ಮಾ.5 ರಂದು ಕುಡಿಯುವ ನೀರು ಯೋಜನೆಗೆ ಅಡಿಗಲ್ಲು – ದರ್ಶನಾಪುರ
50 ಕೋಟಿ ವೆಚ್ಚದ ಕಾಮಗಾರಿಗೆ ಸಚಿವ ಭೈರತಿ ಚಾಲನೆ
yadgiri, ಶಹಾಪುರಃ ನಗರ ಜನತೆಯ ಬಹು ದಿನಗಳ ಬೇಡಿಕೆಯಾಗಿದ್ದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಇದೇ ಮಾ. 5 ರಂದು ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ 50 ಕೋಟಿ ವೆಚ್ಚದ ಕಾಮಗಾರಿಗೆ ಅಡಿಗಲ್ಲು ಸಮಾರಂಭ ಜರುಗಲಿದ್ದು, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ನಗರದ ಶಾಸಕರ ಕಚೇರಿಯಲ್ಲಿ ಗುರುವಾರ ಕರೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.12 ರಂದು ಈ ಕಾರ್ಯಕ್ರಮ ನಿಗದಿಯಾಗಿತ್ತು, ಆದರೆ ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮ ಮುಂದೂಡಲಾಗಿತ್ತು. ಈಗ ಮಾ. 5 ರಂದು ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಚಾಲನೆ ದೊರೆಯಲಿದೆ ಎಂದು ಅವರು, ಕರ್ನಾಟಕ ರಾಜ್ಯ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜೂಗೌಡ, ರಾಯಚೂರ ಸಂಸದ ರಾಜಾ ಅಮರೇಶ್ವರ ನಾಯಕ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ಯೋಜನೆಯಿಂದ ನಗರಕ್ಕಿದ್ದ ನೀರಿನ ಅಭಾವ ಪರಿಹಾರವಾಗಲಿದೆ. ಶಾಶ್ವತವಾಗಿ ಕುಡಿಯುವ ನೀರು ದೊರೆಯಲಿದೆ. ಒಟ್ಟು 180 ಕೋಟಿಯ ಯೋಜನೆಯ ವೆಚ್ಚವಾಗಿದ್ದು, ಸದ್ಯ 50 ಕೋಟಿ ಬಿಡುಗಡೆಯಾಗಿದ್ದು, ಇನ್ನೂ 130 ಕೋಟಿ ಮುಂದಿನ ವರ್ಷ ಸರ್ಕಾರ ಅನುದಾನ ಕಲ್ಪಿಸಲಿದೆ. 8 ತಿಂಗಳಲ್ಲಿಯೇ ಈ ಕಾಮಗಾರಿ ಮುಗಿಯಲಿದ್ದು, ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮಾವಿನ ಕೆರೆ, ನಾಗರ ಕೆರೆಗೆ ನೀರು ತುಂಬುವದುಃ ನಗರದ ಮಾವಿನ ಕೆರೆ ಮತ್ತು ನಾಗರ ಕೆರೆಗೆ ನೀರು ತುಂಬುವ ಯೋಜನೆ ರೂಪಿಸಲಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 5 ಕೋಟಿ ಅನುದಾನ ಪಡೆಯಲಾಗಿದೆ. ಶೀಘ್ರದಲ್ಲಿ ಈ ಕಾಮಗಾರಿ ಆರಂಭಗೊಳ್ಳಲಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದ್ದು, ತಿಂಗಳಲ್ಲಿಯೇ ಕಾಮಗಾರಿ ಆರಂಭಿಸಲಾಗುವದು ಎಂದು ಶಾಸಕ ದರ್ಶನಾಪುರ ತಿಳಿಸಿದರು.
ಶಹಾಪುರ ಬೈಪಾಸ್ ರಸ್ತೆಃ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಈಗಾಗಲೇ ರಾಯಚೂರ ಸಂಸದರು ಕೇಂದ್ರ ಸಚಿವ ನಿತಿನ ಗಡ್ಕರಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಅಲ್ಲದೆ ಅವರು ಪತ್ರ ಬರೆದಿದ್ದು, ನಾನು ಸಹ ಪತ್ರದ ಮೂಲಕ ಮನವಿ ಮಾಡಿದ್ದೇನೆ.
ಅಲ್ಲದೆ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸಹ ಸಂಸದರು ಭೇಟಿ ಮಾಡಿ ಈ ಕುರಿತು ಸಮಾಲೋಚನೆ ಮಾಡಿದ್ದು, ಕೇಂದ್ರದಿಂದ ಈಗಾಗಲೇ ಗ್ರೀನ್ ಸಿಗ್ನಲ್ ದೊರೆತಿದೆ, ಅಲ್ಲದೆ 150 ಕೋಟಿ ವೆಚ್ಚ, ಭೂಸ್ವಾಧೀನಕ್ಕಾಗಿ ಮೀಸಲಿಡಲಾಗಿದೆ. ಮತ್ತೊಮ್ಮೆ ರಾಜ್ಯ ಸರ್ಕಾರದ ಗಮನಕ್ಕೆ ಸಂಸದರು ತರಲಿದ್ದಾರೆ ಎಂದು ವಿವರಿಸಿದರು.
ಡಿಗ್ರಿ ಕಾಲೇಜು ರಸ್ತೆಃ ನಗರದ ಡಿಗ್ರಿ ಕಾಲೇಜು ಪ್ರದೇಶದ ರಸ್ತೆ ಮತ್ತು ಆದರ್ಶ ವಿದ್ಯಾಲಯ ರಸ್ತೆ ಸುಧಾರಣೆಗೆ ನಗರೋತ್ಥಾನದಿಂದ ಅನುದಾನ ಮೀಸಲಿಡಲಾಗಿದ್ದು, ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವದು ಎಂದು ದರ್ಶನಾಪುರ ತಿಳಿಸಿದರು.ಹಿಜಾಬ್ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿಜಾಬ್ ಪ್ರಕರಣ ನ್ಯಾಯಾಲಯದಲ್ಲಿದ್ದು, ಅಂತಿಮವಾಗಿ ನ್ಯಾಯಾಲಯದ ಆದೇಶದಂತೆ ಎಲ್ಲರೂ ನಡೆದುಕೊಳ್ಳಬೇಕು. ಕೋಟ್ ತೀರ್ಪಿಗೆ ಎಲ್ಲರೂ ಬದ್ಧರಾಗಿರಬೇಕು. ಇನ್ನೂ ಶಿವಮೊಗ್ಗ ಕೊಲೆ ಪ್ರಕರಣ ಕುರಿತು ಕೇಳಿದ ಪ್ರಶ್ನೆಗೆ, ಅದರಲ್ಲಿ ಯಾವುದೇ ರಾಜಕೀಯವಿಲ್ಲ. ಈಗಾಗಲೇ ಆರೋಪಿಗಳನ್ನು ಸರ್ಕಾರ ಬಂಧಿಸಿದ್ದಾರೆ. ಕಾನೂನು ಕ್ರಮ ಕೈಗೊಳ್ಳುತ್ತಾರೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ರಾಜ್ಯ ಸರ್ಕಾರ ಹೆಚ್ಚಿನ ಕಾಳಜಿವಹಿಸಬೇಕು ಎಂದರು.