ದಿನಕ್ಕೊಂದು ಕಥೆ
ಇಬ್ಬರ ಜಗಳ ಮೂರನೆಯವನಿಗೆ ಲಾಭ
ಒಂದು ಊರಿನಲ್ಲಿ ಎರಡು ನಾಯಿಗಳಿದ್ದವು. ಒಂದು ಬಿಳಿ ಬಣ್ಣದ್ದು, ಬಿಳಿಯ. ಇನ್ನೊಂದು ಕಪ್ಪು ಬಣ್ಣದ ಕರಿಯ. ತಾವು ಒಳ್ಳೆಯ ಗೆಳೆಯರೆಂದು ಕೊಂಡಿದ್ದವು. ಒಂದು ದಿನ ಕರಿಯ ಮತ್ತು ಬಿಳಿಯ ಎರಡೂ ಸೇರಿ ಊರ ಊರು ಹೊರಗೆ ಬಂದವು. ಚೆಂದವಾಗಿ ಆಟವಾಡುತ್ತಾ ಮೈಮರೆತವು.
ಆಗ ಹತ್ತಿರದ ಪೊದೆಯಲ್ಲಿ ಸದ್ದು. ಅಲ್ಲಿ ನಾಯಿಗಳು ಕಾಡುಕೋಳಿ ಕಂಡು ಜಾಗ್ರತದಿಂದ ಒಮ್ಮೆಲೇ ಪೊದೆಯತ್ತ ದಾಳಿ ಮಾಡಿ ಬೇಟೆ ಸಿಕ್ಕಿತೆಂದು ಖುಷಿಪಟ್ಟವು. ಆದರೆ, ಒಂದೇ ಹಕ್ಕಿ ಎರಡೂ ನಾಯಿಗಳ ಬಾಯಿಯಲ್ಲಿ, ಅದು ತನ್ನ ಬೇಟೆ ಎಂದು ಎರಡೂ ಕಿತ್ತಾಡುತ್ತಿರುವಾಗ ನಡುವೆ ಚಿರತೆ ಬಂದು ಬೇಟೆ ತೆಗೆದುಕೊಂಡು ಹೋಯಿತು.
ಕೋಳಿ ಚಿರತೆಯ ಪಾಲಾಯ್ತು. ‘ಹೀಗಾಗಲು ನೀನೇ ಕಾರಣ’ ಅಂತ ಒಂದಕ್ಕೊಂದು ದೋಷಾರೋಪಣೆ ಮಾಡಿ ಇನ್ನು ಮೇಲೆ ಬೇಟೆಯನ್ನು ಜಗಳಾಡದೆ ಹಂಚಿಕೊಂಡು ತಿನ್ನೋಣ ಎಂದು ಒಪ್ಪಂದ ಮಾಡಿಕೊಂಡವು.
ಮತ್ತೆ ಗೆಳೆತನದಾಟ ಮುಂದುವರಿದಿದ್ದಾಗ ಎದುರಿಂದ ಹಾದು ಹೋಗಿತ್ತೊಂದು ಮೊಲ. ಎರಡೂ ನಾಯಿಗಳು ಸೇರಿ ಆಕ್ರಮಣ ಮಾಡಲು ಮೊಲ ತಪ್ಪಿಸಿಕೊಳ್ಳುವುದುಂಟೆ? ಅವುಗಳ ಬಾಯಿಗೆ ಸಿಕ್ಕಿ ಸತ್ತೇ ಹೋಯಿತು.
ಈಗ ಅವುಗಳಿಗೆ ಒಪ್ಪಂದ ಮರೆತು ಹೋಯಿತು. ಮತ್ತೆ ಬೇಟೆ ನನ್ನದು ತನ್ನದು’ ಎರಡೂ ಮೊಲವನ್ನು ಕಚ್ಚಿ ಎಳೆಯುವ ಯುದ್ಧ ಆರಂಭ ಮಾಡಿದವು. ನಾಯಿಗಳು ಕದನದಲ್ಲಿ ಬಳಲಿ ನಿನಗೆ ಸಿಕ್ಕಿದ್ದು ನಿನಗೆ, ನನ್ನೆಡೆ ಉಳಿದದ್ದು ನನಗೆ’ ಎಂದು ಮರು ಒಪ್ಪಂದ ಮಾಡಿಕೊಂಡು ಏದುಸಿರು ಬಿಡುತ್ತಾ ಬಂದು ನೋಡಿದರೆ ಅಲ್ಲೇನಿದೆ? ಇತ್ತ ಕಳ್ಳ ನರಿಯೊಂದು ಬಂದು ಸತ್ತ ಮೊಲವನ್ನು ಎತ್ತಿಕೊಂಡು ಸದ್ದಿಲ್ಲದೆ ಹೋಗಿತ್ತು.
ಅದಕ್ಕೇ ಹೇಳ್ತಾರೆ ನಮ್ಮದು ನಾಯಿ ಬುದ್ಧಿ ಅಂತ, ಹಂಚಿ ತಿನ್ನುವ ಗುಣವೇ ನಮ್ಮಲ್ಲಿಲ್ಲ, ಎನ್ನುತ್ತಾ, ಮೈಮೇಲಿನ ಗಾಯಗಳನ್ನು ನೆಕ್ಕಿಕೊಳ್ಳುತ್ತಾ ಮನೆ ಕಡೆ ಹೆಜ್ಜೆ ಹಾಕಿದವು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.