ಕಥೆ

ಭಗವಂತನ “ಬಂಗಾರದ ಮಳೆ” ಅದ್ಭುತ ಕಥೆ ಓದಿ

ನೀತಿ ಕಥೆ ಓದಿ ಉತ್ತಮ ಬದುಕು ಕಟ್ಟಿಕೊಳ್ಳಿ.!

 

ಬಂಗಾರದ ಮಳೆ

ಇದೊಂದು ಬಹಳ ಪುರಾತನ ಕಥೆ. ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದನು. ಅವನ ಮನೆ ಭವ್ಯವಾದ ಮೂರು ಅಂತಸ್ತಿನ ಅರಮನೆಯಾಗಿತ್ತು. ಇವನಿಗೆ ದೇವರು ಎಲ್ಲಾ ಭಾಗ್ಯಗಳನ್ನು ಕೊಟ್ಟಿದ್ದ. ಇಷ್ಟಾದರೂ ದುರಾಸೆ ಅವನಿಗೆ ಬಿಟ್ಟರಲಿಲ್ಲ. ಸದಾಕಾಲ ಹಣಕ್ಕಾಗಿ ಹಾತೊರೆಯುತಿದ್ದ. ಅವನ ಅರಮನೆ ಎದರು ಒಂದು ಗುಡಿಸಲು. ಅಲ್ಲೊಂದು ಚಿಕ್ಕ ಕುಟುಂಬ ಗಂಡಾ ಹೆಂಡತಿ ಮಗು ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದರು.

ಹೀಗಿರುವಾಗ ಒಂದು ದಿನ ಶ್ರೀಮಂತ ತನ್ನ ಹೆಂಡತಿ ಜೊತೆಗೆ ಅರಮನೆ ಮಹಡಿಯ ಮೇಲೆ ಕುಳಿತು ತಾಂಬುಲ ಸೇವಿಸುತ್ತಾ ಕುಳಿತಿರುವಾಗ, ದೇವರು ತನ್ನ ಹೆಂಡತಿ ಜೊತೆಗೆ ಆಕಾಶ ಮಾರ್ಗದಲ್ಲಿ ಪುಷ್ಟಕ ವಿಮಾನದಲ್ಲಿ ಹೋಗುತ್ತಿದ್ದ.

ಹೆಂಡತಿ ಭಗವಂತನನ್ನು ಕುರಿತು “ಏನು ಸ್ವಾಮಿ ನಿಮ್ಮ ಸೃಷ್ಟಿಯಲ್ಲಿ ಏಕೀ ತಾರತಮ್ಯ, ಒಬ್ಬನದು ಗಗನ ಚುಂಬಿತ ಸೌಧ, ಅದರ ಮುಂದಿನದು ಹಳೆಯ ಗುಡಿಸಲು ಅವನೂ ಮನುಷ್ಯನೇ ಅಲ್ಲವೇ?” ಎಂದಳು. ಆಗ ಭಗವಂತ “ದೇವೀ ಏಕೆ ಚಿಂತೆ ಮಾಡುತ್ತಿ? ನಾಳೆ ಅವನ ಮನೆ ಮೇಲೆ ಬಂಗಾರದ ಮಳೆ ಸುರಿಸುತ್ತೇನೆ ಸಂತೋಷವೆ?’ ಎಂದನು.

ಇದನ್ನು ಶ್ರೀಮಂತನು ಕೇಳಿಸಿಕೊಂಡನು, ಸರಿ ಮಾರನೆಯ ದಿನ ಬೆಳಿಗ್ಗೆ ಗುಡಿಸಲಿನ ಒಡೆಯರನ್ನು ಕರೆಸಿ, “ನಿನ್ನ ಗುಡಿಸಲು ನನಗೆ ಕೊಟ್ಟು ಬಿಡು” ಎಂದನು. ಪಾಪ ಬಡವ ‘ನನ್ನ ಗುಡಿಸಲಾ! ಇಂತಹ ಭವ್ಯ ಭವನ ಇಟ್ಟುಕೊಂಡು ಈ ಗುಡಿಸಲು ನಿಮಗೆ ಏತಕ್ಕೆ ಸ್ವಾಮಿ? ಎಂದನು.

ಆಗ ಶ್ರೀಮಂತ “ಅದೆಲ್ಲಾ ಬೇಡ, ನಿನಗೆ ಹತ್ತು ಸಾವಿರ ವರಹ ಕೊಡುತ್ತೇನೆ. ತೆಗೆದುಕೊಂಡು ಎಲ್ಲಿಯಾದರೂ ಹೋ’ ಎಂದನು. ಹತ್ತು ಸಾವಿರ ವರಹ ನೂರು ವರಹವೂ ಬೆಲೆ ಬಾಳದ ಈ ಗುಡಿಸಲಿಗೆ ಎಂದುಕೊಂಡ ಬಡವ ‘ಸರಿ ಕೊಡಿ ಸ್ವಾಮಿ’ ಎಂದು ಹೇಳಿ ಹಣ ಪಡೆದು ದೂರದ ನೆಂಟರ ಊರು ಸೇರಿಕೊಂಡ.

ಮಾರನೆಯ ದಿನ ರಾತ್ರಿಯಾಯಿತು. ಬಂಗಾರದ ಮಳೆ ಬರಲಿಲ್ಲ. ಮಹಡಿಯ ಮೇಲೆ ಕುಳಿತು ಬಂಗಾರದ ಮಳೆಗಾಗಿ ಕಾಯುತ್ತಿದ್ದ. ಆಗ ಹಿಂದಿನ ದಿನದಂತೆ ಭಗವಂತ ಹೆಂಡತಿಯೊಡನೆ ಅದೇ ದಾರಿಯಲ್ಲಿ ಬಂದನು. ಪತ್ನಿ ‘ಎಲ್ಲಿ ಸ್ವಾಮಿ ಬಂಗಾರದ ಮಳೆ? ಗುಡಿಸಲು ಹಾಗೆ ಇದೆ” ಎಂದು ಕೇಳಿದಳು.

ಆಗ ಭಗವಂತ “ಅಯ್ಯೋ ಹುಚ್ಚಿ ಬಂಗಾರದ ಮಳೆ ಎಂದರೆ ಗುಡಿಸಲ ಮೇಲೆ ಬಂಗಾರ ಬೀಳುತ್ತದೆ ಎಂದಲ್ಲ. ಗುಡಿಸಲಿನ ಬಡಜೀವಿಗೆ ಬಂಗಾರ ಕೊಡಿಸಿ ಶ್ರೀಮಂತನನ್ನಾಗಿ ಮಾಡಿದ್ದೇನೆ” ಎಂದನು. ಶ್ರೀಮಂತ “ಅಯ್ಯೋ ಕೆಟ್ಟೆ, ಹತ್ತು ಸಾವಿರ ವರಹ ಹೋಯಿತು” ಎಂದು ಅಳಲು ಆರಂಭಿಸಿದ.

ನೀತಿ :– ದೈವ ಸಂಕಲ್ಪವಾದರೆ ಬಡವ ಬಲ್ಲಿದನಾಗುತ್ತಾನೆ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button