ಕಥೆ

ಬೇಗ ಪಾಂಡಿತ್ಯ‌ ಸಾಧಿಸಬೇಕೆಂಬ ಹುಚ್ಚು ತಪಸ್ವಿಗೆ ಬುದ್ಧಿ ಕಲಿಸಿದ ಇಂದ್ರ

ದಿನಕ್ಕೊಂದು ಕಥೆ

ಅಧ್ಯಯನವಿಲ್ಲದೆ ವಿದ್ಯೆ ಸಾಧ್ಯವಿಲ್ಲ..

ಯುವಕ್ರೀಧನೆಂಬ ಋಷಿಪುತ್ರನು ಆಲಸ್ಯದಿಂದಾಗಿ ವೇದಶಾಸ್ತ್ರಗಳ ಅಧ್ಯಯನ ಮಾಡುತ್ತಿರಲಿಲ್ಲ. ಅದರಿಂದ ಅವನ ತಂದೆಗೆ ಬಹಳ ದುಃಖವಾಗುತ್ತಿತ್ತು, ಏಕೆಂದರೆ ಅವರ ಸ್ನೇಹಿತರ ಮಕ್ಕಳೆಲ್ಲ ಮಹಾನ ವಿದ್ವಾಂಸರಾಗಿ ರಾಜ ಮಹಾರಾಜರ ಗೌರವಾದರಗಳಿಗೆ ಪಾತ್ರರಾಗಿದ್ದರು.

ತಂದೆಯು ಬುದ್ಧಿವಾದವನ್ನು ಹೇಳಿದಾಗ ಯುವಕ್ರೀಧನು ತನ್ನ ತಂದೆಯ ಸ್ನೇಹಿತರ ಮಕ್ಕಳನ್ನು ನೋಡಿ ಅಸೂಯೆ ಪಟ್ಟನು. ತಾನೂ ದೊಡ್ಡ ಪಂಡಿತನಾಗಿ ತೋರಿಸುತ್ತೇನೆ ಎಂದು ನಿರ್ಧರಿಸಿದನು.

ಆದರೆ ಗುರುಗಳ ಬಳಿ ಹೋಗಿ ಗುರುಸೇವೆಯನ್ನು ಮಾಡಿ ಅಧ್ಯಯನ ನಡೆಸಲು ಅವನಿಗೆ ಇಷ್ಟವಿರಲಿಲ್ಲ. ದೀರ್ಘಾವಧಿಯ ಅಧ್ಯಯನ ಮಾಡದೆ ಸುಲಭ ರೀತಿಯಲ್ಲಿ ಮಹಾಪಂಡಿತನಾಗಬೇಕೆಂದು ಅವನ ಬಯಕೆಯಾಗಿತ್ತು. ಅದಕ್ಕಾಗಿ ಗಂಗಾತೀರದಲ್ಲಿ ಕುಳಿತು ಘೋರ ತಪಸ್ಸನ್ನು ಮಾಡತೊಡಗಿದನು.

ದೇವಲೋಕದ ಒಡೆಯನಾದ ಇಂದ್ರನು ಇದನ್ನು ತಿಳಿದು ಯುವಕ್ರೀಧನಿಗೆ ಸರಿಯಾದ ಬುದ್ಧಿ ಕಲಿಸಬೇಕೆಂಬ ಉದ್ದೇಶದಿಂದ ಮಾರುವೇಷಧರಿಸಿ ಒಬ್ಬ ಮುದಿ ಬ್ರಾಹ್ಮಣನಾಗಿ ಬಂದು ಗಂಗಾತೀರದಲ್ಲಿ ಯುವಕ್ರೀಧನ ಸಮೀಪ ಕುಳಿತುಕೊಂಡು ಒಂದೊಂದೇ ಹಿಡಿ ಉಸುಕನ್ನು ನದಿಯಲ್ಲಿ ಹಾಕಲು ಪ್ರಾರಂಭಿಸಿದನು.

ಬಹಳ ಹೊತ್ತಿನಿಂದ ಅವನು ಮಾಡುತ್ತಿದ್ದ ವ್ಯರ್ಥ ಚಟುವಟಿಕೆಯನ್ನು ಕಂಡು ಯುವಕ್ರೀಧನು ಕುತೂಹಲ ತಾಳಲಾಗದೆ ‘ನೀನೇನು ಮಾಡುತ್ತಿದ್ದೀಯಾ?’ ಎಂದು ಕೇಳಿದನು. ನದಿಗೆ ಅಣೆಕಟ್ಟು ಕಟ್ಟ ಬೇಕಾಗಿದೆ, ಅದಕ್ಕಾಗಿ ಉಸುಕನ್ನು ಹಾಕಿ ನದಿಯ ಪ್ರವಾಹವನ್ನು ತಡೆಗಟ್ಟಲು ಪ್ರಯತ್ನಿಸುತ್ತಿದ್ದೇನೆ’ ಎಂದು ವೇಷಧಾರಿ ಇಂದ್ರನು ಉತ್ತರಿಸಿದನು.

‘ಸಾವಿರಾರು ವರ್ಷಗಳ ಪ್ರಯತ್ನ ನಡೆಸಿದರೂ ಗಂಗಾಪ್ರವಾಹವನ್ನು ಈ ಹಿಡಿ ಉಸುಕಿನಿಂದ ತಡೆಯಲಾರೆ. ಹುಚ್ಚು ಸಾಹಸವನ್ನು ತೊರೆದು ಬಿಡು’ ಎಂದು ಯುವಕ್ರೀಧನು ಬುದ್ಧಿವಂತನಂತೆ ಮುದುಕನಲ್ಲಿ ಹೇಳಿದನು.

ಆಗ ಮುದಿ ಬ್ರಾಹ್ಮಣನು, ‘ಏನೂ ಅಧ್ಯಯನ ಮಾಡದೇ, ಬರೀ ತಪಸ್ಸನ್ನು ಮಾಡಿ ನೀನು ಸ್ವಲ್ಪಕಾಲದಲ್ಲಿ ಮಹಾಪಂಡಿತ ನಾಗಬಹುದಾದರೆ, ಹಿಡಿ ಮಣ್ಣಿನಿಂದ ಅಣೆಕಟ್ಟನ್ನು ಕಟ್ಟುವುದು ನನಗೇಕೆ ಅಸಾಧ್ಯವಾಗಬೇಕು?’ ಎಂದು ಯುವಕ್ರೀಧನನ್ನೇ ಪ್ರಶ್ನಿಸಿದನು.

ತನ್ನ ತಪಸ್ಸಿನ ಉದ್ದೇಶದ ಕುರಿತು ಹೇಳಿದ ಮಾತುಗಳನ್ನ ಕೇಳಿದಾಗ ಯುವಕ್ರೀಧನಿಗೆ ಜ್ಞಾನೋದಯವಾಯಿತು. ತನ್ನ ಕೃತಿಯೇ ನಿರರ್ಥಕವೆಂದೆನಿಸಿತು, ನಾಚಿಕೆಯಾಯಿತು. ಮುದಿ ಬ್ರಾಹ್ಮಣನಲ್ಲಿ ಶರಣಾದನು. ಬಳಿಕ ಯೋಗ್ಯ ಗುರುವನ್ನು ಹುಡುಕಿಕೊಂಡು ಹೋದನು.

ನೀತಿ :– ನಾವು ಕೂಡಾ ಅಧ್ಯಯನದಲ್ಲಿ ಸಮಯ ಪರಿಪಾಲನೆ ಮಾಡಬೇಕು. ಅಧ್ಯಯನ ಮಾಡದೇ ದೇವರಿಗೆ ಹರಕೆ, ಹಣ್ಣುಕಾಯಿ ನೀಡಿದರೆ ಫಲ ಸಿಗದು. ಪ್ರಯತ್ನ, ವಿಶ್ವಾಸ ಇದ್ದಲ್ಲಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ನಮ್ಮ ಪ್ರಯತ್ನ ಮತ್ತು ದೇವರ / ಗುರುಗಳ ಕೃಪೆಯೊಂದಿಗೆ ನಾಮವು ಜೊತೆಯಲ್ಲಿರಲಿ. ಆಗ ಯಶಸ್ಸು ನಿಶ್ಚಿತವಾಗಿದೆ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button