ಶಾಪ ಕೊಡುವವನೂ ಅವನೇ, ಶಕ್ತಿ ಕೊಡುವವನೂ ಅವನೇ..
ಶಾಪ ಕೊಡುವವನೂ ಅವನೇ, ಶಕ್ತಿ ಕೊಡುವವನೂ ಅವನೇ..
ಆಸಕ್ತಿ ಹುಟ್ಟಿಸುವ ಶೀರ್ಷಿಕೆ ಅಲ್ಲವೇ? ಶಾಪ ಕೊಡುವವನೂ, ಶಕ್ತಿ ಕೊಡುವವನೂ, ಎರಡೂ ಅವನೇ ಎಂದರೆ ಕೊಂಚ ಆಸಕ್ತಿ ಹುಟ್ಟುತ್ತದಲ್ಲವೇ? ಹಾಗಿದ್ದರೆ ಆ ಅವನು ಯಾರು ಎಂದು ತಿಳಿದುಕೊಳ್ಳಬೇಕಾದರೆ ಇಲ್ಲಿರುವ ಪ್ರಸಂಗವನ್ನು ಓದಬೇಕು. ಸುಡು ಬಿಸಿಲಿನ ಒಂದು ಮಧ್ಯಾಹ್ನ. ಶ್ರೀಮಂತರ ಮನೆಗಳೇ ಇದ್ದ ಬಡಾವಣೆಯ ಮುಖ್ಯರಸ್ತೆಯಲ್ಲಿ ಒಂದು ಹುಡುಗಿ ಐಸ್ಕ್ರೀಮ್, ಐಸ್ಕ್ರೀಮ್ ಎಂದು ಕೂಗುತ್ತ ಐಸ್ಕ್ರೀಮ್ ಮಾರುತ್ತಾ ಬರುತ್ತಿದ್ದಳು.
ಅಂದು ಆಕೆಗೆ ಬೆಳಿಗ್ಗೆಯಿಂದ ಇನ್ನೂ ವ್ಯಾಪಾರದ ಬೋಣಿಯೇ ಆಗಿರಲಿಲ್ಲ. ಅವಳೇ ಮನೆ ಮನೆಯ ಬಾಗಿಲು ತಟ್ಟಿ ಅಮ್ಮಾ, ಐಸ್ಕ್ರೀಮ್ ತೆಗೆದುಕೊಳ್ಳಿ ಎಂದು ಕೂಗುತ್ತಿದ್ದಳು. ಯಾವ ಮನೆಯವರೂ ಬಾಗಿಲು ತೆಗೆಯುತ್ತಿರಲಿಲ್ಲ. ಕೊನೆಗೆ ಒಂದು ಮನೆಯ ಯಜಮಾನತಿ ಬಾಗಿಲು ತೆಗೆದು ಮಧ್ಯಾಹ್ನದ ಸುಡುಬಿಸಿಲಿನಲ್ಲಿ ಏನಮ್ಮಾ ನಿಂದು ಗಲಾಟೆ? ಎಂದು ಕೇಳಿದರು. ಆ ಹುಡುಗಿ ಅಮ್ಮಾ, ಬೆಳಿಗ್ಗೆಯಿಂದ ಐಸ್ಕ್ರೀಮ್ ಮಾರುತ್ತಿದ್ದೇನೆ. ಇನ್ನೂ ಬೋಣಿಯೇ ಆಗಿಲ್ಲ. ಒಂದಾದರೂ ಐಸ್ಕ್ರೀಮ್ ತೆಗೆದುಕೊಳ್ಳ ಎಂದು ಬೇಡಿಕೊಂಡಳು. ಅದಕ್ಕೆ ಮನೆಯೊಡತಿ ಬೇಡಮ್ಮಾ, ನಾನು ಐಸ್ಕ್ರೀಮ್ ತಿನ್ನುವುದಿಲ್ಲ.
ಡಯೆಟ್ ಮಾಡುತ್ತಿದ್ದೇನೆ. ನಮ್ಮನೆಯಲ್ಲಿ ಯಾರೂ ಮಕ್ಕಳಿಲ್ಲ. ಐಸ್ಕ್ರೀಮ್ ಬೇಡಮ್ಮ ಎಂದರು. ಹುಡುಗಿ ಅಮ್ಮಾ, ನಮ್ಮ ಕಂಪನಿಯವರು ಒಂದು ಹೊಸ ರುಚಿಯ ಐಸ್ಕ್ರೀಮ್ ಬಿಟ್ಟಿದ್ದಾರೆ. ಅದರ ಪ್ರಚಾರಕ್ಕಾಗಿ ಒಂದು ಸ್ಕೀಮ್ ತಂದಿದ್ದಾರೆ. ಒಂದು ಫ್ಯಾಮಿಲಿ ಪ್ಯಾಕ್ ಐಸ್ಕ್ರೀಮ್ ತೆಗೆದುಕೊಂಡರೆ ಮತ್ತೊಂದು ಪ್ಯಾಕ್ ಉಚಿತವಾಗಿ ಸಿಗುತ್ತದೆ. ದಯವಿಟ್ಟು ತೆಗೆದುಕೊಳ್ಳಿ ಅಮ್ಮಾ ಎಂದು ಬೇಡಿದಳು. ಎಷ್ಟು ಶ್ರೀಮಂತಿಕೆ ಇದ್ದರೇನು? ಉಚಿತ ಎಂಬ ಪದ ಕೇಳಿದರೆ ಯಾರ ಕಿವಿ ನೆಟ್ಟಗಾಗುವುದಿಲ್ಲ? ಆ ಮನೆಯೊಡತಿಗೂ ಹಾಗೇ ಆಗಿರಬೇಕು. ಆಕೆ ಅಲ್ಲಮ್ಮಾ ನಾನು ಒಂದು ಕಪ್ ಐಸ್ಕ್ರೀಮನ್ನೇ ತಿನ್ನಲಾರೆ.
ಇನ್ನು ಎರಡು ಫ್ಯಾಮಿಲಿ ಪ್ಯಾಕ್ ಐಸ್ಕ್ರೀಮ್ ತೆಗೆದುಕೊಂಡು ನಾನೇನು ಮಾಡಲಿ? ಅಷ್ಟೊಂದು ಐಸ್ಕ್ರೀಮ್ ತಿನ್ನುವವರನ್ನು ಎಲ್ಲಿಂದ ಕರೆತರಲಿ? ಎಂದರು. ಹುಡುಗಿಯು ಅಮ್ಮಾ, ನೀವು ಮೊದಲು ಐಸ್ಕ್ರೀಮ್ ತೆಗೆದುಕೊಂಡು ನೋಡಿ. ಯಾರು ತಿನ್ನುತ್ತಾರೆ ನ್ನುವುದನ್ನು ನಾನು ತೋರಿಸುತ್ತೇನೆ ಎಂದಳು. ಆ ಮನೆಯೊಡತಿಗೆ ನಗುವೂ ಬಂದಿತು. ಕುತೂಹಲವೂ ಉಂಟಾಯಿತು. ಮನೆ ಯೊಡತಿ ಆಯ್ತಮ್ಮಾ ಎಂದು ಹೇಳಿ ಹಣವನ್ನು ಕೊಟ್ಟರು.
ಎರಡು ಫ್ಯಾಮಿಲಿ ಪ್ಯಾಕ್ ಐಸ್ಕ್ರೀಮ್ ಕೊಂಡುಕೊಂಡರು. ಈಗ ಇದನ್ನು ಯಾರು ತಿನ್ನುತ್ತಾರೆ? ತೋರಿಸು ನೋಡೋಣ’ ಎಂದರು. ಹುಡುಗಿಯು ಅಮ್ಮಾ, ಅದನ್ನಿಲ್ಲಿ ಕೊಡಿ ಎಂದು ಅವರ ಕೈಯ್ಯಿಂದ ಎರಡೂ ಐಸ್ಕ್ರೀಮ್ ಫ್ಯಾಮಿಲಿ ಪ್ಯಾಕುಗಳನ್ನು ತೆಗೆದುಕೊಂಡಳು. ಅಲ್ಲಿಯೆ ನೆಲದ ಮೇಲೆ ಕುಳಿತಳು. ಐಸ್ಕ್ರೀಮನ್ನು ಗಬಗಬನೆ ತಿನ್ನಲಾರಂಭಿಸಿದಳು. ಅವಳು ತಿನ್ನುವುದನ್ನು ಮನೆಯೊಡತಿ ಕಣ್ಣರಳಿಸಿ ನೋಡುತ್ತಲೇ ಇದ್ದರು.
ಹುಡುಗಿಯು ಪೂರ್ತಿ ತಿಂದು ಮುಗಿಸಿದ ನಂತರ ಅಲ್ಲ ಕಣೇ ಹುಡುಗಿ. ನಾನು ಒಂದು ಕಪ್ ಐಸ್ಕ್ರೀಮನ್ನೂ ತಿನ್ನಲಾರೆ. ನೀನು ಪೂರ್ತಿ ಎರಡು ಫ್ಯಾಮಿಲಿ ಪ್ಯಾಕ್ ಐಸ್ಕ್ರೀಮುಗಳನ್ನು ತಿಂದು ಮುಗಿಸಿಬಿಟ್ಟೆಯಲ್ಲ! ನಿನಗೆ ಇಂತಹ ಶಕ್ತಿಯನ್ನು ದೇವರು ಹೇಗೆ ಕೊಟ್ಟ? ಎಂದರು. ಆಕೆ ಅಮ್ಮಾ, ನಾನು ನಿನ್ನೆ ಬೆಳಿಗ್ಗೆಯಿಂದ ಸರಿಯಾಗಿ ಊಟವನ್ನೇ ಮಾಡಿರಲಿಲ್ಲ. ನೀವು ಹೇಳುವ ಆ ದೇವರು ಎಲ್ಲಿದ್ದಾನೋ ನನಗೆ ಗೊತ್ತಿಲ್ಲ. ಆದರೆ ಇಷ್ಟಂತೂ ನಿಜ! ನನಗೆ ಎರಡು ದಿವಸಗಳ ಉಪವಾಸದ ಶಾಪ ಕೊಟ್ಟವನೂ ಅವನೇ! ಇಂದು ಎರಡು ಪ್ಯಾಕ್ ಐಸ್ಕ್ರೀಮ್ ತಿನ್ನುವ ಶಕ್ತಿಯನ್ನು ಕೊಟ್ಟವನೂ ಅವನೇ! ಎಂದಳು.
ಮನೆಯೊಡತಿಗೆ ಆಕೆಯ ಮಾತುಗಳನ್ನು ಕೇಳಿ ಏನು ಹೇಳಲೂ ತೋಚಲಿಲ್ಲ. ಸುಮ್ಮನೆ ಆಕೆಯನ್ನೇ ನೋಡುತ್ತಾ ನಿಂತಿದ್ದರು. ನಾವೂ ಅಷ್ಟೇ ಅಲ್ಲವೇ? ದೇವರನ್ನು ಸಾಕ್ಷಾತ್ತಾಗಿ ನೋಡಿಲ್ಲದೆ ಇರಬಹುದು. ಆದರೆ ಎರಡೆರಡು ಹೊತ್ತು ಉಪವಾಸ ಇರುವವ ರನ್ನೂ, ಎರಡೆರಡು ಹೊತ್ತಿನ ಊಟವನ್ನು ಒಮ್ಮೆಲೇ ಮುಗಿಸುವವರನ್ನೂ ನೋಡಿದ್ದೇವಲ್ಲವೇ? ಅದು ಶಾಪವೋ, ಶಕ್ತಿಯೋ ಎಂಬುದನ್ನು ತೀರ್ಮಾನಿಸುವುದು ನಮ್ಮ ಕೈಯಲ್ಲಿದೆಯೇ? ಆ ದೇವರಿಗೆ ನಮಸ್ಕರಿಸುವುದೂ, ಆ ಜನರಿಗೆ ಶುಭ ಹಾರೈಸುವುದೂ ನಮ್ಮ ಕೈಯಲ್ಲಿದೆಯಲ್ಲವೇ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882