ತೃಪ್ತ ಮನಕ್ಕಾಗಿ ಪ್ರಾರ್ಥಿಸು
ವಿಷ್ಣುವು ತನ್ನ ಭಕ್ತನಿಗೆ “ನಾನು ನಿನ್ನ ಕೊನೆಯಿಲ್ಲದ ಬೇಡಿಕೆಗಳಿಂದ ಬೇಸತ್ತು ಹೋಗಿದ್ದೇನೆ. ನಿನಗೆ ಮೂರು ವರಗಳನ್ನು ದಯಪಾಲಿಸುವೆ, ಅವುಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡು. ಏಕೆಂದರೆ ಅವುಗಳನ್ನಲ್ಲದೆ ಮತ್ತೇನನ್ನೂ ನಿನಗೆ ಅನುಗ್ರಹಿಸುವುದಿಲ್ಲ” ಎಂದನು. ಉತ್ಸಾಹದಿಂದ ಉಬ್ಬಿದ ಭಕ್ತನು ಹಿಂದು ಮುಂದು ನೋಡಲಿಲ್ಲ. ಇದು ನನ್ನ ಮೊದಲ ಕೋರಿಕೆ, ಅವನು ಹೇಳಿದನು, ನನ್ನ ಹೆಂಡತಿ ಸಾಯಬೇಕೆಂದು ಬಯಸುತ್ತೇನೆ. ಆಗ ಇನ್ನೂ ಒಳ್ಳೆಯವಳನ್ನು ಮದುವೆಯಾಗಬಲ್ಲೆ, ಅವನ ಆಸೆಯು ಕೂಡಲೇ ಈಡೇರಿತು.
ಆದರೆ ಶವಸಂಸ್ಕಾರಕ್ಕಾಗಿ ಸೇರಿದ ಬಂಧು-ಮಿತ್ರರು ಅವನ ಪತ್ನಿಯ ಗುಣಗಾನ ಮಾಡಲಾರಂಭಿಸಿದಾಗ ತಾನು ಆತುರಪಟ್ಟೆನೆಂದು ಭಕ್ತನು ತಿಳಿದನು. ಆದ್ದರಿಂದ ಅವಳಿಗೆ ಜೀವ ತುಂಬಲು ದೇವರನ್ನು ಕೋರಿದನು. ಇನ್ನು ಅವನಿಗೆ ಉಳಿದುದು ಒಂದೇ ವರ. ಈ ಬಾರಿ ತಪ್ಪು ಮಾಡಬಾರದೆಂದು ಅವನು ನಿರ್ಧರಿಸಿದನು.
ಏಕೆಂದರೆ ಅದನ್ನು ಬದಲಾಯಿಸಲು ಅವನಿಗೆ ಅವಕಾಶವಿರದು. ಅವನು ಬಹಳಷ್ಟು ಜನರ ಸಲಹೆ ಕೇಳಿದನು. ಕೆಲವರು ಅಮರತ್ವವನ್ನು ಕೇಳಬೇಕೆಂದು ಬುದ್ಧಿ ಹೇಳಿದರು. ಆದರೆ ಉಳಿದವರು, ಅವನ ಆರೋಗ್ಯ ಸ್ವಸ್ಥವಾಗಿರದಿದ್ದಲ್ಲಿ ಅಮರತ್ವದಿಂದೇನು ಪ್ರಯೋಜನ? ಹಣವಿಲ್ಲದಿದ್ದರೆ ಆರೋಗ್ಯದಿಂದೇನು? ಸ್ನೇಹಿತರಿಲ್ಲದಿದ್ದರೆ ಹಣದಿಂದೇನು? ಎಂದರು.
ವರ್ಷಗಳು ಉರುಳಿದವು. ಅವನಿಗೆ ತನ್ನ ಆಯ್ಕೆಯನ್ನು ಮಾಡಲಾಗಲೇ ಇಲ್ಲ. ಆಯುಷ್ಯವೇ, ಆರೋಗ್ಯವೇ, ಐಶ್ವರ್ಯವೇ, ಅಧಿಕಾರವೇ ಅಥವಾ ಪ್ರೀತಿಯೇ? ಕೊನೆಗೆ ಅವನು ದೇವರಿಗೆ ಏನನ್ನು ಕೇಳಬೇಕೆಂದು ನೀನೆ ನನಗೆ ಹೇಳು, ಎಂದನು. ಅವನ ಸಂಕಟವನ್ನು ಕಂಡ ದೇವರು ನಕ್ಕು “ಏನು ದೊರೆತರೂ ನೀನು ಮಾತ್ರ ಸಂತೃಪ್ತನಾಗಿರಬೇಕೆಂದು ಕೇಳು” ಎಂದು ನುಡಿದನು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.