ಶಿಶುಗೀತೆಗಳ ಸರದಾರ ಸಮುದ್ರವಳ್ಳಿ ವಾಸು
” *ಗೆಳೆತನದ ಸುವಿಶಾಲ ಆಲದಡಿ* *ಪಸರಿಸಿಹ*
*ತಣ್ಣೆಳಲ ತಂಪಿನಲಿ* *ತಂಗಿರುವೆನು*
*ಜೀವನದನಂತ ದುರ್ಭರ* *ಬವಣೆ ನೋವುಗಳ*
*ಕಾವುಗಳ ಮೌನದಲಿ* *ನುಂಗಿರುವೆನು*
*ಗೆಳೆತನವೆ ಇಹಲೋಕಕಿರುವ* *ಅಮೃತ*
*ಅದನುಳಿದರೇನಿಹುದು* –
*ಜೀವನಮ್ಮೃತ* ”
ಕನ್ನಡದ ಸಮನ್ವಯ ಕವಿ,ಸುನೀತಗಳ ಸಾಮ್ರಾಟ ಎಂದು ಪ್ರಸಿದ್ಧರಾದ ಕನ್ನಡದ ಖ್ಯಾತ ವಿದ್ವಾಂಸರು ಹಾಗೂ ಹೊಸಗನ್ನಡ ಕವಿಗಳಾದ ಚನ್ನವೀರ ಕಣವಿಯವರಈ ಮೇಲಿನ ‘ *ಗೆಳೆತನ* ‘ ಪದ್ಯವನ್ನು ಅತ್ಯಂತ ಆಳವಾಗಿ ಅರ್ಥೈಸಿಕೊಂಡು ‘ ಸ್ನೇಹವೇ ಇಹಲೋಕದ ಅಮೃತ’ ಎಂಬುದನ್ನರಿತು ಎಲ್ಲರೊಂದಿಗೆ ಪಾರದರ್ಶಕ ಸ್ನೇಹ ಸಂಬಂಧವನ್ನು ಹೊಂದಿ,’ *ಸ್ನೇಹಜೀವಿ* ‘ಎಂದೇ ನಮಗೆಲ್ಲಾ ಚಿರಪರಿಚಿತರಾಗಿರುವ ಮಗುವಿನ ಮನದ ಹಾಸನದ ಮಕ್ಕಳ ಸಾಹಿತಿ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಕೇಂದ್ರ ಸಮಿತಿಯ ಕ್ರಿಯಾಶೀಲ ಸಂಘಟನಾ ಕಾರ್ಯದರ್ಶಿಯಾದ ಶ್ರೀ ಸಮುದ್ರವಳಿ ವಾಸು ಅವರು, ಸಿಹಿ ಮುತ್ತು, ಎಡವಟ್ಟು ವಾಸು, ಹುಚ್ಚುಡ್ಗಿ, ಸಿಂಗಾರಿ, ಢಣ ಢಣ ಗಂಟೆ ಬಾರಿಸಿತು, ಮಲೆನಾಡಿನ ಮಾರ್ಗದಾಳು, ನನ್ನಾಕೆ ಹೇಳಿದ್ದು, ಅಂತರಂಗದ ಅಳಲು ಹೀಗೆ ಹತ್ತು ಹಲವು ಕೃತಿಗಳನ್ನು ಕನ್ನಡ ಸಾರಸತ್ವ ಲೋಕಕ್ಕೆ ಕಾಣಿಕೆಯಾಗಿ ನೀಡಿದ್ದಾರೆ.
ಅವುಗಳಲ್ಲಿ ಮಕ್ಕಳ ಕವನ ಸಂಕಲನಗಳೇ ಹೆಚ್ಚು ಎಂಬುದು ಹೆಗ್ಗಳಿಕೆ! ಈ ಎಡವಟ್ಟು ವಾಸು ಅವರ ಮನದೊಳಗೊಬ್ಬ *ಉಂಡಾಡಿ ಗುಂಡ* ನಿದ್ದಾನೆ. ಆ ಗುಂಡನನ್ನು ಚನ್ನರಾಯಪಟ್ಟಣದ *ಯುವಸಾಹಿತಿ* *ರಾಜೇಶ್.ಬಿ.ಹೊನ್ನೇನಹಳ್ಳಿ* ಅವರು ತಮ್ಮ ‘ *ಯದುನಂದನ’ಪ್ರಕಾಶನದಿಂದ* ಪ್ರಕಟಿಸುವ ಮೂಲಕ ನಮಗೆ ಪರಿಚಯಿಸಿದ್ದಾರೆ.
ಈ ಉಂಡಾಡಿ ಗುಂಡ ತನ್ನ ತೊದಲುನುಡಿಯಿಂದ ಶಿಶುಗೀತೆಗಳನ್ನು ಹೇಳುತ್ತಾ ನಮ್ಮನ್ನೆಲ್ಲಾ ರಂಜಿಸುವುದರ ಜೊತೆ ಜೊತೆಗೆ ಸಾಮಾನ್ಯ ಜ್ಞಾನವನ್ನು ಹಂಚಿಕೊಂಡಿದ್ದಾನೆ.
ಬನ್ನಿ ಸ್ನೇಹಿತರೆ,ನಮ್ಮ ಒತ್ತಡ ಜೀವನದ ಜಂಜಾಟವನ್ನು ಕೊಂಚ ಹೊತ್ತಾದರೂ ಬದಿಗಿಟ್ಟು,ಉಂಡಾಡಿಗುಂಡನೊಂದಿಗೆ ಮಾತಿಗಿಳಿದು ಮಕ್ಕಳಂತೆ ನಲಿದು ನಮ್ಮ ಬಾಲ್ಯವನ್ನು ನೆನಪು ಮಾಡಿಕೊಳ್ಳೋಣಾ.
*ಹಣ್ಣುಗಳನು ನಾವು* *ತಿನ್ನೋಣ*
“ಬಾಳೆಹಣ್ಣನು ತಿನ್ನೋಣ
ಸಹಬಾಳ್ವೆಯನು ಕಲಿಯೋಣ
ಕಿತ್ತಲೆ ಹಣ್ಣನು ತಿನ್ನೋಣ
ಕಿತ್ತಾಡದೆ ನಾವು ಬದುಕೋಣ
ಮಾವಿನ ಹಣ್ಣನು ತಿನ್ನೋಣ
ಮಾನವೀಯತೆ ಮೆರೆಯೋಣ
ಹಲಸಿನ ಹಣ್ಣನು ತಿನ್ನೋಣ
ಅಸೂಯೆ ಪಡದೆ ಬದುಕೋಣ”
‘ *ಬೆಳೆಯುವ ಸಿರಿ* *ಮೊಳಕೆಯಲ್ಲಿ* ‘ ಎಂಬಂತೆ ಮಕ್ಕಳು ಚಿಕ್ಕವರಿದ್ದಾಗಲೆ ಸಂಸ್ಕಾರ,ಸನ್ನಡತೆ ಬಗ್ಗೆ ಗಮನ ವಹಿಸಿ ಕಲಿಸಬೇಕು. ಮಕ್ಕಳಿಗೆ ಸನ್ನಡತೆಯ ಬಗ್ಗೆ ನೇರವಾಗಿ ಮಾತಿನಲ್ಲಿ ಹೇಳಿದರೆ ಅಷ್ಟಾಗಿ ಪ್ರಭಾವ ಬೀರುವುದಿಲ್ಲ; ಅದರ ಬದಲಿಗೆ ಹಾಡು, ನೃತ್ಯದ ಮೂಲಕ ತಿಳಿಸಿದರೆ ಪರಿಣಾಮಕಾರಿಯಾಗಿರುತ್ತದೆ ಎಂಬುದನ್ನರಿತ ಸ್ನೇಹಜೀವಿ ಈ ಕವಿತೆಯಲ್ಲಿ ಮಕ್ಕಳಿಗೆ ಹಣ್ಣುಗಳನ್ನು ಪರಿಚಯಮಾಡಿಕೊಳ್ಳುವುದರ ಜೊತೆಗೆ ಪ್ರತಿ ಹಣ್ಣಿಗೂ ಒಂದೊಂದು ಸದ್ಗುಣಗಳ (ಸಹಬಾಳ್ವೆ, ಕಿತ್ತಾಡದಂತೆ, ಮಾನವೀಯತೆ, ಅಸೂಯೆ ಪಡದೆ) ಹೆಸರು ನೀಡಿ ಸಹಬಾಳ್ವೆಯಿಂದ ಹೇಗೆ ಇರಬೇಕು ಎಂಬುದನ್ನು ತುಂಬಾ ಸೊಗಸಾಗಿ ಚಿತ್ರಿಸಿದ್ದಾರೆ.
ಪ್ರಸ್ತುತ ಸಾಮಾಜಿಕ ವಾತಾವರಣ ಗಮನಿಸದರೆ, ಇಂದಿನ ಮಕ್ಕಳಿಗೆ ಮಾನವೀಯತೆ,ಸಹಬಾಳ್ವೆ ನೀತಿ ಪಾಠ ಅತ್ಯಂತ ಅವಶ್ಯಕವಾಗಿ ಬೇಕಾಗಿದೆ. ಆದ್ದರಿಂದ ಸಮುದ್ರವಳ್ಳಿ ವಾಸು ಅವರ ಈ ಶಿಶುಗೀತೆಯನ್ನು *ಪಠ್ಯ ಪುಸ್ತಕದಲ್ಲಿ* *ಅಳವಡಿಸಿದರೆ ತುಂಬಾ* *ಸೂಕ್ತವಾಗಿರುತ್ತದೆ* ಎಂಬುದು ನನ್ನ ಅಭಿಪ್ರಾಯವಾಗಿದೆ.
*ನಮ್ಮ ಮನೆಯ ಪಾಪು*
ನಮ್ಮ ಮನೆಯ ಪುಟ್ಟ ಪಾಪು
ನಗುವಿನಲೆಯ ಇರುಳದೀಪ
ಯಾರ ಮ್ಯಾಲೆ ಇಲ್ಲ ಕೋಪ
ಬಿದಿಗೆ ಚಂದ್ರ ಇವಳ ರೂಪ
ಬಾಯಿಗಿಟ್ರೆ ಮೊಸರು ಕೆನೆ
ಮಾಡುತಾಳೆ ಕೆಸರು ಮನೆ
ಕುಡಿಯುವಾಗ ಆಕಳ ಹಾಲು
ನಾಯಿಗರ್ಧ ಖಚಿತ ಪಾಲು
ಅತ್ಯಂತ ಸುಂದರ ರೂಪಕಗಳಿಂದ ಕಟ್ಟಿದ ವಾಸುರವರ ಈ ಕವಿತೆ,ಕನ್ನಡ ಸಾರಸತ್ವ ಲೋಕಕ್ಕೆ ಬೆಟ್ಟದಷ್ಟು ಕಾಣಿಕೆ ನೀಡಿರುವ *ರಾಷ್ಟ್ರಕವಿ* *ಕುವೆಂಪುರವರ*
‘ *ನಮ್ಮ ಮನೆಯಲೊಂದು ಸಣ್ಣ* *ಪಾಪವಿರುವುದು*
*ಎತ್ತಿಕೊಳಲು ಹೋದರದಕೆ* *ಕೋಪ* *ಬರುವುದು* ‘…. ಎಂಬ ಈ ಕವಿತೆಯನ್ನು ನೆನಪಿಸುವಂತಿದೆ.
‘ *ಪ್ರತಿ ವ್ಯಕ್ತಿ ಸತ್ತಾಗ ಒಬ್ಬ ಕವಿ* *ಸಾಯುತ್ತಾನೆ* ‘ ಎಂಬ ಚೀನಾದವರ ಮಾತು ಬಹಳ ಅರ್ಥಪೂರ್ಣವಾಗಿದೆ. ಕಾರಣ ಹುಟ್ಟುವ ಪ್ರತಿಯೊಬ್ಬ ವ್ಯಕ್ತಿಯು ಕವಿಯಾಗಿರುತ್ತಾನೆ,ತನ್ನ ಕಣ್ಣೆದುರು ನಡೆಯುವ ಮನೆಯ ಒಳಗೂ ಹೊರಗೂ ನಡೆಯುವ ಸಂತಸದ ದೃಶ್ಯಗಳನ್ನು ಹಕ್ಕಿಯಂತೆ ಹಾರುತ್ತಾ ಸಂಭ್ರಮಿಸುತ್ತಾನೆ,ದುಃಖದ ಸನ್ನಿವೇಶಗಳಲ್ಲಿ ಮಮ್ಮಲ ಮರುಗಿ ಪಾತಾಳಕ್ಕೆ ಹೋದಂತೆ ಭಾವುಕನಾಗುತ್ತಾನೆ. ಈ ಅನುಭವ ಪ್ರತಿಯೊಬ್ಬ ವ್ಯಕ್ತಿಗೂ ಆಗಿರುತ್ತದೆ. ಅವರಲ್ಲಿ ಕೆಲವರು ಮಾತ್ರ ತಮ್ಮ ಭಾವನೆಗಳನ್ನು ‘ *ಅಕ್ಷರ* ‘ ಎಂಬ ಮುತ್ತಿನಿಂದ ಪೋಣಿಸಿ ‘ *ಕವಿತೆ* ‘ ಎಂಬ ಹಾರ ತಯಾರಿಸಿ ಕವಿಗಳಾಗುತ್ತಾರೆ.
ಕವಿ ಈ ಮೇಲಿನ ಕವಿತೆಯಲ್ಲಿ ತಮ್ಮ ಮನೆಯ ಪುಟ್ಟ ಪಾಪುವಿನ ತುಂಟಾಟವನ್ನು ಸೊಗಸಾದ ರೂಪಕಗಳನ್ನ ಬಳಸಿ ವರ್ಣಿಸಿರುವುದು ಕವಿಯ ಕಲ್ಪನೆಯ ಶಕ್ತಿಯನ್ನು ಎತ್ತಿಹಿಡಿಯುತ್ತಿದೆ.
*ಕಡಲ ತೀರದ ಭಾರ್ಗವ*
ಕಡಲ ತೀರದ ಭಾರ್ಗವ
ಜ್ಞಾನಪೀಠದ ಮಾರ್ಧವ
ಹತ್ತುಮುಖಗಳ ತೋರಿದವ
ಮತಪಂಥಗಳ ಸೇರದವ
ಚಿಗುರಿನ ಕನಸು ಕಟ್ಟಿದವ
ಮೂಕಜ್ಜಿಯಕನಸು ಮುಟ್ಡಿದವ
ಮಂಗನಮದುವೆ ಮಾಡಿದವ
ಹುಲಿರಾಯನ ಹುಡುಗಾಟ ನೋಡಿದವ
ಹೇಳಿರಿ ಇವರು ಯಾರಂತ
ಇವರೇ ಶಿವರಾಮಕಾರಂತ
ಕನ್ನಡ ನಾಡಿನ ಬೇರಂತ
ಸತ್ಯದ ಪಥದ ತೇರಂತ
‘ *ನಡೆದಾಡುವ* *ವಿಶ್ವಕೋಶ’ವೆಂದೇ* ಖ್ಯಾತನಾಮರಾಗಿದ್ದ ಯಾವುದೇ ವಿಶ್ವವಿದ್ಯಾಲಯದ ಪದವಿ ಪಡೆಯದಿದ್ದರೂ ಅಪಾರ ಜ್ಞಾನ ಸಂಪತ್ತನ್ನು ಹೊಂದಿ ಕನ್ನಡ ಸಾಹಿತ್ಯ ಲೋಕವನ್ನು ಅತ್ಯಂತ ಶ್ರೀಮಂತಗೊಳಿಸಿದ ‘ *ಕಡಲ* *ತೀರದ ಭಾರ್ಗವ’* ರಾದ *ಡಾ.ಶಿವರಾಂ ಕಾರಂತರ* ಬಗೆಗೆ ಕವಿ ಬರೆದಿರುವ ಮಕ್ಕಳ ಕವಿತೆ ಎಲ್ಲರ ಮೆಚ್ಚುಗೆ ಗಳಿಸಿದೆ ಎಂದರೆ ತಪ್ಪಾಗಲಾರದು. ಕಾರಂತರ ಕೃತಿಗಳ ಹೆಸರನ್ನು ಮಕ್ಕಳು ಸುಲಭವಾಗಿ ನೆನಪಿಟ್ಟುಕೊಳ್ಳುವಂತೆ ಈ ಕವಿತೆ ಸಹಾಯ ಮಾಡಿದೆ. ಮುಂದುವರೆದು *ವಿ.ಕೃ.ಗೋಕಾಕ್* ಅವರ ಬಗ್ಗೆ
‘ *ನವ್ಯಕಾವ್ಯದ ಹರಿಕಾರ*
*ಸವಣೂರಿನ ಈ ಸಾವುಕಾರ* *ಇಜ್ಜೋಡುವಿನ* *ಸರದಾರ*
*ಕನ್ನಡ ಕಾವ್ಯದ ಕಾವಲುಗಾರ”* ಎಂದು ವರ್ಣಿಸಿದ್ದಾರೆ. ಪ್ರಸಿದ್ಧ ನಾಟಕಕಾರ *ಗಿರೀಶ್* *ಕಾರ್ನಾಡರನ್ನು* ಕುರಿತು,
*’ ಅಂಜುಮಲ್ಲಿಗೆ ಹರಿಕಾರ*
*ನಾಗಮಂಡಲ ರಚನೆಕಾರ* ಎಂದು, ಕನ್ನಡಿಗರ ಪ್ರೀತಿಯ *ಬೇಂದ್ರೆ ತಾತಾನ* ಕುರಿತು,’ *ನಾಕುತಂತಿ ಮೀಟಿದಾತ*
*ನಾದಲೀಲೆಯ ಹರಿಸಿದಾತ* ‘ ಎಂದು,ಕುವೆಂಪು ನಮನ ಶೀರ್ಷಿಕೆಯಡಿ
” *ಮೌಢ್ಯತೆಯ ಸುಟ್ಟಪ್ಪ*
*ಜ್ಞಾನ ಪೀಠದ ಜುಟ್ಟಪ್ಪ*
*ಇವರೇ ಕುಪ್ಪಳ್ಳಿಯ ಪುಟ್ಟಪ್ಪ*
*ಮತ್ತೊಮ್ನೆ ಕರುನಾಡಿನಲ್ಲಿ* *ಹುಟ್ಟಪ್ಪ* ” ಎಂದು ಹಂಬಲಿಸುತ್ತಾ ಸಮುದ್ರವಳ್ಳಿ ವಾಸು ಅವರು ರಚಿಸಿರುವ ಶಿಶಿಗೀತೆಗಳು ನಿಜಕ್ಕೂ ಮನಸ್ಸಿಗೆ ಖುಷಿ ನೀಡುವುದರ ಜೊತೆಗೆ *ಕನ್ನಡ ಡಿಂಡಿಮ ಬಾರಿಸಿದವರನ್ನು* ಸ್ಮರಿಸುವ ಕಾರ್ಯ ಮಾಡಿರುವುದು ಅಭಿನಂದನಾರ್ಹವಾಗಿದೆ.
🌹 *ವ್ಯಾಕರಣವನು ಕಲಿಯೋಣ🌹*
” *ಸಂಧಿ ಎಂದರೆ ಏನಣ್ಣ*
ಸಂಧಿ ಎಂದರೆ ಸಂಡಿಗೆಯಲ್ಲ
ಕಾಲವು ವಿಳಂಬವಾಗದ ವರವು
ಪದಗಳ ಕೂಡಿಸಿ ಹೇಳುವ ತರವು
*ಲೇಖನ ಚಿಹ್ನೆ ಏನಣ್ಣ*
ಚಿಹ್ನೆ ಎಂದರೆ ಚಿಂತೆಯು ಅಲ್ಲ
ಓದುಗ ಹೃದಯವ ತಲುಪಲುಪಲೆಂಟು
ಲೇಖನಚಿಹ್ನೆ ಬಳಸುವುದುಂಟು ”
*ವ್ಯಾಕರಣ ಕೆಲ ಮಕ್ಕಳಿಗೆ ಕಗ್ಗಂಟಾಗಿದೆ* . ಈ ಕವಿತೆ ಬರೆಯುವ ಮೂಲಕ ಕಗ್ಗಂಟನ್ನು ಬಿಡಿಸುವ ಪ್ರಯತ್ನ ಶ್ರೀ ವಾಸುರವರು ಮಾಡಿರುವುದು ಶ್ಲಾಘನೀಯ. ಇವಷ್ಟೆಯಲ್ಲದೆ….ವಿಜ್ಞಾನ ಯಾಕೆ ಬೇಕಣ್ಣಾ,ಅಪ್ಪನ ಮ್ಯಾಲೆ ಮುನಿಸೇಕಪ್ಪ?,ಕಪ್ಪೆ,ಮೊಸಳೆ ಹೀಗೆ ಮಕ್ಕಳಿಗೆ ಇಷ್ಟವಾಗುವ ವಿವಿಧ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಮಕ್ಕಳು ನಲಿಯುವಂತೆ ಶಿಶುಗೀತೆಗಳನ್ನು ಮುತ್ತಿನಂತೆ ಪೋಣಿಸಿದ್ದಾರೆ.
ಕೆಲ ಕಡೆ ಪ್ರಾಸಗಳು ತುಂಬಾ ತ್ರಾಸಾಗಿ ಜೋಡಿಸಿದ್ದು ಕಾಣಿಸಿವೆಯಾದರೂ ಮಕ್ಕಳ ಹಿತದೃಷ್ಠಿಯಲ್ಲಿ ಅಷ್ಟಾಗಿ ಬೇಡವೆನಿಸಿಲ್ಲ ಎಂಬುದು ಕೂಡ ಅಷ್ಟೇ ಸತ್ಯವಾಗಿದೆ. ಇನ್ನೂ ಮಗ್ಗಿ ಕವನಗಳು ಭಿನ್ನವಾಗಿವೆ.
ಒಟ್ಟಾರೆಯಾಗಿ ” *ಕವಿತೆಗಳು ಪ್ರಾಸಪದಗಳ ಗುಚ್ಛವಷ್ಟೇ ಅಲ್ಲಾ; ಜ್ಞಾನವನ್ನು ಹಂಚುತ್ತವೆ”* ಎಂಬ ಮಾತನ್ನ ಸಮುದ್ರವಳ್ಳಿ ವಾಸು ಅವರ ಈ ‘ *ಉಂಡಾಡಿಗುಂಡ* ‘ ಕವನ ಸಂಕಲನದ ಶಿಶುಗೀತೆಗಳು ಸಾಬೀತು ಮಾಡಿವೆ ಎಂಬುದು ನನ್ನ ಅಂಬೋಣವಾಗಿದೆ. ಹೀಗೆ ಇನ್ನೂ ಹೆಚ್ಚೆಚ್ಚು ಕವನಸಂಕಲಗಳು ಕವಿಯಿಂದ ರಚನೆಯಾಗಿ ಕನ್ನಡಿಗರ ಮನೆ ಮಾತಾಗಲಿ ಎಂದು ಆಶಿಸುತ್ತಾ ನನ್ನ ಲೇಖನಿಗೆ ವಿರಾಮವನ್ನಿಡುತಿದ್ದೇನೆ.
✍️ ಡಿ.ಶಬ್ರಿನಾ ಮಹಮದ್ ಅಲಿ
ಶಿಕ್ಷಕಿ,ಚಳ್ಳಕೆರೆ, ಚಿತ್ರದುರ್ಗ ಜಿಲ್ಲೆ