ಏನಾದರೂ ಬಿಟ್ಟು ಹೋಗಿದ್ದಾರೆಯೇ.? ಈ ಮೂರು ಸಂಗತಿ ಓದಿ
ದಿನಕ್ಕೊಂದು ಕಥೆ
ಏನಾದರೂ ಬಿಟ್ಟು ಹೋಗಿದ್ದಾರೆಯೇ?
ವಿಚಿತ್ರವೆನಿಸಬಹುದಾದ ಮೇಲಿನ ಶೀರ್ಷಿಕೆಯು ಮೂರು ಘಟನೆಗಳ ನೆನಪು ಮಾಡಿಸುತ್ತದೆ. ಮೂರೂ ಘಟನೆಗಳಲ್ಲಿನ ಪ್ರಶ್ನೆ ಒಂದೇ! ಉತ್ತರ ಮಾತ್ರ ಬೇರೆ-ಬೇರೆ! ಮೊದಲು ಘಟನೆಗಳನ್ನು ನೋಡೋಣ.
ಮೊದಲನೆಯದ್ದು: ಅಮೆರಿಕದ ನಗರ ಸಾರಿಗೆಯ ಬಸ್ಸನ್ನು ಮಹಿಳೆಯೊಬ್ಬರು ಹತ್ತಿದರು. ಚಾಲಕನನ್ನು ಬಸ್ ತಡವಾಗಿ ಏಕೆ ಬಂದಿತೆಂದು ಗದರಿದರು. ಚಾಲಕ ನಸುನಕ್ಕು ಸುಮ್ಮನಾದರು.
ಮಹಿಳೆ ಬಸ್ಸಿನಲ್ಲಿ ಖಾಲಿಯಿದ್ದ ಸೀಟೊಂದರಲ್ಲಿ ಕುಳಿತುಕೊಳ್ಳುತ್ತಾ ಪಕ್ಕದಲ್ಲಿದ್ದ ಒಬ್ಬ ಅಜ್ಜಿಯನ್ನು ‘ಬಸ್ಸಿನಲ್ಲಿರುವ ಜನರಿಂದ ದುರ್ವಾಸನೆ ತುಂಬಿದೆ. ಹೇಸಿಗೆಯಾಗುತ್ತದೆ. ಈ ಜನ ಎಷ್ಟು ಗಟ್ಟಿಯಾಗಿ ಮಾತನಾಡುತ್ತಿದ್ದಾರೆ? ತಲೆ ಚಿಟ್ಟು ಹಿಡಿಯುತ್ತದೆ.
ಅದಿರಲಿ, ಮುದಿವಯಸ್ಸಿನಲ್ಲಿ ನಿಮಗೆ ಸುತ್ತಾಡುವ ಚಟವೇ? ಮನೆಯಲ್ಲಿ ಕುಳಿತಿರಬಾರದೆ?’… ಎನ್ನುತ್ತಾ ಏನೇನೋ ಮಾತನಾಡಿದರು.
ಅಜ್ಜಿ ಮುಜುಗರಗೊಳ್ಳುತ್ತಲೇ ‘ಏನು ಮಾಡಲಿ ಮೇಡಂ, ನನ್ನ ಮಗಳು ಆಸ್ಪತ್ರೆಯಲ್ಲಿದ್ದಾಳೆ. ಅವಳನ್ನು ನೋಡಲು ಹೋಗುತ್ತಿದ್ದೇನೆ. ಅದಕ್ಕಾಾಗಿ ಬಸ್ ಪ್ರಯಾಣ’ ಎಂದರು. ಆದರೂ ಮಹಿಳೆ ಬಸ್ಸಿನಲ್ಲಿ, ಪ್ರಯಾಣಿಕರಲ್ಲಿ ತಪ್ಪುಗಳನ್ನು ಹುಡುಕುತ್ತಲೇ ಕಿರುಚಾಡುತ್ತಿದ್ದರು.
ಆಕೆ ಇಳಿಯಬೇಕಾದ ಸ್ಟಾಪ್ ಬಂದಿತು. ಆಕೆ ಇಳಿಯುವಾಗಲೂ ಚಾಲಕನನ್ನು ಕುರಿತು ‘ನೀವು ಓಡಿಸುತ್ತಿರುವುದು ಬಸ್ಸೋ ಅಥವಾ ಕುದುರೆ ಗಾಡಿಯೋ? ನಿಮ್ಮ ನಿಧಾನ ಗತಿ ಅಸಮಾಧಾನವನ್ನುಂಟು ಮಾಡುತ್ತದೆ’ ಎಂದು ಹೇಳುತ್ತಿದ್ದರು.
ಆಗ ಚಾಲಕ ‘ಮೇಡಂ, ನೀವು ಬಸ್ಸಿನಿಂದಿಳಿದು ಹೋಗುತ್ತಿದ್ದೀರಿ. ಆದರೆ ಏನನ್ನೋ ಬಿಟ್ಟು ಹೋಗುತ್ತಿದ್ದೀರಿ’ ಎಂದರು. ಮಹಿಳೆ ಆಶ್ಚರ್ಯಗೊಂಡರು. ತಮ್ಮ ದೊಡ್ಡ ಕೈಚೀಲವನ್ನು ಮುಟ್ಟಿ ನೋಡಿಕೊಂಡರು. ಆಕೆ ‘ನಾನು ಏನನ್ನೂ ಬಿಟ್ಟು ಹೋಗುತ್ತಿಲ್ಲವಲ್ಲಾ! ನಾನು ಏನನ್ನು ಬಿಟ್ಟು ಹೋಗುತ್ತಿದ್ದೇನೆ?’ ಎಂದು ಕೇಳಿದರು.
ಆಗ ಬಸ್ ಚಾಲಕರು ನಗುನಗುತ್ತಲೇ ‘ಕೆಟ್ಟ ಅನುಭವ’! ಎಂದರು. ಮಹಿಳೆ ಮುಖ ಗಂಟಿಕ್ಕಿಕೊಂಡು ಹೋದರು.
ಎರಡನೆಯ ಘಟನೆ: ಒಂದು ಹೋಟೆಲ್ಲಿಗೆ ವಯೋವೃದ್ಧ ಅಪ್ಪ ಮತ್ತು ಅವರ ಮಧ್ಯ ವಯಸ್ಸಿನ ಮಗ ಬಂದರು. ಮಗನೇ ಒಳ್ಳೆಯ ಮೇಜು-ಕುರ್ಚಿ ಹುಡುಕಿ ತಂದೆಯವರನ್ನು ಕೂರಿಸಿದರು. ತಂದೆಯವರು ಹೇಳಿದ ತಿಂಡಿ-ತಿನಿಸುಗಳನ್ನೇ ತರಿಸಿದರು. ಅದನ್ನು ತಿನ್ನಲು ತಂದೆಗೆ ಸಹಾಯ ಮಾಡಿದರು.
ಊಟ ಮುಗಿದ ನಂತರ ತಂದೆಯವರನ್ನು ಕೈಹಿಡಿದು ಎಬ್ಬಿಸಿ ನಿಧಾನವಾಗಿ ಹೊರಕ್ಕೆ ಕರೆದುಕೊಂಡು ಹೋದರು. ಆಗ ಹೋಟೆಲ್ಲಿನಲ್ಲಿ ಕುಳಿತಿದ್ದ ಹಿರಿಯ ಗ್ರಾಹಕರೊಬ್ಬರು ಬಂದು ಮಗನಿಗೆ ‘ನೀವು ಏನೋ ಬಿಟ್ಟು ಹೋಗುತ್ತಿದ್ದೀರಿ’ ಎಂದರು.
ಮಗ ಆಶ್ಚರ್ಯದಿಂದ ‘ಏನು ಬಿಟ್ಟು ಹೋಗುತ್ತಿದ್ದೇನೆ?’ ಎಂದು ಕೇಳಿದಾಗ ಹಿರಿಯರು ‘ಮಕ್ಕಳಿಗೆಲ್ಲಾ ಒಳ್ಳೆಯ ಪಾಠವನ್ನು ಬಿಟ್ಟು ಹೋಗುತ್ತಿದ್ದೀರಿ!’ ಎಂದರಂತೆ.
ಮೂರನೆಯ ಘಟನೆ: ಒಬ್ಬ ತಂದೆ ಸತ್ತು ಹೋದರು. ಅವರ ಮಗನಿಗೆ ಸಾಂತ್ವನ ಹೇಳಲು ಅವರ ಸ್ನೇಹಿತರು ಬಂದರು. ಸಂದರ್ಭೋಚಿತವಾದ ಮಾತುಗಳನ್ನಾಡಿದರು. ಆನಂತರ ‘ನಿಮ್ಮ ತಂದೆ ಏನಾದರೂ ಬಿಟ್ಟು ಹೋಗಿದ್ದಾರೆಯೇ?’ ಎಂದು ಕೇಳಿದರು. ಮಗ ‘ಏನನ್ನೂ ಬಿಟ್ಟು ಹೋಗಿಲ್ಲ’ ಎಂದರು.
ಆಗ ಸ್ನೇಹಿತರು ‘ಅವರು ಬದುಕಿನಲ್ಲಿ ಬಹಳಷ್ಟು ಹಣವನ್ನು ಗಳಿಸಿದ್ದರಂತೆ?’ ಎಂದು ಕೇಳಿದರು. ಮಗ ‘ನಿಮ್ಮ ಮಾತು ನಿಜ. ಆದರೆ ನಮ್ಮ ತಂದೆ ಹಣ ಗಳಿಸುವ ಅವಸರದಲ್ಲಿ ಆರೋಗ್ಯ ಕಳೆದುಕೊಂಡರು. ಕೊನೆಗೆ ಆರೋಗ್ಯವನ್ನು ಮರಳಿ ಗಳಿಸಲು ಹಣವನ್ನೆಲ್ಲಾ ಕಳೆದುಕೊಂಡರು. ಆದರೂ ಸತ್ತು ಹೋದರು.
ಹಾಗಾಗಿ ಅವರು ಏನನ್ನೂ ಬಿಟ್ಟು ಹೋಗಿಲ್ಲ’ ಎಂದರಂತೆ.
ಮೊದಲ ಎರಡು ಘಟನೆಗಳನ್ನು ಅಂತರ್ಜಾಲದಲ್ಲಿ ಯಾರೋ ಪುಣ್ಯಾತ್ಮರು ಹಾಕಿದ್ದುದನ್ನು ಓದಿದ್ದು. ಮೂರನೆಯ ಘಟನೆಯನ್ನು ಹಿರಿಯ ವಿದ್ವಾಂಸರಾದ ಡಾ.ಗೊ.ರು.ಚನ್ನಬಸಪ್ಪನವರ ಉಪನ್ಯಾಸವೊಂದರಲ್ಲಿ ಕೇಳಿದ್ದು. ಅವರೆಲ್ಲರಿಗೂ ಪ್ರಣಾಮಗಳು.
ನಮ್ಮೆಲ್ಲರ ಬದುಕೂ ಒಂದು ರೀತಿಯ ಬಸ್ ಪ್ರಯಾಣವೇ ಅಲ್ಲವೇ? ನಾವು ನಮ್ಮ ಬದುಕಿನ ಬಸ್ಸಿನಿಂದಿಳಿದು ಹೋಗುವಾಗ ಏನಾದರೂ ಬಿಟ್ಟು ಹೋಗಿದ್ದಾರೆಯೇ? ಎಂದು ಕೇಳಿದರೆ, ಉತ್ತರ ಏನು ಸಿಗಬಹುದು? ಕೆಟ್ಟ ಅನುಭವವೋ? ಒಳ್ಳೆಯ ಪಾಠವೋ? ಅಥವಾ ಏನೂ ಇಲ್ಲವೋ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882