ಭೂಮಿ ಮೇಲೆ ಯಾರು ಸುಖಿಗಳು.? ಈ ಅದ್ಭುತ ಕಥೆ ಓದಿ
ಭೂಮಿ ಮೇಲೆ ಯಾರು ಸುಖಿಗಳು.?
ಕಂಪಲಾಪುರ ಎಂಬ ರಾಜ್ಯವನ್ನು ಚಂದ್ರಸೇನ ಎಂಬ ರಾಜ ಆಳುತ್ತಿದ್ದ. ಅವನ ರಾಜ್ಯದಲ್ಲಿ ಸುಖ-ಶಾಂತಿ ನೆಲೆಸಿತ್ತು. ಆದರೆ, ರಾಜಾ ಚಂದ್ರಸೇನನಿಗೆ ಮಾತ್ರ ಸುಖ- ಶಾಂತಿ ಎಂಬುದೇ ಇರಲಿಲ್ಲ. ಆ ಕುರಿತು ರಾಜಗುರುಗಳ ಸಲಹೆ ಕೇಳಿದಾಗ, ಅವರು “ರಾಜ್ಯದ ಹೊರವಲಯದಲ್ಲಿ ವನದ ಹತ್ತಿರ ಗಿಡಮೊಂದರ ಕೆಳಗೆ ಓರ್ವ ಸನ್ಯಾಸಿ ಇದ್ದಾನೆ. ಅವನು ನಿಮ್ಮ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡಬಹುದು’ ಎಂದರು.
ಅದರಂತೆ ರಾಜ ಕುದುರೆಯನ್ನೇರಿ, ಸನ್ಯಾಸಿಯನ್ನು ಹುಡುಕಿಕೊಂಡು ಹೋದ. ರಾಜಗುರು ಹೇಳಿದ್ದ ಜಾಗದಲ್ಲಿಯೇ ಸನ್ಯಾಸಿ ಬಿಡಾರ ಹೂಡಿದ್ದ. ಸನ್ಯಾಸಿಯನ್ನು ಕಾಣುತ್ತಲೇ ರಾಜಾ ಚಂದ್ರಸೇನ “ಮಹಾತ್ಮರೇ, ನಾನು ಈ ದೇಶದ ರಾಜ. ನನ್ನ ಬಳಿ ಧನ-ಕನಕಾದಿ ಸಂಪತ್ತು, ಅರಮನೆ, ಆಳುಕಾಳು ಎಲ್ಲವೂ ಇದೆ.
ಆದರೆ ಸುಖ ಮಾತ್ರ ಇಲ್ಲ. ನಿದ್ದೆಯೂ ಬರುತ್ತಿಲ್ಲ. ಸುಖವನ್ನು ಪಡೆಯಲು ಏನಾದರೂ ಉಪಾಯ ಹೇಳಿ’ ಎಂದು ಬೇಡಿಕೊಂಡನು.
ಕ್ಷಣಹೊತ್ತು ಸುಮ್ಮನಿದ್ದ ಸನ್ಯಾಸಿ ರಾಜನ ಮುಖವನ್ನೇ ದಿಟ್ಟಿಸುತ್ತಾ ಗಂಭೀರವಾಗಿ ಹೇಳಿದನು, “ಯಾರಾದರೂ ಸುಖವಾಗಿರುವ ವ್ಯಕ್ತಿಯು ಹಾಕಿಕೊಂಡಿರುವ ಅಂಗಿಯನ್ನು ಹಾಕಿಕೊಂಡರೆ ಸುಖ ಶಾಂತಿ ದೊರಕುತ್ತದೆ.
ಸನ್ಯಾಸಿಗೆ ನಮಸ್ಕರಿಸಿದ ರಾಜ ಒಡನೆಯೇ ಸುಖದ ಅಂಗಿಯನ್ನು ಹುಡುಕುತ್ತಾ ಹೊರಟನು. ದಾರಿಯಲ್ಲಿ ಮೊದಲು ಸಂಗೀತಗಾರನೊಬ್ಬ ಸಿಕ್ಕಿದ “ನೀವು ಸುಖವಾಗಿದ್ದೀರ? ಇದ್ದರೆ ನಿಮ್ಮ ಅಂಗಿಯೊಂದನ್ನು ಕೊಡಿ…’ ಎಂದು ಕೇಳಿದ ರಾಜ.
ಆದಕ್ಕಾತ “ನಾನು ಸುಖವಾಗಿಯೇನೋ ಇದ್ದೇನೆ. ಆದರೆ, ನನಗೆ ಇಲ್ಲಿಯವರೆಗೆ ಯಾವ ಪ್ರಶಸ್ತಿಯೂ ಸಿಕ್ಕಿಲ್ಲ ಎಂಬುದೊಂದೇ ಚಿಂತೆ’ ಎಂದ ಸಂಗೀತಗಾರ.
ರಾಜ ಮುಂದೆ ನಡೆದ. ಒಬ್ಬ ಸಾಹುಕಾರ ಸಿಕ್ಕಿದ. ಅವನು “ನಾನು ಸುಖವಾಗಿಯೇನೋ ಇದ್ದೇನೆ… ಆದರೆ, ನೂರು ಕೋಟಿ ರೂಪಾಯಿಗೆ ಐದು ಲಕ್ಷ ಕಮ್ಮಿ ಇದೆ. ಅದೊಂದೇ ಚಿಂತೆ.’ ಎಂದ. ಕವಿಯೊಬ್ಬ “ನನಗೆ ಒಂದು ಚೆಂದದ ಮನೆಯಿಲ್ಲ. ಅಲ್ಲದೆ ನನ್ನ ಎದುರಾಳಿ ನನಗೆ ರಾಜಾಶ್ರಯ ತಪ್ಪಿಸಿದ್ದಾನೆ’ ಎಂದ.
ಹೀಗೆ ದಾರಿಯಲ್ಲಿ ಸಿಕ್ಕ ಪ್ರತಿಯೊಬ್ಬರೂ ಒಂದಿಲ್ಲೊಂದು ಸಂಕಷ್ಟ ತೋಡಿಕೊಂಡರು. ರಾಜನಿಗೆ ಸುಖದ ಅಂಗಿಯನ್ನು ದಯಪಾಲಿಸುವವರು ಸಿಕ್ಕದೆ ಬೇಸರವಾಯಿತು. ತಿರುಗಿ ತಿರುಗಿ ಬೇಸತ್ತು ಕೊನೆಗೆ ರಾಜ ಮರಳಿ ಸನ್ಯಾಸಿಯ ಬಳಿಗೆ ಬಂದ. ಬೆಳಗ್ಗಿನಿಂದ ನಡೆದುದೆಲ್ಲವನ್ನೂ ವಿವರಿಸಿ “ಸುಖೀಗಳು ಒಬ್ಬರೂ ಸಿಗಲಿಲ್ಲ’ ಎಂದ. ಇದನ್ನೆಲ್ಲ ಮೌನವಾಗಿ ಕೇಳಿಸಿಕೊಂಡ ಸನ್ಯಾಸಿ ನಗುತ್ತಾ ನುಡಿದ “ರಾಜ, ಸುಖ ಎಂಬುದು ಹೊರಗಡೆ ಎಲ್ಲೂ ಇಲ್ಲ, ಅದು ನಮ್ಮ ಒಳಗೇ ಇದೆ.
ಸುಖವೆಂದು ಭಾವಿಸಿದರೆ ಸುಖ; ದುಃಖವೆಂದು ಭಾವಿಸಿದರೆ ದುಃಖ’. ಸನ್ಯಾಸಿಯ ಈ ಎರಡು ಮಾತಿನಿಂದಲೇ ರಾಜನ ಮನಸ್ಸು ಹಗುರಾಯಿತು. ಸನ್ಯಾಸಿಗೆ ವಂದಿಸಿ, “ನಾನೀಗ ಸುಖೀ’ ಎನ್ನುತ್ತಾ ಸಂತೋಷದಿಂದ ಅರಮನೆಯತ್ತ ಕುದುರೆ ಓಡಿಸಿದ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882