ವಿಧವೆ ಮೇಲೆ ಅತ್ಯಾಚಾರಃ ಪ್ರಕರಣ ದಾಖಲು
ಯಾದಗಿರಿ, ಶಹಾಪುರ: ತಾಲ್ಲೂಕಿನ ಗಂಗನಾಳ ಗ್ರಾಮದ ವಿಧವೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಪರಿಣಾಮ ಗರ್ಭವತಿಯಾದ ಬಗ್ಗೆ ಗೋಗಿ ಠಾಣೆಯಲ್ಲಿ ಮಂಗಳವಾರ ದೂರೊಂದು ದಾಖಲಾಗಿದೆ.
ಗಂಗನಾಳ ಗ್ರಾಮದ ಶಂಕರ ಅಯ್ಯಪ್ಪ ವಾಗಣಗೇರಿ ಅತ್ಯಾಚಾರ ಎಸಗಿದ ಆರೋಪಿಯಾಗಿದ್ದಾನೆ.
ಮದುವೆಯಾಗಿ ಒಂದು ವರ್ಷದಲ್ಲಿ ಸಂತ್ರಸ್ಥೆ ಗಂಡ ಮೃತಪಟ್ಟಿದ್ದು, ಉಪಜೀವನಕ್ಕಾಗಿ ಎಮ್ಮೆ ಕಾಯಲು ಹಾಗೂ ಉರುವಲು ಕಟ್ಟಿಗೆ ತರಲು ಹೊಲಕ್ಕೆ ಹೋಗುತ್ತಿರುವಾಗ ಆರೋಪಿ ಶಂಕರ ನಡುವೆ ಪರಿಚಯವಾಗಿದೆ. ಪರಿಚಯ ಮೋಹಕ್ಕೆ ತಿರುಗಿ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಆಗಲೇ ನಾನು ಮೊದಲು ಮದುವೆ ಮಾಡಿಕೊಳ್ಳು ಅಂತ ಹೇಳಿದರೂ ಕೇಳದೆ ನನ್ನ ಇಚ್ಛೆಯ ವಿರುದ್ಧ ಅತ್ಯಾಚಾರ ಎಸಗಿದ. ಈಗ ನಾನು ಏಳು ತಿಂಗಳು ಗರ್ಭಿಣಿ ಎಂದು ಸಂತ್ರಸ್ಥೆ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ ಮಾತು ನೀಡಿದಂತೆ ಮದುವೆ ಆಗು ಎಂದರೆ, ಆರೋಪಿ ಜೀವ ಬೆದರಿಕೆ ಹಾಕುತ್ತಿದ್ದು, ನನ್ನ ಹಾಗೂ ಕುಟುಂಬಕ್ಕೆ ರಕ್ಷಣೆ ಅಗತ್ಯವಿದೆ. ಈ ಕುರಿತು ಸೂಕ್ತ ಕ್ರಮಕೈಗೊಳ್ಳುವಂತೆ ಮತ್ತು ಆರೋಪಿಯನ್ನು ಬಂಧಿಸಿ ನ್ಯಾಯ ಒದಗಿಸಿ ಕೊಡಬೇಕೆಂದು ನೊಂದ ಮಹಿಳೆ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಗೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.