ದುಃಖ ಪೀಡಿತರಿಗೆ ತಕ್ಷಣವೇ ನೆರವಾಗಿ..
ದುಃಖ ಪೀಡಿತರಿಗೆ ತಕ್ಷಣವೇ ನೆರವಾಗಿ
ಈ ಪ್ರಪಂಚದಲ್ಲಿ ಅನೇಕ ಮಂದಿ ಕಷ್ಟ-ದುಃಖ-ತಾಪತ್ರಯಗಳಲ್ಲಿ ಸಿಲುಕಿ ಒದ್ದಾಡುತ್ತಿರುತ್ತಾರೆ. ದಯಾಳುಗಳಾದ ಸಜ್ಜನರು ಇದನ್ನು ಕಂಡೊಡನೆ ನೆರವಿಗೆ ಧಾವಿಸುತ್ತಾರೆ. ದುಃಖ ಪೀಡಿತರಲ್ಲಿ ಮೇಲು ಕೀಳು ಎಂಬ ಭಾವ ಬೇಕಾಗಿಲ್ಲ. ಯಾರೇ ಇರಲಿ, ತಕ್ಷ ಣ ನೆರವಿಗೆ ಸಿದ್ಧರಾಗುವುದು ಸಜ್ಜನರ ಲಕ್ಷ ಣ. ಅಂಥ ಸಂತರೊಬ್ಬರ ಆದರ್ಶ ಅನುಕರಣೀಯವಾಗಿದೆ.
ಗುಜರಾತ್ ರಾಜ್ಯದ ಭಾವ ನಗರದಲ್ಲಿ ಬಾಬಾ ಮಸ್ತರಾಮ್-ಎಂಬ ಓರ್ವ ಮಹಾನ್ ಸಂತರಿದ್ದರು. ತ್ಯಾಗ-ತಪಸ್ಸುಗಳ ಆದರ್ಶ ಸನ್ಯಾಸಿಯಾಗಿದ್ದ ಅವರು ಸದಾ ಭಗವಂತನ ಧ್ಯಾನದಲ್ಲಿ ಮಗ್ನರಾಗಿರುತ್ತಿದ್ದರು.
ಇಷ್ಟು ಮಾತ್ರವಲ್ಲದೆ ನೊಂದ ಬಡಜನರ ಸೇವೆಗೆ ಧಾವಿಸುತ್ತಿದ್ದರು ಹಾಗೂ ತಮ್ಮ ಶಿಷ್ಯರಿಗೆ ಸದಾ ಉಪದೇಶ ನೀಡುತ್ತಿದ್ದರು- ”ಪರೋಪಕಾರ ಮತ್ತು ಸೇವೆಗಿಂತ ಮಿಗಿಲಾದ ಧರ್ಮವಿಲ್ಲ,”ಒಮ್ಮೆ ಚಳಿಗಾಲದಲ್ಲಿ ಭೀಕರ ಚಳಿಯಲ್ಲೂ ಅವರು ಆಶ್ರಮದ ಹೊರಗೆ ತೆರೆದ ಮೈದಾನದಲ್ಲಿ ರಾತ್ರಿವೇಳೆ ಮಲಗಿದ್ದರು.
ಆಗ ಭಾವ ನಗರದ ಮಹಾರಾಜರು ಕುದುರೆ ಗಾಡಿಯಲ್ಲಿ ಹೋಗುತ್ತಿದ್ದಾಗ ಇದನ್ನು ಕಂಡು ”ಛೆ ಪಾಪ! ಈ ಚಳಿಗೆ ಸಂತರ ಮೈಮೇಲೆ ಒಂದು ಉಣ್ಣೆಯ ಶಾಲು ಅಗತ್ಯ,”- ಎಂದು ಭಾವಿಸಿ, ತನ್ನ ಅಮೂಲ್ಯ ಶಾಲನ್ನು ಹೊದೆಸಿ ಮುನ್ನಡೆದರು.
ತುಸು ಹೊತ್ತಿನ ಬಳಿಕ ಎಚ್ಚರಾದಾಗ, ಶಿಷ್ಯನು ‘ಅದು ಮಹಾರಾಜರು ಹೊದೆಸಿದ ಶಾಲು,’-ಎಂದಾಗ ಸಂತರು ಅಂದರು- ”ನನ್ನಂಥ ಸನ್ಯಾಸಿಗೇಕೆ ಉಣ್ಣೆ ಶಾಲು? ನನಗೆ ಚಳಿ ಸಹಿಸಿ ಅಭ್ಯಾಸವಿದೆ.
ಪಾಪ, ಯಾರಾದರೂ ಬಡವರಿಗೆ ಇದರ ಬಳಕೆ ಅಗತ್ಯ,”ಸಂತರು ಮುಂದೆ ನಡೆದಾಗ ಕಡು-ಚಳಿಗೆ ನಡುಗುತ್ತಿದ್ದ ಒಂದು ಬಡಕಲು ನಾಯಿಯನ್ನು ಕಂಡರು. ತಕ್ಷ ಣ ತಮ್ಮ ಶಾಲನ್ನು ತೆರೆದು ಆ ನಾಯಿಯ ಬೆನ್ನು ಮತ್ತು ಹೊಟ್ಟೆ ಭಾಗವನ್ನು ಮುಚ್ಚುವಂತೆ ಶಾಲನ್ನು ಸುತ್ತಿದರು.
ತಕ್ಷ ಣ ನಾಯಿ ಕೃತಜ್ಞತೆಯಿಂದ ಬಾಲವನ್ನಾಡಿಸುತ್ತಾ, ಸಂತರ ಪಾದಗಳ ಬಳಿ ಪವಡಿಸಿತು. ಸಂತರು ಶಿಷ್ಯರನ್ನು ಸಂಬೋಧಿಸಿ ನುಡಿದರು-
”ಶಿಷ್ಯರೇ, ಈ ಪ್ರಪಂಚದ ಎಲ್ಲ ಜೀವಿಗಳೂ ಭಗವಂತನ ಕೃಪೆಗೆ ಅರ್ಹರು. ಮೇಲು ಕೀಳೆನ್ನದೆ ನೆರವಾಗುವುದು ತಮ್ಮ ಕರ್ತವ್ಯ,” ಅಂದಾಗ ಶಿಷ್ಯರು ತಲೆದೂಗಿದರು.ಇಲ್ಲಿ ಇಡೀ ಮಾನವ ಜನಾಂಗಕ್ಕೇ ಒಂದು ಅರ್ಥಪೂರ್ಣ ಸಂದೇಶವಿದೆ.
ಈ ಜಗತ್ತಿನ ದುಃಖಪೀಡಿತರನ್ನು ಕಂಡಾಗ ಜಾತಿ-ಮತ, ಮೇಲು-ಕೀಳು ಎಂಬುದನ್ನು ಪರಿಗಣಿಸದೆ ತಕ್ಷ ಣವೇ ನೆರವಾಗುವುದು ನಮ್ಮ ಪರಮಧರ್ಮವಾಗಿದೆ. ಇದನ್ನು ನಾವು ಸದಾ ನೆನಪಿಡಬೇಕು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882