ಕಥೆ

ಮನಸ್ಸು ನಿಮ್ಮ ವಶದಲ್ಲಿದೆಯೆ.?

ದಿನಕ್ಕೊಂದು ಕಥೆ

ದಿನಕ್ಕೊಂದು ಕಥೆ

ಮನಸ್ಸು ನಿಮ್ಮ ವಶದಲ್ಲಿದೆಯೆ?

ಪ್ರತಿಯೊಬ್ಬರಿಗೂ ಸಂತೋಷ ಬೇಕು ಅದರೊಂದಿಗೆ ಸ್ವಾತಂತ್ರ್ಯವೂ ಬೇಕೆನ್ನುತ್ತೇವೆ. ಹಾಗಾದರೆ ಸಂತೋಷವನ್ನು ಸಂಪಾದಿಸುವ ಕ್ರಮ ಏನು? ಸ್ವಾತಂತ್ರ್ಯವನ್ನು ಪಡೆಯುವ ದಾರಿ ಯಾವುದು? ಎಪಿಕ್ಟೇಟಸ್ ಎಂಬ ಗ್ರೀಕ್ ತತ್ತ್ವಜ್ಞಾನಿ ಈ ದಾರಿಯನ್ನು ಕುರಿತು ಚೆನ್ನಾಗಿ ಹೇಳಿದ್ದಾನೆ. ನಮ್ಮ ಸಂತೋಷ ಮತ್ತು ಸ್ವಾತಂತ್ರ್ಯಗಳು ಒಂದೇ ಒಂದು ತತ್ವದ ಮೇಲೆ ನಿಂತಿದೆ, ಎನ್ನುತ್ತಾನೆ ಅವನು. ಜೀವನದಲ್ಲಿ ಕೆಲವೊಂದು ವಿವರಗಳು ನಮ್ಮ ಹಿಡಿತದಲ್ಲಿ ಇರುತ್ತವೆ.

ಕೆಲವೊಂದು ನಮ್ಮ ಹಿಡಿತದಲ್ಲಿ ಇರುವುದಿಲ್ಲ. ನಮ್ಮ ಹಿಡಿತದಲ್ಲಿ ಇರುವ ಸಂಗತಿಗಳು ಯಾವವು? ನಮ್ಮ ಹಿಡಿತದಲ್ಲಿ ಇಲ್ಲದ ಸಂಗತಿಗಳು ಯಾವುವು? ಎಂಬುದನ್ನು ಕಂಡುಕೊಳ್ಳುವುದರಲ್ಲಿಯೇ ಸಂತೋಷ ಮತ್ತು ಸ್ವಾತಂತ್ರ್ಯಗಳ ಮೂಲವಿದೆ. ಇದು ಎಪಿಕ್ಟೇಟಸ್‌ನ ಮಾತು.

ನಮ್ಮ ನೇರ ಹಿಡಿತದಲ್ಲಿ ಇರುವುದು ಏನು? ಮನಸ್ಸು. ಇದೊಂದು ನಮ್ಮ ಹಿಡಿತದಲ್ಲಿದ್ದರೆ ಸಾಕು, ನಾವು ಇಡೀ ಜಗತ್ತನ್ನೇ ಗೆಲ್ಲಬಹುದು. ಮನಸ್ಸೇ ನಮ್ಮ ಎಲ್ಲ ಆಗು ಹೋಗುಗಳಿಗೂ ಕಾರಣ ಎಂಬುದನ್ನು ಜಗತ್ತಿನ ಎಲ್ಲ ಭಾಗದ ಚಿಂತಕರೂ ದಾರ್ಶನಿಕರೂ ಸಾರಿ ಹೇಳಿದ್ದಾರೆ. ಮನಸ್ಸು ನಮ್ಮ ನಿಯಂತ್ರಣದಲ್ಲಿದ್ದರೆ ಬಯಕೆಗಳೂ ನಮ್ಮ ಹಿಡಿತದಲ್ಲಿರುವುದು.

ಈ ಬಯಕೆಗಳು ನಮ್ಮ ಮೇಲೆ ಸವಾರಿ ಮಾಡಲು ತೊಡಗಿದರೆ ಜೀವನದ ಪ್ರಯಾಣ ಗುರಿ ತಪ್ಪುವುದು ಸಹಜ. ಗುರಿಯಿಂದ ದೂರ ಸರಿದ ಜೀವನ ಎಂದರೆ ವ್ಯವಸ್ಥೆಯನ್ನು ಕಳೆದುಕೊಂಡ ಜೀವನ ಎಂದೇ ಅರ್ಥ. ವ್ಯವಸ್ಥೆಯಿಲ್ಲದ ಜೀವನದಲ್ಲಿ ಸುಖ, ನೆಮ್ಮದಿಗಳು ಹೇಗೆ ತಾನೆ ಇದ್ದೀತು? ಹೀಗಾಗಿ ನಮ್ಮ ಮನಸ್ಸನ್ನು ಸದಾ ನಮ್ಮ ನಿಯಂತ್ರಣದಲ್ಲಿಯೇ ಇರಿಸಿಕೊಳ್ಳಬೇಕು.

ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಎಂದರೆ ಅದರ ಸ್ವಭಾವವನ್ನು ಪೂರ್ಣವಾಗಿ ತಿಳಿದುಕೊಳ್ಳುವುದು. ಮನಸ್ಸು ಯಾವುದೋ ವಸ್ತುವನ್ನು ಅತಿಯಾಗಿ ಬಯಸುತ್ತಿರುತ್ತದೆ.

ಮತ್ತಾವುದೋ ವಸ್ತುವನ್ನು ತುಂಬ ದ್ವೇಷಿಸುತ್ತಿರುತ್ತದೆ. ಮನನ ಈ ದ್ವೇಷ-ಪ್ರೀತಿಗಳಿಗೆ ಕಾರಣ ಏನು ಎಂಬುದು ನಮಗೆ ಅರಿವಾದರೆ ಆ ನಸ್ಸು ನಮ್ಮ ಹಿಡಿತದಲ್ಲಿದೆಯೆಂದೇ ಅರ್ಥ. ಕಾರಣ ಗೊತ್ತಾದ ಮೇಲೆ ನಾವು ಇಷ್ಟಪಡುತ್ತಿರುವ ವಸ್ತು ನಮಗೆ ಬೇಕೆ? ಬೇಡವೇ? ಎಂಬ ಜೀವನಕ್ಕೆ ದಿಟವಾಗಿಯೂ ಯಾವುದು ಹಿತವೋ ಅದನ್ನು ಮಾತ್ರವೇ ಪಡೆಯಬೇಕೆಂಬ ಮೌಲ್ಯನಿರ್ಣಯ ಬುದ್ದಿಯೂ ನಮಗೆ ಒದಗುತ್ತದೆ.

ಇಂಥ ಸಮತೋಲನ ದಕ್ಕಿದ ಬಳಿಕ ಮನಸ್ಸು ಹಿತವಾದುದರಲ್ಲಿಯೇ ಮಗ್ನವಾಗಿರುತ್ತದೆ. ಯಾವುದು ಹಿತವೋ ಅದರಿಂದ ಮಾತ್ರವೇ ನಮಗೆ ಸಂತೋಷ ಸಿಗಲು ಸಾಧ್ಯ. ಆದುದರಿಂದ ನಾವು ಮೊದಲು ನಮ್ಮ ಮನಸ್ಸು ನಮ್ಮ ವಶದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button