ಆಕರ್ಷಣೆಗಳಿಗೆ ಬಲಿಯಾಗದಿರಿ..
ನಚಿಕೇತನಿಗೆ ಯಮ ಮೂರು ವರಗಳನ್ನು ಕೊಡುತ್ತಾನೆ. “ತಂದೆಯ ಕೋಪ ಹೋಗಬೇಕು” ಇದು ಅವನು ಕೇಳಿದ ಮೊದಲನೆಯ ವರ. “ಜಗತ್ತಿಗೆ ಸುಖ ಸಮೃದ್ಧಿಗಳನ್ನು ಕೊಡುವಂಥ ವಿದ್ಯೆಯೊಂದು ಬೇಕು” ಇದು ಅವನು ಕೇಳಿದ ಎರಡನೆಯ ವರ. ಅವನು ಕೇಳಿದ ಮೂರನೆಯ ವರ ಬಹಳ ಗಂಭೀರವಾದದ್ದು. ಇಡಿಯ ಸೃಷ್ಟಿಯ ಹಿಂದಿರುವ ರಹಸ್ಯ, ಹುಟ್ಟು-ಸಾವುಗಳ ಗುಟ್ಟು ಏನು? ಇದು ಅವನು ಕೇಳಿದ ಮೂರನೆಯ ವರದ ತಾತ್ಪರ್ಯ,
ನಚಿಕೇತನ ಈ ವರದಿಂದ ಒಂದು ಕ್ಷಣ ಯಮನಿಗೆ ಗಾಬರಿಯಾಗಿರಬೇಕು. ನಚಿಕೇತ ಇನ್ನೂ ಪುಟ್ಟ ಬಾಲಕ. ಆಟ ಆಡುವ ವಯಸ್ಸಿನವನು ಸೃಷ್ಟಿ ರಹಸ್ಯವನ್ನು ಕೇಳುತ್ತಿದ್ದಾನಲ್ಲ ಎಂದು ವಿಸ್ಮಯವಾಯಿತು. ಇದು ಕೇವಲ ಹುಡುಗಾಟಿಕೆಯ ಪ್ರಶ್ನೆಯೇ ಎಂಬುದನ್ನು ಯಮ ತಿಳಿದುಕೊಳ್ಳಬೇಕಿತ್ತು ಹೀಗಾಗಿ ಅವನು ನಚಿಕೇತನನ್ನು ಎಷ್ಟೋ ರೀತಿಗಳಲ್ಲಿ ಪರೀಕ್ಷಿಸಲು ತೊಡಗುತ್ತಾನೆ.
ಮೊದಲಿಗೆ ಅವನು ಹೇಳುವುದು “ಪ್ರಾಯಶಃ ನೀನು ಕೇಳುತ್ತಿರುವ ಪ್ರಶ್ನೆಯ ಸ್ವರೂಪವೇ ನಿನಗೆ ಗೊತ್ತಾಗದೆ ಸುಮ್ಮನೆ ಪ್ರಶ್ನೆ ಮಾಡುತ್ತಿರುವೆಯಾ?” ಎಂದು ಕೇಳುವಂತೆ ಯಮನು ಹೇಳುತ್ತಾನೆ. ನಚಿಕೇತ, ನೀನು ಕೇಳುತ್ತಿರುವ ವಿಷಯದಲ್ಲಿ ದೇವತೆಗಳಿಗೂ ಕೂಡ ಸರಿಯಾದ ತಿಳುವಳಿಕೆಯಿಲ್ಲ. ಅವರಿಗೂ ಈ ವಿಷಯದಲ್ಲಿ ಸಂಶಯಗಳಿವೆ.
ಆದ್ದರಿಂದ ನೀನು ಬೇರೊಂದು ವರವನ್ನು ಕೇಳಿಕೋ, ಆದರೆ ಯಮನ ಈ ಮಾತುಗಳಿಂದ ನಚಿಕೇತ ವಿಚಲಿತನಾಗಲಿಲ್ಲ. ತನಗೆ ಮೂರನೆಯ ವರವಾಗಿ ಸೃಷ್ಟಿ ರಹಸ್ಯದ ವಿದ್ಯೆಯೇ ಬೇಕು ಎಂದು ನಿಶ್ಚಲವಾಗಿದ್ದ.
ಈಗ ಯಮ ನಚಿಕೇತನಿಗೆ ಸಾಕಷ್ಟು ಆಮಿಷಗಳನ್ನು ಒಡ್ಡುತ್ತಾನೆ. ನಿನ್ನ ಈ ಮೂರನೆಯ ವರಕ್ಕೆ ಬದಲಾಗಿ ನಿನಗೆ ಅಪಾರ ಪ್ರಮಾಣದ ಆಸ್ತಿ ಸಂಪತ್ತನ್ನು ಕೊಡುತ್ತೇನೆ, ಸಾವಿರಾರು ವರ್ಷಗಳ ಕಾಲ ವಿಶಾಲವಾದ ಭೂಭಾಗಕ್ಕೆ ನಿನ್ನನ್ನು ರಾಜನನ್ನಾಗಿ ಮಾಡುತ್ತೇನೆ. ದಿವ್ಯವಾದ ಸಂಗೀತದ ಸುಖವನ್ನು ಕೊಡುತ್ತೇನೆ. ಅಪ್ರತಿಮ ಸುಂದರಿಯರನ್ನು ಕೊಡುತ್ತೇನೆ. ಒಬ್ಬ ಮನುಷ್ಯ ಏನೇನು ಸುಖಗಳನ್ನು ಬಯಸಬಲ್ಲನೋ ಅಷ್ಟೂ ಸುಖ ಸಮೃದ್ಧಿಗಳನ್ನು ನಿನಗೆ ಕೊಡುತ್ತೇನೆ. ಈ ವರ ಮಾತ್ರ ಬೇಡ, ಬೇರೆಯ ವರವನ್ನು ಕೇಳು ಎಂದು ಯಮ ಬೇಡಿಕೊಳ್ಳುತ್ತಾನೆ.
ಆದರೆ ಯಮನ ಈ ಆಮಿಷಗಳಿಗೆ ನಚಿಕೇತ ಸೋಲಲಿಲ್ಲ. “ನನಗೆ ನೀನು ವರವನ್ನು ಕೊಡುವುದಾದರೆ ನಾನು ಕೇಳಿದ ಮೂರನೆಯ ವರವನ್ನೇ ಕೊಡು, ಮತ್ತೇನೂ ನನಗೆ ಬೇಡ” ಎಂದು ಖಂಡಿತವಾಗಿ ಹೇಳಿದ. ಕೊನೆಗೆ ಯಮನಿಗೆ ಬೇರೆ ದಾರಿಯಿಲ್ಲದೆ ನಚಕೇತನಿಗೆ ವಿದ್ಯೆಗಳಲ್ಲಿಯೇ ಶ್ರೇಷ್ಠವೆನಿಸಿರುವ ಆತ್ಮವಿದ್ಯೆಯನ್ನು ಕರುಣಿಸಿದ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.