ಕಥೆ

‘ತೀರ್ಮಾನ ನಿಮ್ಮದು’ ಈ ಕಥೆ ಓದಿ

ತಿರ್ಮಾನ ನಿಮ್ಮದು

ಅದೊಂದು ಪುಟ್ಟ ಸಂಸಾರ. ಗಂಡ-ಹೆಂಡತಿ, ಇಬ್ಬರು ಗಂಡು ಮಕ್ಕಳು. ಗಂಡನೋ ಮಹಾಕುಡುಕ. ಕೆಲಸ ಮುಗಿಸಿ ಕುಡಿದುಕೊಂಡೇ ಮನೆಗೆ ಬರುತ್ತಿದ್ದ. ಮನೆಯಲ್ಲಿ ಹೆಂಡತಿ, ಮಕ್ಕಳನ್ನು ಮನಸ್ಸಿಗೆ ಬಂದಂತೆ ಬಡಿಯುತ್ತಿದ್ದ. ಅಕ್ಕಪಕ್ಕದ ಮನೆಯವರು ಇವರನ್ನು ವಿಚಿತ್ರವಾಗಿ ನೋಡುತ್ತಿದ್ದರು.

ಯಾರಾದರು ಜಗಳ ಬಿಡಿಸಲು ಬಂದರೆ ಅವರನ್ನೂ ಬಾಯಿಗೆ ಬಂದಂತೆ ಬೈದು ಅಟ್ಟುತ್ತಿದ್ದ. ಜನ ಈ ಕುಟುಂಬದ ಜತೆ ಬೆರೆಯುವುದನ್ನೇ ಬಿಟ್ಟುಬಿಟ್ಟರು. ಹೆಂಡತಿ ಅವಮಾನ, ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಳು. ಹೆಂಡತಿ ಸತ್ತರೂ ಆತ ಮಾತ್ರ ಬದಲಾಗಲಿಲ್ಲ. ಇಬ್ಬರು ಮಕ್ಕಳು ಬೆಳೆದು ದೊಡ್ಡವರಾಗತೊಡಗಿದರು.

ಅವರಲ್ಲೊಬ್ಬ ಬುದ್ಧಿವಂತ, ಸಭ್ಯ, ಸಜ್ಜನ. ಇನ್ನೊಬ್ಬ ತಂದೆಯಂತೆಯೇ ಒರಟ, ಜಗಳಗಂಟ, ಕುಡಿಯುವುದನ್ನೂ ಕಲಿತುಬಿಟ್ಟ. ಇಬ್ಬರೂ ಒಂದೇ ಶಾಲೆಯಲ್ಲಿ ಓದುತ್ತಿದ್ದರೂ ಎರಡನೆಯವನಿಗೆ ಓದಿನಲ್ಲಿ ಆಸಕ್ತಿಯೇ ಇರಲಿಲ್ಲ. ಶಾಲೆ ತಪ್ಪಿಸಿ ಕುಡಿಯುವುದನ್ನೇ ಕೆಲಸವಾಗಿಸಿಕೊಂಡ.

ಮೊದಲನೆಯವನು ಚೆನ್ನಾಗಿ ಓದಿದ, ಸ್ಕಾಲರ್ ಶಿಪ್ ಗಳಿಸಿದ. ಅಲ್ಲಿ ಇಲ್ಲಿ ಪಾರ್ಟ್‌ಟೈಂ ಕೆಲಸ ಮಾಡಿ ಹಣ ಹೊಂದಿಸಿಕೊಂಡು ಉನ್ನತ ಶಿಕ್ಷಣ ಪಡೆದು ಒಳ್ಳೆಯ ಕಂಪನಿಯಲ್ಲಿ ಉದ್ಯೋಗ ಪಡೆದ. ಒಮ್ಮೆ ಆ ಇಬ್ಬರು ಹುಡುಗರನ್ನು ಯಾರೋ ಹಿರಿಯರು ಕೇಳಿದರು-‘ನೀವಿಬ್ಬರೂ ಅಣ್ಣ ತಮ್ಮಂದಿರು.

ಒಟ್ಟಿಗೆ, ಒಂದೇ ಮನೆಯಲ್ಲಿ ಬೆಳೆದವರು. ಆದರೂ ನಿಮ್ಮಿಬ್ಬರಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಒಬ್ಬ ಓದಿ ಕೆಲಸ ಪಡೆದರೆ, ಇನೊಬ್ಬ ಕೆಲಸವಿಲ್ಲದ ಕುಡುಕ. ಅದು ಹೇಗೆ ಸಾಧ್ಯ?’ ಅದಕ್ಕೆ ಎರಡನೆಯವನು ಸಿಡುಕುತ್ತಾ ‘ಹೌದೌದು, ನಾನು ಹೀಗಾಗಲು ನಮ್ಮಪ್ಪನೇ ಕಾರಣ.

ಅವರು ಒಂದು ದಿನವೂ ನಮ್ಮನ್ನು ಪ್ರೀತಿಸಲಿಲ್ಲ. ಪ್ರತಿದಿನ ಕುಡಿದು ಬಂದು ಅಮ್ಮನನ್ನು ಹೊಡೆಯುತ್ತಿದ್ದರು. ಅದಕ್ಕೆ ಅಮ್ಮನೂ ನಮ್ಮನ್ನು ಒಂಟಿ ಮಾಡಿ ಹೋದಳು. ಅಪ್ಪನೇ ಕುಡಿದು ಬಂದರೆ ಮಕ್ಕಳು ಇನ್ನೆಂಥವರಾಗಲು ಸಾಧ್ಯ.

ನಾನು ಕುಡಿಯಲು ನಮ್ಮಪ್ಪನೇ ಕಾರಣ’ ಎಂದು ರೇಗಿದ. ಮೊದಲನೆಯವನು ಶಾಂತನಾಗಿ ಹೇಳಿದ-‘ಹೌದು ನಾನು ಹೀಗಾಗಲೂ ನಮ್ಮ ತಂದೆಯೇ ಕಾರಣ’. ಹಿರಿಯರಿಗೆ ಆಶ್ಚರ್ಯ! ‘ಅದು ಹೇಗೆ?’ ಎಂದು ಕೇಳಿದರು. ‘ನಮ್ಮಪ್ಪ ದಿನವೂ ಕುಡಿದು ಬರುತ್ತಿದ್ದರು. ಅಮ್ಮನನ್ನು, ನಮ್ಮನ್ನು ತುಂಬಾ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು.

ಆಗೆಲ್ಲಾ ಅಮ್ಮ ನಮ್ಮನ್ನು ತಬ್ಬಿಕೊಂಡು ಅಳುತ್ತಿದ್ದಳು. ಅಕ್ಕಪಕ್ಕದ ಮನೆಯವರು ನಮ್ಮನ್ನು ಅವಮಾನಿಸುತ್ತಿದ್ದರು. ನಾನು ಆಗಲೇ ನಿರ್ಧರಿಸಿದ್ದೆ. ನಾನೇನಾಗದಿದ್ದರೂ ಪರವಾಗಿಲ್ಲ. ಆದರೆ ಅಪ್ಪನಂತೆ ಕುಡುಕನಾಗಬಾರದು. ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಯಾರು ನಮ್ಮನ್ನು ನೋಡಿ ನಕ್ಕಿದ್ದಾರೆಯೋ ಅವರ ಮುಂದೆಯೇ ತಲೆ ಎತ್ತಿ ನಡೆಯಬೇಕು.

ಅದಕ್ಕಾಗಿ ಕಷ್ಟಪಟ್ಟು ಓದಿದೆ, ಕೆಲಸ ಗಿಟ್ಟಿಸಿಕೊಂಡೆ’ಎಂದು ಹೇಳಿದ. ಇಬ್ಬರಿಗೂ ಆದರ್ಶವಾಗಿದ್ದು ಒಬ್ಬ ಅಪ್ಪನೇ! ಆದರೆ ಮೊದಲನೆಯವನು ಅಪ್ಪನನ್ನು ನೋಡಿ ‘ನಾನು ಹೀಗಾಗಬಾರದು’ ಎಂದು ತೀರ್ಮಾನಿಸಿದ. ಎರಡನೆಯ ವನು ‘ನನ್ನಪ್ಪನೇ ಹೀಗೆ, ನಾನು ಅವನಿಗಿಂತ ಬೇರೆಯವನಾ ಗಲು ಹೇಗೆ ಸಾಧ್ಯ?’ ಎಂದು ಭಾವಿಸಿದ.

ಹೀಗೆ ನಮ್ಮ ಬದುಕನ್ನು ಬದಲಿಸುವುದು ನಮ್ಮ ದೃಷ್ಟಿಕೋನವೇ ಹೊರತು ಬೇರಾವುದೂ ಅಲ್ಲ. ನೀವು ಬದುಕಿನಲ್ಲಿ ಭೇಟಿ ಮಾಡುವ ಪ್ರತಿ ವ್ಯಕ್ತಿಯಿಂದಲೂ ಕಲಿಯುವುದು ಬಹಳಷ್ಟಿರುತ್ತದೆ. ಯಾರನ್ನೂ ನಿಕೃಷ್ಟವಾಗಿ ಕಾಣಬೇಡಿ. ಒಬ್ಬ ವ್ಯಕ್ತಿಯಲ್ಲಿ ಕಲಿಯುವುದು ಏನೂ ಇಲ್ಲವೆಂದರೆ, ನಾನು ಅವನಂತಾಗಬಾರದು ಎಂಬ ಪಾಠವನ್ನಾದರೂ ನೀವು ಕಲಿಯಲೇಬೇಕು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button