ್ರಿಯ

ಕಡ್ಡಾಯವಾಗಿ ಲಸಿಕೆ ನೀಡಿ ಕೋವಿಡ್ ಮುಕ್ತ ಜಿಲ್ಲೆಯಾಗಿಸುವ ಗುರಿಗೆ ಕೈ ಜೋಡಿಸಿ: ಜಿಲ್ಲಾಧಿಕಾರಿ

ಯಾದಗಿರಿಃ ಕೋವಿಡ್-19 ನಿಯಂತ್ರಣಕ್ಕೆ ಜನರನ್ನು ಲಸಿಕಾಕರಣಕ್ಕೆ ಮನವೊಲಿಸಿ ಕೋವಿಡ್ ಮುಕ್ತ ಜಿಲ್ಲೆಯಾಗಿಸುವ ಗುರಿಗೆ ಕೈ ಜೋಡಿಸಬೇಕೆಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.ಅವರು ಅಧಿಕಾರಿಗಳಿಗೆ ತಿಳಿಸಿದರು.

ಶಹಾಪುರ ತಾಲೂಕಿನ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಆಡಿಟೋರಿಯಂ ಸಭಾಂಗಣದಲ್ಲಿ ನಡೆದ ಶಹಾಪುರ ಮತ್ತು ವಡಿಗೇರಾ ತಾಲೂಕು ಮಟ್ಟದ ಕೋವಿಡ್ ಲಸಿಕಾಕರಣ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಸತತವಾಗಿ ಶ್ರಮಿಸುತ್ತಿದೆ. ಲಸಿಕಾಕರಣದ ಬಗ್ಗೆ ಜನರಲ್ಲಿ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕಾಗಿದೆ. ಅವರು ಸಹಕಾರ ಕೊಟ್ಟರೆ ಮಾತ್ರ 3 ನೇ ಅಲೆ ತಡೆಯಲು ಸಾಧ್ಯ. ಈಗಾಗಲೇ ಜಿಲ್ಲೆಯಲ್ಲಿ ಲಸಿಕಾಕರಣ ತೀವ್ರಗತಿಯಲ್ಲಿ ನಡೆಯುತ್ತಿದೆ. ಆದರೂ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೆಲವರಿಗೆ ಲಸಿಕಾಕರಣ ನಂತರ ಮೈ, ಕೈ ನೋವು ಸಹಜವಾಗಿ ಕಾಣುತ್ತದೆ. ಮದ್ಯಪಾನ ಸೇವಿಸುವರು ಅಡ್ಡ ಪರಿಣಾಮಗಳು ಆಗಬಹುದೆಂದು ಲಸಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಖಂಡಿತವಾಗಿಯೂ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಇಲ್ಲಿಯವರೆಗೆ ಲಸಿಕೆ ಪಡೆದವರು ಸುರಕ್ಷಿತವಾಗಿದ್ದಾರೆ. ಇಲ್ಲಿಯವರೆಗೆ ಎರಡು ಡೋಸ್ ಲಸಿಕೆ ಪಡೆದವರು ಕೊರೊನಾ ಬಂದರೂ ಮರಣಹೊಂದಿಲ್ಲ ಎಂದು ಜನರಿಗೆ ತಿಳಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಲಸಿಕೆ ಬಗ್ಗೆ ಇನ್ನೂ ಹಿಂಜರಿಯುತ್ತಿರುವ ಸಾಕಷ್ಟು ಪ್ರಕರಣಗಳು ಕಂಡು ಬರುತ್ತಿವೆ. ವಿಶೇಷವಾಗಿ ಕೆಲವು ಪ್ರದೇಶಗಳಲ್ಲಿ ಲಸಿಕೆ ಪಡೆಯಲು ಒಪ್ಪುತ್ತಿಲ್ಲ ಎಂದು ಸಂಬಂಧಿಸಿದ ನೊಡಲ್ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಈ ನಿಟ್ಟಿನಲ್ಲಿ ಆ ಸಮುದಾಯಗಳ ಮುಖಂಡರೊಂದಿಗೆ ಅಧಿಕಾರಿಗಳು ಸಮಾಲೋಚಿಸಿ, ಜನರನ್ನು ಲಸಿಕಾಕರಣಕ್ಕೆ ಮನವೊಲಿಸಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವಡಿಗೇರಾ ಮತ್ತು ಶಹಾಪುರ ತಾಲೂಕಿನ ದೋರನಹಳ್ಳಿ, ಬೆಂಡೆಬೆಂಬಳಿ, ಚಾಮನಾಳ, ನ.ಪ್ರಾ.ಆ.ಕೇ ಶಹಾಪುರ, ಚಟ್ನಳ್ಳಿ, ಗೋಗಿ, ಹತ್ತಿಗೂಡೂರು, ಹೈಯಾಳ ಬಿ, ಕುರಕುಂದಾ, ಸಗರ, ಶಿರವಾಳ, ತಡಿಬಿಡಿ, ವನದುರ್ಗಾ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗಳಲ್ಲಿ ಒಟ್ಟು 259915 ಅರ್ಹ ಫಲಾನುಭವಿಗಳು ಇದ್ದಾರೆ. ಇಲ್ಲಿಯವರೆಗೆ 232721 ಜನರಿಗೆ ಮೊದಲ ಡೋಸ್ ಶೇಕಡಾವಾರು 90 ಮತ್ತು 133051 ಜನರಿಗೆ ಎರಡನೇ ಡೋಸ್ ಶೇಕಡಾವಾರು 57 ರಷ್ಟು ಲಸಿಕೆ ನೀಡಲಾಗಿದೆ ಎಂದು ವೈದ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇನ್ನೂ ನೂರರಷ್ಟು ಪ್ರಗತಿ ಸಾಧಿಸಲು ಎಲ್ಲಾ ಅಧಿಕಾರಿಗಳು ಕಂಕಣಬದ್ದರಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹಯ್ಯಾಳ ಬಿ ಶೇಕಡಾವಾರು 92, ಸಗರ ಶೇಕಡಾವಾರು 99, ಕುರುಕುಂದಾ ಶೇಕಡಾವಾರು 101, ಯುಪಿಎಚ್ಸಿ ಶಹಾಪುರ ಶೇಕಡಾವಾರು 96 ಮೊದಲ ಡೋಸ್ ಲಸಿಕಾಕರಣ ಪ್ರಗತಿ ಸಾಧನೆ ಮಾಡಿವೆ. ಬೆಂಡೆಬೆಂಬಳಿ 86, ಚಟ್ನಳ್ಳಿ 85, ಹತ್ತಿಗೂಡೂರು 82, ತಡಿಬಿಡಿ 82, ಚಾಮನಾಳ 83, ಗೋಗಿ 87, ಶಿರವಾಳ 88 , ವನದುರ್ಗಾ 81 ಶೇಕಡಾವಾರು ಪ್ರಗತಿ ಸಾಧಿಸಿವೆ ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಅಭಿನಂದಿಸಿ ತೀವ್ರಗತಿಯಲ್ಲಿ ಎರಡನೇ ಡೋಸ್ ಲಸಿಕೆ ನೀಡಿ ಪ್ರಗತಿ ಸಾಧಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿಲ್ಪಾಶರ್ಮಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಪಾಟೀಲ್, ಆರ್ ಸಿ ಎಚ್ ಓ ಡಾ.ಲಕ್ಷ್ಮೀಕಾಂತ ಒಂಟಿಪೀರ, ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಭಗವಂತ ಅನ್ವರ, ಶಹಾಪುರ ತಹಶೀಲ್ದಾರ ಮಧುರಾಜ್, ವಡಿಗೇರಾ ತಹಶೀಲ್ದಾರ ಸುರೇಶ ಅಂಕಲಗಿ, ಶಹಾಪುರ ವೈದ್ಯಾಧಿಕಾರಿ ರಮೇಶ ಗುತ್ತೇದಾರ ಇನ್ನಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button