ಧರ್ಮಸ್ಥಳ ಸಂಸ್ಥೆ ಹೈಕ ಭಾಗದ ಆಶಾ ಕಿರಣಃ ಸುಬೇದಾರ
ಮಹಿಳೆಯರಲ್ಲಿ ಹೊಸ ಚೈತನ್ಯ ಮೂಡಿಸಿದ ಧರ್ಮಸ್ಥಳ ಸಂಸ್ಥೆ
ಯಾದಗಿರಿಃ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹೈದ್ರಾಬಾದ್ ಕರ್ನಾಟಕ ಭಾಗದ ಮಹಿಳೆಯರ ಆಶಾ ಕಿರಣವಾಗಿದೆ. ಉದ್ಯೋಗ ನೀಡುವ ಮೂಲಕ ಮಹಿಳೆಯರ ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸಿದೆ. ಬದುಕಿನ ದಾರಿಯೇ ಬದಲಾಯಿಸಿದೆ ಎಂದು ಮಾಜಿ ಜಿಪಂ ಸದಸ್ಯ ಬಸನಗೌಡ ಸುಬೇದಾರ ಹೇಳಿದರು.
ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆವತಿಯಿಂದ ನಡೆದ ಹೈನುಗಾರಿಕೆ ಮತ್ತು ಸ್ವಉದ್ಯೋಗ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಸ್ವಾವಲಂಬಿ ಬದುಕಿಗೆ ಆಸರೆಯಾದ ಧರ್ಮಸ್ಥಳ ಸಂಸ್ಥೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಕೆಲಸವಿಲ್ಲದೆ ಬದುಕಿನ ಭರವಸೆ ಕಳೆದುಕೊಂಡಿದ್ದ ಅನೇಕ ಕುಟುಂಬಗಳಿಗೆ ಆಸರೆಯಾಗಿದೆ. ಕರಕುಶಲ, ಕೈಗಾರಿಕೆ ಸೇರಿದಂತೆ ಹೈನುಗಾರಿಕೆ ಇತರೆ ಮಹಿಳೆಯರ ಕೆಲಸಗಳಿಗೆ ಸೂಕ್ತ ತರಬೇತಿ ನೀಡಿ, ವ್ಯಾಪಾರ ವಹಿವಾಟು ಮಾಡಲು ಪ್ರೋತ್ಸಾಹ ಧನ ನೀಡುತ್ತಿದೆ. ಸಂಸ್ಥೆಯ ಯೋಜನೆಗಳ ಸದುಪಯೋಗ ಪಡೆಯಬೇಕು. ನಿರುದ್ಯೋಗಿಗಳಿಗೆ ಸಂಸ್ಥೆ ಸದವಕಾಶ ಕಲ್ಪಿಸಿದ್ದು, ರಾಜ್ಯದ ಗ್ರಾಮೀಣ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ.
ಸಂಸ್ಥೆಯ ಕೌಶಲ್ಯ ಅಭಿವೃದ್ಧಿ ಯೋಜನೆ ಮಾದರಿಯಲ್ಲಿ ಕೇಂದ್ರ ಸರ್ಕಾರ ಗ್ರಾಮೀಣ ಅಭೀವೃದ್ಧಿಗೆ ನೂತನ ಯೋಜನೆ ರೂಪಿಸಿರುವುದು ಸಂಸ್ಥೆಯ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು. ಯೋಜನಾಧಿಕಾರಿ ಮೋಹನ ಕೆ. ಯೋಜನೆಯ ಉದ್ದೇಶ ಮತ್ತು ಕ್ಷೇತ್ರದ ಹಿನ್ನೆಲೆ ಬಗ್ಗೆ ಸವಿವರವಾಗಿ ತಿಳಿಸಿದರು. ಪಶು ಸಂಗೋಪನ ಇಲಾಖೆ ಅಧಿಕಾರಿ ಡಾ.ವಿಜಯಕುಮಾರ ಹೈನುಗಾರಿಕೆಯ ಲಾಭ ಕುರಿತು ಮಾಹಿತಿ ನೀಡಿದರು.
ಸಮಾಜ ಸೇವಕಿ ಸರಸ್ವತಿ ಬಿರಾದಾರ ಮಹಿಳೆಯ ಸ್ವಾವಲಂಬನೆ ಬಗ್ಗೆ ಮಾತನಾಡಿದರು. ಲಕ್ಷ್ಮೀಕಾಂತ ಕುಲಕರ್ಣಿ ಸೋಲಾರ ಅಳವಡಿಕೆ ಕುರಿತು ಮಾಹಿತಿ ನೀಡಿದರು. ಗ್ರಾಪಂ ಅಧ್ಯಕ್ಷ ಮಾನಪ್ಪ ವಠಾರ ಅಧ್ಯಕ್ಷತೆವಹಿಸಿದ್ದರು. ಗ್ರಾಮ ಮುಖಂಡರಾದ ಸಿದ್ದನಗೌಡ ಸುಬೇದಾರ, ಭೀಮರಾಯ ಸೇರಿ ಉಪಸ್ಥಿತರಿದ್ದರು.
ಕೃಷಿ ಅಧಿಕಾರಿ ಪ್ರಕಾಶ ಜಿ. ನಿರೂಪಿಸಿದರು. ವಲಯ ಮೇಲ್ವಿಚಾರ ಮಲ್ಲಿಕಾರ್ಜನ ಸ್ವಾಗತಿಸಿದರು. ಗ್ರಾಮದ ಸೇವಾ ಪ್ರತಿನಿಧಿಗಳಾದ ಶಿಲ್ಪಾ, ಶ್ರೀದೇವಿ, ಸೇರಿದಂತೆ ಗ್ರಾಮದ ಮಹಿಳೆಯರು ಇತರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.