ಸ್ಮಶಾನದಲ್ಲಿದೆ ಮುಕ್ತಿಯ ಗುಟ್ಟು.! ಬದುಕಿಗೊಂದು ಮಾರ್ಗ ಓದಿ
ದಿನಕ್ಕೊಂದು ಕಥೆ ಓದಿ ಅರ್ಥೈಸಿಕೊಂಡ್ರೆ ಬದುಕು ಸುಧಾರಣೆಗೆ ಸಹಕಾರ

ದಿನಕ್ಕೊಂದು ಕಥೆ
ಸಮಾಧಿಯಲ್ಲಿ ಮುಕ್ತಿಯ ಗುಟ್ಟು.!
ಒಂದು ದಿನ ಒಬ್ಬ ಸಂತನ ಬಳಿಗೆ ಒಬ್ಬ ವ್ಯಕ್ತಿ ಬಂದ. “ನನಗೆ ಮುಕ್ತಿಯ ಮಾರ್ಗವನ್ನು ತೋರಿಸಿ” ಎಂದು ಪ್ರಾರ್ಥಿಸಿದ.
“ನೀನು ಈಗ ಸ್ಮಶಾನಕ್ಕೆ ಹೋಗು, ಅಲ್ಲಿರುವ ಸಮಾಧಿಗಳನ್ನು ಆಯಾ ಹೆಸರನ್ನು ಕೂಗಿ ಚೆನ್ನಾಗಿ ಬೈದು ಬಾ” ಎಂದು ಹೇಳಿ ಸಂತ ಆ ವ್ಯಕ್ತಿಯನ್ನು ಸ್ಮಶಾನಕ್ಕೆ ಕಳುಹಿಸಿದರು.
ಅವನು ಅದರಂತೆ ಮಾಡಿದ. ಈಗ ಏನು ಮಾಡಬೇಕು ಸ್ವಾಮಿ? ಎಂದ. “ನಾಳೆ ಮತ್ತೆ ಸ್ಮಶಾನಕ್ಕೆ ಹೋಗು. ಒಂದೊಂದು ಸಮಾಧಿಯನ್ನೂ ಹೆಸರು ಹಿಡಿದು ಚೆನ್ನಾಗಿ ಹೊಗಳಿ ಬಾ” ಎಂದರು ಸಂತ.
ಈ ಬಾರಿಯೂ ಅವನು ಸಂತರು ಹೇಳಿದಂತೆಯೇ ಮಾಡಿ ಬಂದ. “ನೀವು ಹೇಳಿದಂತೆ ಮಾಡಿ ಬಂದಿರುವೆ ಗುರುಗಳೇ” ಎಂದ.
“ಹೌದು, ನಿನ್ನ ಹೊಗಳಿಕೆಗೆ ತೆಗಳಿಕೆಗೆ ಸ್ಮಶಾನದ ಸಮಾಧಿಗಳು ಹೇಗೆ ಉತ್ತರ ನೀಡಿದವು?” ಎಂದು ಸಂತರು ಕೇಳಿದರು.
“ಏನೂ ಉತ್ತರವಿಲ್ಲ ಗುರುಗಳೇ, ಹೊಗಳಿಕೆಗೂ ಉತ್ತರವಿಲ್ಲ, ತೆಗಳಿಕೆಗೂ ಉತ್ತರವಿಲ್ಲ!”
ಮಗೂ! ನೀನು ಕೂಡಾ ಹೊಗಳಿಕೆಯನ್ನೂ, ತೆಗಳಿಕೆಯನ್ನೂ ಒಂದೇ ರೀತಿ ಸ್ವೀಕರಿಸು. ಈ ಎರಡರಿಂದಲೂ ಮುಕ್ತನಾಗು, ಅದೇ ಮುಕ್ತಿಯ “ಮಾರ್ಗ” ಎಂದು ಮುಕ್ತಿಯ ಗುಟ್ಟನ್ನು ಸಂತರು ಉಪದೇಶಿಸಿದರು.
ಮುಕ್ತಿ ಎಂದರೆ ಬಿಡುಗಡೆ, ನಮಗೆ ಇಷ್ಟವಾದುದನ್ನು ಸಂಗ್ರಹಿಸುತ್ತೇವೆ. ಇಷ್ಟವಿಲ್ಲದುದನ್ನು ನಿರಾಕರಿಸುತ್ತೇವೆ. ಈ ನಿರಾಕರಣೆ ಸಂಗ್ರಹಗಳೆ ನಮ್ಮ ಬಂಧನಕ್ಕೆ ಕಾರಣವಾದ ಪಾಶಗಳು, ಇದರಿಂದ ಬಿಡುಗಡೆಯಾದರೆ ನಾವು ಮುಕ್ತ. ಹೌದಲ್ಲವೆ? ಹೀಗೆಯೇ ಸುಖ-ದುಃಖಗಳನ್ನೂ ಕೂಡಾ ನಾವು ಒಂದೇ ರೀತಿಯಾಗಿ ಸ್ವೀಕರಿಸಬೇಕು. ಸುಖ ಬಂದಾಗ ಹಿಗ್ಗುವುದು ದುಃಖ ಬಂದಾಗ ಕುಗ್ಗುವುದು ಎರಡೂ ಮನಸ್ಸಿನ ವಿಕಾರಗಳೇ ಈ ವಿಕಾರ ದೂರವಾದಾಗ ನಾವು ಮುಕ್ತಿಗೆ ಹತ್ತಿರವಾಗಿರುತ್ತೇವೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.