yadgiri, ಶಹಾಪುರಃ ಹೆತ್ತ ತಾಯಿಯನ್ನೇ ನದಿಗೆ ತಳ್ಳಿ ಕೊಲೆ ಮಗನ ಬಂಧನ
ಮಗನ ಬಾಯಿಂದಲೇ ಹೊರ ಬಿತ್ತು ಸತ್ಯ
ವಾರದ ನಂತರ ಶವ ನದಿಯಲ್ಲಿ ತೇಲಿ ಬಂದಿತ್ತು.!
ಸಂಬಂಧಿಕರೊಬ್ಬರಿಂದ ಬೆಳಕಿಗೆ ಬಂದ ಪ್ರಕರಣ, ಅಜ್ಜಿ ಎಲ್ಲಿದ್ದಾಳೆ.? ಕೇಳಿದ ಪ್ರಶ್ನೆಗೆ ಉತ್ತರಿಸಲಾಗದ ಆರೋಪಿ
ಮಗನ ಬಾಯಿಂದಲೇ ಹೊರ ಬಿತ್ತು ಸತ್ಯ
yadgiri, ಶಹಾಪುರಃ ಖಾಯಿಲೆಯಿಂದ ಬಳಲುತ್ತಿದ್ದು, ಸಾಕಷ್ಟು ಬಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಬೇಸತ್ತಿದ್ದ ಮಗನೋರ್ವ ತನ್ನ ಸ್ನೇಹಿತನ ಸಹಾಯದಿಂದ ತಾಯಿಯನ್ನು ಫುಸಲಾಯಿಸಿ ಒಂದು ವಾರದ ಹಿಂದೆಯೇ ತಾಲೂಕಿನ ಹುರಸಗುಂಡಗಿ ಸಮೀಪದ ಭೀಮಾ ನದಿ ಹತ್ತಿರಕ್ಕೆ ಕರೆ ತಂದು ತಾಯಿಯನ್ನು ನದಿಯ ನೀರಲ್ಲಿ ಮುಳುಗಿಸಿ ಕೊಂದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೂಲತಃ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮ ನಿವಾಸಿ ರಾಚಮ್ಮ ಗಂಡ ಶರಬಣ್ಣ ಯಳಮೇಲಿ (60) ಎಂಬ ವಯೋವೃದ್ಧೆಯನ್ನು ಮಾ. 18 ರಂದು ಆಸ್ಪತ್ರೆಗೆ ಕರೆದೊಯ್ಯುವೆ ಎಂದು ಮಗ, ಆರೋಪಿ ಭೀಮಾಶಂಕರ ಹಾಗೂ ಇನ್ನೊರ್ವ ಆತನ ಸ್ನೇಹಿತ ಇಬ್ಬರು ಬೈಕ್ ಮೇಲೆ ಕರೆದುಕೊಂಡು ಶಹಾಪುರ ತಾಲೂಕಿನ ಹುರಸಗುಂಡಗಿ ಸಮೀಪದ ಭೀಮಾ ನದಿಯಲ್ಲಿ ಮುಳುಗಿಸಿ ಕೊಂದು ನದಿಯಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಸಂಬಂಧಿಕರೊಬ್ಬರು ಮಾ.29 ರಂದು ಭೀಮರಾಯನ ಗುಡಿ ಠಾಣೆಗೆ ದೂರು ನೀಡಿದ್ದಾನೆ.
ಅಲ್ಲದೆ ದೂರುದಾರ ಆರೋಪಿ ಮೇಲೆ ಸಂಶಯ ಬಂದು, ಅಜ್ಜಿಯನ್ನು ಎಲ್ಲಿ ಬಿಟ್ಟು ಬಂದಿದ್ದೀಯಾ ಎಂದು ಗದರಿಸಿ ಕೇಳಿದಾಗ ಆರೋಪಿ ಭೀಮಾಶಂಕರ ಸತ್ಯ ಬಾಯಿ ಬಿಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾನೆ.
ಆರೋಪಿಯ ಹೇಳಿಕೆಯಂತೆ ಹುರಸಗುಂಡಗಿ ನದಿ ಹತ್ತಿರ ಬಂದು ನೋಡಲಾಗಿ ಶವ ದಡದಲ್ಲಿ ತೇಲಿ ಬಿದ್ದಿರುವದು ಕಂಡು ಅಜ್ಜಿ ತೊಟ್ಟಿದ್ದ ಬಟ್ಟೆ ಮೇಲೆ ದೂರುದಾರ ಗುರುತಿಸಿ ಘಟನಾ ವ್ಯಾಪ್ತಿಯ ಭೀಮರಾಯನ ಗುಡಿ ಠಾಣೆಗೆ ಆಗಮಿಸಿ ಪ್ರಕರಣ ದಾಖಲಿಸಿದ್ದಾನೆ.
ದೂರು ಆಧರಿಸಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಪೊಲೀಸರು ಆರೋಪಿಗಳಿಬ್ಬರ ಪತ್ತೆಗೆ ಜಾಲ ಬೀಸಿ, 24 ಗಂಟೆಯಲ್ಲಿ ಬುಧವಾರ ಆರೋಪಿ, ಮಗ ಭೀಮಾಶಂಕರನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಹವರ್ತಿ ಆರೋಪಿ ಬಂಧನಕ್ಕೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಈ ಕುರಿತು ಭೀಮರಾಯನ ಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.