ಕಥೆ

ಜ್ಞಾನ ಮನುಷ್ಯನ ಅಮೂಲ್ಯ ಸಿರಿ

ಜ್ಞಾನ ಮನುಷ್ಯನ ಅಮೂಲ್ಯ ಸಿರಿ

ಜ್ಞಾನವು ಅಮೂಲ್ಯ ಸಿರಿ. ಅದರಿಂದ ಜೀವನದಲ್ಲಿ ಸುಖ, ಶಾಂತಿ. ವಿಕಾಸವಾದ ಸಿದ್ಧಾಂತದ ಪ್ರಕಾರ ಕಾಲ ಕಾಲಕ್ಕೆ ಮಾನವನ ದೇಹವಷ್ಟೇ ವಿಕಾಸವಾಗಲಿಲ್ಲ. ಅದರೊಂದಿಗೆ ಜ್ಞಾನವೂ ವಿಕಾಸವಾಯಿತು.ತನು, ಮನ, ಬುದ್ಧಿ ಇವು ನಮ್ಮಲ್ಲಿರುವ ಜ್ಞಾನ ಸಾಧನಗಳು. ಅವುಗಳನ್ನು ನಾವು ಲೌಕಿಕ ಸಿರಿ ಸಂಪದದ ಗಳಿಕೆಗಾಗಿ ಬಳಸುತ್ತೇವೆ.

ಹಗಲು ರಾತ್ರಿ ಪ್ರಾಪಂಚಿಕ ಸುಖಕ್ಕಾಗಿಯೇ ದುಡಿಯುತ್ತೇವೆ. ಆದರೆ ಮಹಾತ್ಮರು ಸತ್ಯದ ಸಂಶೋಧನೆಗಾಗಿ ಹಗಲು ರಾತ್ರಿ ಶ್ರಮಿಸುತ್ತಾರೆ. ಅವರ ಪರಿಶ್ರಮದಿಂದ ಪ್ರಪಂಚವೇ ಸಂಪದ್ಭರಿತವಾಯಿತು.

ಮೇಡಂ ಕ್ಯೂರಿ ಮಹಾವಿಜ್ಞಾನಿ. ಆದರೆ ಮೈತುಂಬ ಬಟ್ಟೆ, ಹೊಟ್ಟೆ ತುಂಬ ಊಟವೂ ಒಮ್ಮೊಮ್ಮೆ ಇರುತ್ತಿರಲಿಲ್ಲ. ಅಂಥ ಬಡತನದಲ್ಲಿಯೇ ಅವಳು ಅದೆಷ್ಟು ನಿಷ್ಠೆಯಿಂದ ಸತ್ಯದ ಸಂಶೋಧನೆಗೆ ತೊಡಗಿದಳು! ಅದರಿಂದ ಅವರ ಮನೆತನಕ್ಕೆ ಐದು ನೊಬೆಲ್‌ ಪಾರಿತೋಷಕ, ಪುರಸ್ಕಾರಗಳು ದೊರೆತವು. ಅವಳಿಗೆ ಎರಡು, ಗಂಡನಿಗೆ ಒಂದು, ಮಗಳಿಗೆ ಒಂದು, ಅಳಿಯನಿಗೂ ಒಂದು.

ಬಹುಶಃ ಪ್ರಪಂಚದಲ್ಲಿಯೇ ಇದೊಂದು ಅಪರೂಪದ ಘಟನೆ. ಒಂದು ದಿನ ಹಿರಿಯ ಪತ್ರಕರ್ತರು ಅವಳನ್ನು ಕಾಣಲು ಬಂದರು. ಮೇರಿ ತನ್ನ ಮನೆಯ ಮುಂದಿನ ಕೈತೋಟದಲ್ಲಿ ಕಳೆ ತೆಗೆಯುತ್ತ ಕುಳಿತಿದ್ದಳು. ‘ಮೇಡಂ ಕ್ಯೂರಿ ಎಲ್ಲಿ?’ ಎಂದು ಆ ಪತ್ರಕರ್ತರು ಕ್ಯೂರಿಗೆ ಕೇಳಿದರು. ‘ಕ್ಯೂರಿ ಮನೆಯ ಒಳಗಿಲ್ಲ.

ನೀವು ಬಂದರೆ ನಿಮಗೆ ಸಂದೇಶ ಕೊಡಲು ಹೇಳಿದ್ದಾಳೆ’ ಎಂದು ಒಂದು ಸಂದೇಶ ಬರೆದುಕೊಟ್ಟಳು. ‘ವ್ಯಕ್ತಿಗಿಂತ ವಿಶ್ವದಲ್ಲಿ ಆಸಕ್ತಿ ತಾಳಿರಿ’ ಎಂಬುದೇ ಅವಳ ಸಂದೇಶವಾಗಿತ್ತು !

ನಮ್ಮೊಳಗಿರುವ ಅಂತರಾತ್ಮನಿಗೆ ಸಾಕ್ಷಿಯಾಗಿ ನಾವು ಈ ಪ್ರಪಂಚದಲ್ಲಿ ಬದುಕಬೇಕೆಂದು ಅನುಭಾವಿ ಕವಿ ಸರ್ಪಭೂಷಣ ಶಿವಯೋಗಿಗಳು ತಮ್ಮ ಪದ್ಯದಲ್ಲಿ ಹೇಳುತ್ತಾರೆ. ‘ಮನಕಂಜಿ ನಡೆಯದೆ ಜನಕಂಜಿ ನಡೆದರೆ, ಮನದಾಣ್ಮ ಗುರುಸಿದ್ಧ ಮರೆಯಾಗುವನಲ್ಲ’ ನಾವು ಒಳ್ಳೆಯವರು ಹೌದೋ ಅಲ್ಲವೋ ಎನ್ನುವುದು ನಮ್ಮ ಒಳ ಧ್ವನಿ ಅಥವಾ ವಿವೇಕ ಧ್ವನಿ ಹೇಳಬೇಕು ವಿನಃ ಅನ್ಯ ಜನರಲ್ಲ. ಜನರು ನಮಗೆ ಕೊಡುವ ಪ್ರಶಸ್ತಿಗಳು ಸತ್ಯದ ಒರೆಗಲ್ಲು ಹೇಗಾಗುತ್ತವೆ?

ಚೀನಾದೇಶದ ಬೌದ್ಧ ಧರ್ಮದ ಝೆನ್‌ ಗುರುಗಳ ಹತ್ತಿರ ಒಬ್ಬ ಶಿಷ್ಯನು ನಿರ್ವಾಣ ದೀಕ್ಷೆಯನ್ನು ಪಡೆಯಲು ಬಂದ. ನಿರ್ವಾಣವೆಂದರೆ ಪರಮಸತ್ಯ ಪರಮಾತ್ಮನನ್ನು ಅರಿಯುವುದು. ಅದಕ್ಕೆ ಅವರು ತಾವೋ ಎನ್ನುತ್ತಾರೆ. (ತದೇವ ತಾವೋ) ಆ ಶಿಷ್ಯನನ್ನು ಕರೆದು ಗುರುಗಳು ‘ಆ ಹೂದೋಟದಲ್ಲಿ ಏನೇನಿದೆ ನೋಡಿ ಬಾ’ ಎಂದು ಹೇಳಿದರು.

ಶಿಷ್ಯನು ತೋಟಕ್ಕೆ ಹೋಗಿ ಬಂದು ‘ಅಲ್ಲಿ ಹೂವುಗಳಿವೆ’ ಎಂದು ಹೇಳಿದ. ನಾಲ್ಕೈದು ಸಲ ಕಳುಹಿಸಿದರು ‘ಅಲ್ಲಿ ಹೂ ಬಿಟ್ಟು ಬೇರೆ ಏನೂ ಇಲ್ಲ’ ಎಂದು ಹೇಳಿದ. ಆಗ ಗುರುಗಳು ಹೇಳಿದರು- ‘ಆ ಹೂವುಗಳನ್ನು ತೋರಿದ ಬೆಳಕು ಅಲ್ಲಿ ಇರಲಿಲ್ಲವೇ?’ ಈ ಮಾತನ್ನು ಕೇಳಿದ ಶಿಷ್ಯ ‘ಹೌದು ಗುರುಗಳೇ ಎಂದು ತಲೆ ತಗ್ಗಿಸಿ ನಿಂತಿದ್ದ.’

‘ಎಲ್ಲೆಡೆಯಲ್ಲಿರುವ ಬೆಳಕನ್ನೇ ಕಾಣುವ ಕಣ್ಣಿಲ್ಲದ ನಿನಗೆ ಆ ಮಹಾ ಬೆಳಗು ತಾವೋ ಹೇಗೆ ಕಾಣುತ್ತದೆ?’ ಎಂದು ಗುರುಗಳು ಹೇಳಿದಾಗ ಶಿಷ್ಯನ ತಲೆಯಲ್ಲಿ ನಿರ್ವಾಣದ ನಿಜ ಬೆಳಕು ತುಂಬಿಕೊಂಡಿತ್ತು.

ನಾವು ನಮ್ಮ ಮನೆ, ಮಠದಲ್ಲಿರುವ ವಸ್ತು ಒಡವೆಗಳನ್ನೆಲ್ಲ ನೋಡುತ್ತೇವೆ. ಆದರೆ ಆ ಎಲ್ಲ ವಸ್ತುಗಳಿಗೆ ಆಶ್ರಯವಾಗಿರುವ ಆಕಾಶವನ್ನೇ ನೋಡುವುದಿಲ್ಲ. ಆಕಾಶದಂತೆ ಈ ಪ್ರಪಂಚಕ್ಕೆ ಪರಮಾಶ್ರಯವಾಗಿ ಎಲ್ಲಕಡೆಗೆ ವ್ಯಾಪಿಸಿರುವವವೇ ಪರಮಸತ್ಯ ಪರಮಾತ್ಮ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button