
ಸದ್ಭಾವ
ಒಂದು ಮನೆಯಲ್ಲಿ ಇಬ್ಬರು ಅಣ್ಣ ತಮ್ಮಂದಿರರು ಇದ್ದರು. ಇಬ್ಬರೂ ಶಾಲೆಗೆ ಹೋಗುತ್ತಿದ್ದರು. ತಮ್ಮನು ವಿದ್ಯೆಯಲ್ಲಿ ಬಹಳ ಮುಂದೆ, ಅಣ್ಣನು ಸ್ವಲ್ಪ ಹಿಂದೆ. ಆದರೆ ತಮ್ಮನನ್ನು ಬಹಳ ಪ್ರೀತಿಸುತ್ತಿದ್ದ. ತಮ್ಮನ್ನು ಮಾತ್ರ ಅಣ್ಣನನ್ನು ದಡ್ಡನೆಂದು ತಿರಸ್ಕರಿಸುತ್ತಿದ್ದ. ಅವನೊಂದಿಗೆ ಶಾಲೆಗೂ ಹೋಗಲು ಹಿಂಜರಿಯುತ್ತಿದ್ದ. ಪುಸ್ತಕದ ಹೊರೆ ಮಾತ್ರ ಅಣ್ಣನಿಗೆ ಹೊರಿಸುತ್ತಿದ್ದ. ತಾಯಿ ತಂದೆ ಕೂಡ ಸಣ್ಣ ಮಗನನ್ನೇ ಜನರಿಗೆ ಪರಿಚಯಿಸಿ ಪುರಸ್ಕರಿಸುತ್ತಿದ್ದರು. ಹಿರಿಯನನ್ನು ಬೈದು ಬಿಡುತ್ತಿದ್ದರು.
ಒಂದು ದಿನ ಶಾಲೆಯಲ್ಲಿ ಪರೀಕ್ಷೆಯ ಪರಿಣಾಮ ತಿಳಿಯುವುದಿತ್ತು. ತಾಯಿ ತಂದೆ ಇಬ್ಬರು ಮಕ್ಕಳಿಗೂ, ಪರಿಣಾಮ ತಿಳಿದುಕೊಂಡು, ಸಿಹಿ ತರಲು ಹಣವನ್ನು ಕೊಟ್ಟು ಕಳಿಸಿದರು. ಆಣ್ಣ ತಮ್ಮಂದಿರರು ಪರಿಣಾಮ ಫಲಕ ನೋಡಿದರು. ತಮ್ಮನು ಮಾತ್ರ ಪಾಸಾಗಿದ್ದ. ತಕ್ಷಣವೇ ತಮ್ಮ ಮನೆಗೆ ಓಡಿದ. ಅಣ್ಣ ಅನುತ್ತೀರ್ಣನಾಗಿದ್ದು ತಾನು ಮಾತ್ರ ಪಾಸಾಗಿದ್ದು ಹೇಳಿ ಕುಣಿದಾಡಿದ.
ಅಣ್ಣ ಮಾತ್ರ ತಾನು ನಪಾಸಾಗಿದ್ದರೂ ತಮ್ಮನು ಪಾಸಾಗಿದ್ದಕ್ಕೆ ಸಿಹಿ ಹಂಚುತ್ತ ಬರುತ್ತಿದ್ದ. ತಾಯಿ ತಂದೆ ಬಂಧು ಬಳಗದವರೆಲ್ಲರು ಕೇಳಿದರು ಸಿಹಿ ಹಂಚುತ್ತಿರುವಿಯಲ್ಲ. ನೀನೂ ಪಾಸಾಗಿರುವಿ ಏನು ? ಅಣ್ಣ ಹೇಳಿದ “ಇಲ್ಲ ನನ್ನ ತಮ್ಮ ಉತ್ತೀರ್ಣನಾಗಿದ್ದಾನೆ!” ಜನರು ಈತ ಹುಚ್ಚನೆಂದು ನಗುತ್ತಿದ್ದರು.
ಆತ ಮಾತ್ರ ಸಿಹಿ ಹಂಚುತ್ತಲೇ ಇದ್ದ. ಜೀವನದಲ್ಲಿ ತಾನು ಯಶಸ್ವಿಯಾದಾಗ ಸಿಹಿ ಹಂಚಿ ಸಂತಸ ಪಡುವುದು ಜಾಣತನ. ಅನ್ಯರು ಯಶಸ್ವಿಯಾದಾಗ ಸಿಹಿ ಹಂಚಿ ಸಂತಸಪಡುವುದು ಹೃದಯವಂತಿಕೆ. ಅದು ಮಧುರ ಹೃದಯದ ಸಂಕೇತ. ನೈಜವಾದ ಪ್ರೀತಿ. ಅದು ಸದ್ಭಾವನೆಯ ಪ್ರತೀಕ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.