ಕಥೆ

ಪವಿತ್ರವಾದ ಜನಿವಾರ ಮತ್ತೂ ಪವಿತ್ರವಾಯಿತು.! ಏಕೆ ಗೊತ್ತಾ.? ಈ ಕಥೆ ಓದಿ

ಮನುಷ್ಯರೆಲ್ಲರೂ ಒಂದೇ ಮಾನವೀಯತೆ ಇರಲಿ

 

ಪವಿತ್ರವಾದ ಜನಿವಾರ ಮತ್ತೂ ಪವಿತ್ರವಾಯಿತು!

ಜನಿವಾರದಿಂದ ಆಗಬಹುದಾದ ಅಪರೂಪದ ಉಪಕಾರದ ಬಗೆಗಿನ ಪ್ರಸಂಗವೊಂದು ಇಲ್ಲಿದೆ. ಕಳೆದ ಶತಮಾನದಲ್ಲಿ ಆಚಾರ್ಯ ಮಹಾವೀರ ಪ್ರಸಾದ್ ದ್ವಿವೇದಿ(1864-1938) ಎಂಬ ಹೆಸರಾಂತ ಹಿಂದಿ ಕವಿಯಿದ್ದರು.

ಅವರು ಬುದ್ಧಿವಂತರಷ್ಟೇ ಅಲ್ಲ, ಹೃದಯವಂತರೂ ಆಗಿದ್ದರು. ಒಮ್ಮೆ ಅವರು ರಸ್ತೆಯಲ್ಲಿ ಹೋಗುತ್ತಿದ್ದಾಗ ಅಲ್ಲಿ ದೊಡ್ಡದೊಂದು ಗುಂಪು ನೆರೆದಿತ್ತು. ಗುಂಪಿನ ಮಧ್ಯೆ ಹುಡುಗನೊಬ್ಬ ಕುಸಿದು ಬಿದ್ದಿದ್ದ. ನೋವಿನಿಂದ ಅಳುತ್ತಿದ್ದ. ದ್ವಿವೇದಿಯವರು ನಿನಗೆ ಏನಾಗಿದೆ ತಮ್ಮಾ? ಏಕಳುತ್ತಿದ್ದೀಯ? ಎಂದು ಕೇಳಿದರು. ಆತ ಅಳುತ್ತಳುತ್ತ ನನಗೆ ನಾಗರ ಹಾವು ಕಚ್ಚಿದೆ ಎಂದ.

ದ್ವಿವೇದಿಯವರು ಆಶ್ಚರ್ಯದಿಂದ ಗುಂಪನ್ನೂ ಮತ್ತು ನೋವಿನಿಂದ ನರಳುತ್ತಿದ್ದ ಹುಡುಗನನ್ನೂ ನೋಡಿದರು. ಗುಂಪಿನಲ್ಲಿ ಎಲ್ಲರೂ ಕುತೂಹಲದಿಂದ ನೋಡುತ್ತ ನಿಂತಿದ್ದರು. ಯಾರೊಬ್ಬರೂ ಆ ಹುಡುಗನ ನೆರವಿಗೆ ಮುಂದಾಗಲಿಲ್ಲ.

ದ್ವಿವೇದಿ ಯವರು ಆತನಿಗೆ ಸಹಾಯ ಮಾಡುವುದನ್ನು ಬಿಟ್ಟು ನೀವೆಲ್ಲ ನೋಡುತ್ತ ನಿಂತಿದ್ದೀರಲ್ಲ! ನಿಮ್ಮಲ್ಲಿ ಮನುಷ್ಯತ್ವವಿಲ್ಲವೇ? ಆಯಿತು, ಯಾರಾದರೂ ಒಂದು ದಾರವಿದ್ದರೆ ಕೊಡಿ ಎಂದರು. ಆ ಹುಡುಗನನ್ನು ತೊಡೆಯ ಮೇಲೆ ಕೂರಿಸಿಕೊಂಡರು. ಗುಂಪಿನಲ್ಲಿದ್ದವರು ದಾರವನ್ನು ಕೊಡುವ ಬದಲು ಪಂಡಿತ್ ಜೀ! ಆ ಹುಡುಗ ಅಸ್ಪಶ್ಯ ಜನಾಂಗಕ್ಕೆ ಸೇರಿದವನು. ಅವನನ್ನು ನೀವು ಮುಟ್ಟುತ್ತಿದ್ದೀರಲ್ಲ! ನೀವು ಬ್ರಾಹ್ಮಣರಲ್ಲವೇ? ಎಂದು ಕೇಳಿದರು.

ದ್ವಿವೇದಿಯವರು ನಾನು ಮೊದಲು ಮನುಷ್ಯ, ನಂತರ ಬ್ರಾಹ್ಮಣ. ನೀವ್ಯಾರೂ ದಾರವನ್ನು ಕೊಡುತ್ತಿಲ್ಲವಲ್ಲ ಎಂದು ಹೇಳುತ್ತ ತಮ್ಮ ಜನಿವಾರವನ್ನೇ ತೆಗೆದು ಆ ಹುಡುಗನ ಕಾಲಿನಲ್ಲಿ ಹಾವು ಕಚ್ಚಿದ್ದ ಸ್ಥಳದ ಸ್ವಲ್ಪ ಮೇಲೆ ಬಿಗಿಯಾಗಿ ಗಂಟು ಹಾಕಿದರು. ಆನಂತರ ಗಾಯಕ್ಕೆ ಬಾಯಿ ಹಾಕಿ ವಿಷವನ್ನು ಹೀರಿಹೀರಿ ತೆಗೆಯತೊಡಗಿದರು. ಸ್ವಲ್ಪ ಹೊತ್ತಿನ ನಂತರ ಹುಡುಗ ಚೇತರಿಸಿಕೊಂಡ. ದ್ವಿವೇದಿಯವರು ಅವನಿಗೆ ನೀರು ಕುಡಿಸಿ ಚಿಂತಿಸಬೇಡ ತಮ್ಮಾ, ನೀನೀಗ ಸರಿ ಹೋಗಿದ್ದೀಯೆ ಎಂದು ಹೇಳಿ ಸಮಾಧಾನ ಮಾಡಿ ಕಳುಹಿಸಿಕೊಟ್ಟರು.

ಇವರು ಮಾಡುವುದನ್ನೆಲ್ಲ ಜನ ನೋಡುತ್ತಿದ್ದರು. ಅವರಲೊಬ್ಬರು ಪಂಡಿತರೇ ನೀವೆಂತಹ ಕೆಲಸ ಮಾಡಿದಿರಿ? ಅಸ್ಪಶ್ಯ ಬಾಲಕನನ್ನು ತೊಡೆಯ ಮೇಲೆ ಕೂಡಿಸಿಕೊಂಡಿರಿ. ಅವನ ಗಾಯಕ್ಕೆ ಬಾಯಿ ಹಾಕಿದಿರಿ. ನಿಮ್ಮ ಪವಿತ್ರವಾದ ಜನಿವಾರವನ್ನು ತೆಗೆದು ಅವನ ಕಾಲಿಗೆ ಕಟ್ಟಿದಿರಿ. ನೀವು ನರಕದಲ್ಲಿ ಕೊಳೆಯುವುದು ಖಂಡಿತ ಎಂದು ಘೋಷಿಸಿದರು.

ದ್ವಿವೇದಿಯವರು ನಿಧಾನವಾಗಿ ಮೇಲೆದ್ದು ನಿಂತರು. ದೂಳು ಕೊಡವಿಕೊಂಡರು. ನರಕಕ್ಕೆ ಹೋಗುವ ಘೋಷಣೆ ಮಾಡಿದ ಗುಂಪನ್ನುದ್ದೇಶಿಸಿ ಸ್ವರ್ಗ ನರಕಗಳು ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಹುಡುಗನೊಬ್ಬನ ಪ್ರಾಣವನ್ನುಳಿಸಿ ಅವನು ಭೂಲೋಕದಲ್ಲಿ ಬಾಳಿ ಬದುಕುವಂತೆ ಮಾಡಿದ್ದೇನೆ.

ನನಗೆ ಅದಕ್ಕಿಂತ ಬೇರೆ ಸ್ವರ್ಗ ಬೇಕೆ? ಮತ್ತೆ ಆ ಹುಡುಗ ಅಸ್ಪಶ್ಯನಾದರೇನು? ಯಾರಾದರೇನು? ಹಾವು ಕಚ್ಚುವಾಗ ಇವನು ಬ್ರಾಹ್ಮಣ, ಅವನು ಅಸ್ಪಶ್ಯ ಎಂದೇನು ತಾರತಮ್ಯ ತೋರುವುದಿಲ್ಲ. ಅದು ಕಚ್ಚಿದಾಗ ಆಗುವ ನೋವು ಎಲ್ಲರಿಗೂ ಒಂದೇ. ಅವನ ನೋವನ್ನು ಕಡಿಮೆ ಮಾಡಿದ, ಪ್ರಾಣವನ್ನುಳಿಸಿದ ಸಂತೋಷ ನನಗಿದೆ.

ಮತ್ತು ನನ್ನ ಜನಿವಾರವನ್ನು ಆ ಹುಡುಗನ ಕಾಲಿಗೆ ಕಟ್ಟಿದ ವಿಷಯ. ಇಷ್ಟು ದಿವಸ ಜನಿವಾರ ಬ್ರಾಹ್ಮಣ್ಯದ ಸಂಕೇತವಾಗಿ, ಪೂಜೆ-ಪುನಸ್ಕಾರಗಳಿಗಾಗಿ ಮಾತ್ರ ಇತ್ತು. ಆದರೆ ಇಂದು ಅದು ಮತ್ತೊಬ್ಬರ ಜೀವವನ್ನುಳಿಸಲು ಉಪಯೋಗವಾಗುತ್ತದೆಂಬ ಅರಿವು ನನಗಾಯಿತು.

ಪವಿತ್ರವಾದ ನನ್ನ ಜನಿವಾರ ಇಂದು ಮತ್ತೂ ಪವಿತ್ರವಾಯಿತು! ಅದಕ್ಕಿಂತ ಇನ್ನೇನು ಬೇಕು? ಎಂದು ಹೇಳಿ ಹೊರಟರು. ಕಳೆದ ಶತಮಾನದಲ್ಲಿ ನಡೆದಿದ್ದ ಈ ಘಟನೆ ಈ ಶತಮಾನದಲ್ಲಿ ನಡೆದಿದ್ದರೆ ಏನಾಗುತ್ತಿತ್ತು? ನಮ್ಮೆಲ್ಲರ ದೃಷ್ಟಿಕೋನ ಬಹಳಷ್ಟು ಬದಲಾಗಿದ್ದರೆ ಅದು ಸಂತಸದ ವಿಷಯ! ಹಾಗೆಯೇ ನಾವು ಧರಿಸುವ ಅನೇಕ ಧಾರ್ಮಿಕ ಸಂಕೇತ ಸೂಚಕಗಳು ಜೀವಗಳನ್ನು ಉಳಿಸಲೂ ಬಳಸಬಹುದಾದರೆ ಅದು ಮತ್ತೂ ಸಂತಸದ ವಿಷಯ!

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button