
ದಿನಕ್ಕೊಂದು ಕಥೆ
ತಾಯಿಯ ಆಜ್ಞೆ ಪಾಲಿಸಿ ನಕ್ಷತ್ರನಾದ ಧೃವ
ಹಿಂದಿನ ಕಾಲದಲ್ಲಿ ಉತ್ತಾನಪಾದ ಎಂಬ ಮಹಾರಾಜ ಇದ್ದನು. ಅವನಿಗೆ ಇಬ್ಬರು ಹೆಂಡತಿಯರು. ಒಬ್ಬಳು ಸುಮತೀ, ಇನ್ನೊಬ್ಬಳು ಸುರುಚಿ. ಸುಮತಿಯ ಮಗನೇ ಧೃವ. ಸುರುಚಿ ಮಗ ಉತ್ತಮ.
ಸುರುಚಿ ಧೃವನನ್ನು ಅವರ ತಂದೆ ಹತ್ತಿರ ಹೋಗೋಕೆ ಯಾವಾಗಲೂ ಬಿಡುತ್ತಿರಲಿಲ್ಲ. ಒಂದು ದಿನ ಧೃವ ತುಂಬಾ ಆಸೆಯಿಂದ ತನ್ನ ತಂದೆಯ ಹತ್ತಿರ ಯಾರು ಇಲ್ಲದೇ ಇರೋದನ್ನ ನೋಡಿ, ಓಡಿಹೋಗಿ ತಂದೆಯ ತೊಡೆಯ ಮೇಲೆ ಕುಳಿತು ಕೊಳ್ಳುತ್ತಾನೆ. ಅದೇ ಸಮಯಕ್ಕೆ ಬಂದ ಅವನ ಚಿಕ್ಕಮ್ಮ ಸುರುಚಿ, ಅವನನ್ನು ರಭಸದಿಂದ ಎಳೆದು ದೂರ ತಳ್ಳಿ ಬಿಡುತ್ತಾಳೆ.
ಅದರಿಂದ ಧೃವನಿಗೆ ಬಹಳ ದುಃಖವಾಯಿತು.ಅತ್ತುಕೊಂಡು ತನ್ನ ತಾಯಿಯ ಬಳಿ ಹೋಗುತ್ತಾನೆ. ಆಗ ತಾಯಿ ಸುಮತೀ, ಯಾಕೆ ಕಂದಾ ಏಕೆ ಇಷ್ಟೊಂದು ಬೇಜಾರಿನಿಂದ ಅಳುತ್ತಿದ್ದೀಯ ಎಂದು ಕೇಳುತ್ತಾಳೆ. ಆಗ ಧೃವ ನಡೆದ ವಿಷಯವನ್ನು ಹೇಳುತ್ತಾನೆ. ಅದಕ್ಕೆ, ನೀನು ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸು. ನೀನು ಬಯಸಿದ್ದು ಸಿಗುತ್ತದೆ ಎಂದು ಹೇಳುತ್ತಾಳೆ.
ಆಗ ಧೃವನು ತಾಯಿ ಹೇಳಿದ ಹಾಗೆ ದೀರ್ಘ ತಪಸ್ಸು ಮಾಡಿ ನನ್ನಾಸೆಯನ್ನು ಪೂರೈಸಿಕೊಳ್ಳಬೇಕೆಂದು ತೀರ್ಮಾನಿಸುತ್ತಾನೆ. ನಂತರ ತಾಯಿಯ ಆಶೀರ್ವಾದ ಪಡೆದು ತಪಸ್ಸು ಮಾಡಲು ಅರಣ್ಯಕ್ಕೆ ತೆರಳುತ್ತಾನೆ.
ಹೀಗೆ ಅರಣ್ಯಮಾರ್ಗದಲ್ಲಿ ಬರುವಾಗ, ನಾರದ ಮಹರ್ಷಿಗಳು ಧೃವನಿಗೆ ಸಿಗುತ್ತಾರೆ. ಅವರು ಏನಪ್ಪಾ ಮಗೂ, ಈ ದಟ್ಟ ಅರಣ್ಯದಲ್ಲಿ ಏನು ಮಾಡುತ್ತಿರುವೆ? ಇಲ್ಲಿ ಬಹಳ ಕ್ರೂರವಾದ ಮೃಗಗಳು ಇರುತ್ತದೆ. ಮನೆಗೆ ಹೋಗು. ಅಲ್ಲಿ ನಿನ್ನ ಮಾತಾಪಿತರು ನಿನಗಾಗಿ ಕಾಯುತ್ತಾ ಇರುತ್ತಾರೆ. ಇಲ್ಲಿಗೆ ಯಾಕೆ ಬಂದೆ ಎಂದು ಕಾರಣ ಕೇಳುತ್ತಾರೆ.
ಆಗ ಸಂಸ್ಕಾರವಂತ ಧೃವನು ನಾರದ ಮುನಿಗಳಿಗೆ ನಮಸ್ಕಾರ ಮಾಡಿ,ಅವನು ತಪಸ್ಸು ಮಾಡಲು ಬಂದ ಕಾರಣ ಹೇಳಿ, ಬಂದಕೆಲಸ ಆಗುವವರೆಗೂ ಹಿಂದಿರುಗುವ ಮಾತೇ ಇಲ್ಲಾ ಎಂದು ಹೇಳುತ್ತಾನೆ.
ಅವನ ಮಾತು ಕೇಳಿ, ನಾರದರು ಅವನಿಗೆ ಒಂದು ಮಂತ್ರೋಪದೇಶ ಮಾಡುತ್ತಾರೆ. ಅದೇ, ಓಂ ನಮೋ ಭಗವತೇ ವಾಸುದೇವಾಯ.
ಅವರಿಗೆ ನಮಿಸಿ, ಈ ಮಂತ್ರ ಹೇಳಿಕೊಂಡು, ಅಖಂಡವಾದ ತಪಸ್ಸು ಮಾಡುತ್ತಾನೆ. ಅವನ ಸುತ್ತ ಹುತ್ತ ಬೆಳೆಯಿತು. ಕ್ರೂರವಾದ ಮೃಗಗಳು ಬಂದು ಹೆದರಿಸಿದವು. ಆದರೂ ಹಸಿವೆ, ನೀರಡಿಕೆ, ಭಯ, ನಿದ್ರೆ ಎಲ್ಲವನ್ನೂ ಎದುರಿಸಿ ಉಗ್ರವಾದ ತಪಸ್ಸು ಮಾಡುತ್ತಾನೆ.
ಇವನ ತಪಸ್ಸಿನ ಕಾವು ದೇವಲೋಕವನ್ನು ಮುಟ್ಟುತ್ತದೆ. ಆಗ ಎಲ್ಲಾ ದೇವತೆಗಳು ನಾರಾಯಣನ ಮೊರೆ ಹೋಗುತ್ತಾರೆ. ಆಗ ನಾರಾಯಣನು ತನ್ನ ದಿವ್ಯ ದೃಷ್ಟಿಯಿಂದ ತಪಸ್ಸು ಮಾಡುತ್ತಿದ್ದ ಬಾಲಕನನ್ನು ನೋಡಿ, ಪ್ರೀತಿಯಿಂದ ತಲೆನೇವರಿಸಿ, ಮಗೂ ಏಳು, ನಾನು ಬಂದಿದ್ದೇನೆ, ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ. ನಿನಗೆ ಏನು ವರ ಬೇಕು ಕೇಳು ಎಂದು ನಾರಾಯಣ ಹೇಳುತ್ತಾನೆ.
ಆಗ ಧೃವಕುಮಾರನು, ಆ ನಾರಾಯಣ ದರ್ಶನ ಮಾತ್ರದಿಂದಲೇ ಪುನೀತನಾಗಿ, ತನ್ನೆಲ್ಲಾ ಆಸೆ ಮರೆತು, ಪ್ರಭು ನಿನ್ನ ದರುಶನ ಭಾಗ್ಯ ಸಿಕ್ಕಿತಲ್ಲ ಅಷ್ಟೇ ಸಾಕು. ನನಗಿನ್ನೇನೂ ಬೇಡ ಎಂದು ಹೇಳುತ್ತಾನೆ. ಆಗ ಶ್ರೀ ಮನ್ನಾರಯಣನು ಅವನ ತಪಸ್ಸಿನ ಕಾರಣ ತಿಳಿದು, ನಡೀ ನಿನ್ನ ತಂದೆಯ ತೊಡೆಯ ಮೇಲೆ ಕುಳಿತು,ಅವರ ಪ್ರೀತಿಗೆ ಪಾತ್ರನಾಗು ಎಂದು ಹೇಳಿ ಅವರ ಬಳಿ ಕರೆದೊಯ್ಯುತ್ತಾನೆ.
ಅಷ್ಟು ಹೊತ್ತಿಗೆ ಮಗನ ಬಗ್ಗೆ ಉತ್ತಾನಪಾದನಿಗೆ ಮತ್ತು ಅವನ ರಾಣಿಯರಿಗೆ ಎಲ್ಲಾ ವಿಷಯ ಗೊತ್ತಾಗಿ, ಅವರ ತಪ್ಪು ತಿದ್ದಿಕೊಂಡು, ದೇವರಲ್ಲಿ ಕ್ಷಮೆ ಬೇಡುತ್ತಾರೆ. ಮಗನಿಂದ ಅವರಿಗೂ ದೇವರದರ್ಶನ ಭಾಗ್ಯ ಸಿಕ್ಕಿತು ಎಂದು ಕೊಂಡಾಡುತ್ತಾರೆ.
ನಂತರ ನೂರ್ಕಾಲ ಸುಖವಾಗಿದ್ದು ನಕ್ಷತ್ರ ಮಂಡಲದಲ್ಲಿ ಅವನೇ ಅತೀಹೊಳೆಯುವ ಧೃವ ನಕ್ಷತ್ರ ಆಗುತ್ತಾನೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.