ದೇವಿ ಅನುಷ್ಠಾನದಿಂದ ಸಾವು ಗೆದ್ದು ಬರುತ್ತಾನಂತೆ ವಿಜಯಕುಮಾರ!
-ಮಲ್ಲಿಕಾರ್ಜುನ ಮುದನೂರ್
ಜನನ ಆಕಸ್ಮಿಕ, ಮರಣ ಖಚಿತ ಎಂಬುದು ಎಲ್ಲರಿಗೂ ಗೊತ್ತಿರುವ ಓಪನ್ ಸೀಕ್ರೇಟ್. ಆದರೂ, ಪ್ರತಿ ಮನುಷ್ಯನಲ್ಲೂ ಬದುಕು ಬಂಗಾರವಾಗಿಸುವ ಬಯಕೆ ಇದ್ದೇ ಇರುತ್ತದೆ. ಬದುಕೆಂಬ ಮಾಯೆಯ ಹಿಂದೆ ಬೀಳುವ ಮನುಷ್ಯ ಒಳ್ಳೆಯದನ್ನೂ ಮಾಡುತ್ತಾನೆ, ಕೆಟ್ಟದ್ದನ್ನೂ ಮಾಡುತ್ತಾನೆ. ಆದರೆ, ಸಾವೆಂಬುದು ಮಾತ್ರ ಒಳ್ಳೆಯವನಿಗೂ ಬಿಟ್ಟಿಲ್ಲ, ಕೆಟ್ಟವನಿಗೂ ಬಿಟ್ಟಿಲ್ಲ. ಸಾವಿನ ಮುಂದೆ ಎಲ್ಲರೂ ಸಮಾನರು.
ಭಂಡ ಮನುಷ್ಯ ಮಾತ್ರ ಸಾವೆಂಬ ಸಾವನ್ನೂ ಸಹ ತಡೆದು ನಿಲ್ಲಿಸಿ ಇರು ಬರ್ತೀನಿ ಅಂತ ಹೇಳುವ ವಿಫಲ ಯತ್ನಗಳನ್ನು ಮಾಡುತ್ತಲೇ ಇರುತ್ತಾನೆ. ಆದರೆ, ಸಾವನ್ನು ಗೆಲ್ಲಲು ಸಾಧ್ಯವೇ, ಜಗತ್ತಿನಲ್ಲಿ ಯಾರೊಬ್ಬರಾದರೂ ಸಾವನ್ನು ಗೆದ್ದಿದ್ದುಂಟೇ. ನೋ ಚಾನ್ಸ್..!
ಆದರೆ, ಕಲಬುರಗಿ ತಾಲೂಕಿನ ನಂದಿಕೂರ ಗ್ರಾಮದ ವಿಜಯಕುಮಾರ್ ಎಂಬ ಭೂಪನಿಗೆ ಮಾತ್ರ ಕೋಟನೂರಿನ ಕರಿಬಸ್ಸಮ್ಮ ದೇವಿ ಕನಸಲಿ ಬಂದು ಮೂರು ದಿನ ಅನುಷ್ಠಾನ ಮಾಡಬೇಕು. ಇಲ್ಲವಾದಲ್ಲಿ ನೀನು ಉಳಿಯುವುದಿಲ್ಲ ಅಂತ ಆಗ್ನೆ ಮಾಡಿದ್ದಾಳಂತೆ. ಪರಿಣಾಮ ಸಾವು ಗೆಲ್ಲಲು ವಿಜಯಕುಮಾರ್ ಕಲಬುರಗಿ ತಾಲೂಕಿನ ಕೋಟನೂರಿನಲ್ಲಿ ಭೂಮಿಯಲ್ಲಿ ತಗ್ಗು ತೋಡಿ ನಿನ್ನೆಯಿಂದ ಅನುಷ್ಠಾನಕ್ಕೆ ಕುಳಿತಿದ್ದಾನೆ. 5ಅಡಿ ಆಳದಲ್ಲಿ ಕುಳಿತಿರುವ ವಿಜಯಕುಮಾರನ ಸುತ್ತ ಬೇವಿನ ಸೊಪ್ಪು, ವಿಭೂತಿ, ಕುಂಕುಮ ಹಾಕಲಾಗಿದೆ. ನಾಳೆಗೆ ಮೂರು ದಿನಗಳು ಕಳೆಯಲಿದ್ದು ವಿಜಯಕುಮಾರನ ಅನುಷ್ಠಾನ ಮುಗಿಯಲಿದೆ.
ನಾಳೆ ಬೆಳಗ್ಗೆ 10ಗಂಟೆಗೆ ವಿಜಯಕುಮಾರನನ್ನು ಅನುಷ್ಠಾನದಿಂದ ಏಳಿಸಲು ಭಾರೀ ಸಿದ್ಧತೆ ನಡೆದಿದೆ. ಗ್ರಾಮದಲ್ಲಿ ಜನಜಾತ್ರೆಯೇ ಸೇರಲಿದ್ದು ವಿಜಯಕುಮಾರ್ ಸಾವುಗೆದ್ದ ಸಂಭ್ರಮ ಆಚರಿಸಲಿದ್ದಾನೆ ಎಂದು ತಿಳಿದು ಬಂದಿದೆ. ಈ ಅನುಷ್ಠಾನದ ಕಥೆ ಮುಂದೆ ಇನ್ಯಾವ ತಿರುವು ಪಡೆದುಕೊಳ್ಳಲಿದೆಯೋ ಆ ಕರಿಬಸ್ಸಮ್ಮ ದೇವಿಗೆ ಗೊತ್ತು…!