ಮಹತ್ಕಾರ್ಯಕ್ಕೆ ಪ್ರತಿಯೊಬ್ಬರ ಸಹಕಾರ ಅವಶ್ಯಕ
ಲಾವಕಶ್ಚ ವರಾಹಶ್ಚ ಮಹಿಷಃ ಕುಂಜರಸ್ತಥಾ|
ಕರ್ತಾ ಕಾರಯಿತಾ ಚೈವ ಷಡೇತೇ ಸಮಭಾಗಿನಃ||
ಲಾವಕ ಅಂದರೆ ಗುಬ್ಬಿ. ಅದು ತನ್ನ ಕೊಕ್ಕಿನಿಂದ ಮಣ್ಣನ್ನು ಅಗೆಯಿತು. ಅಲ್ಲಿ ಚಿಕ್ಕದೊಂದು ಗುಳಿ ಉಂಟಾಯ್ತು. ಆ ಗುಳಿಯಲ್ಲಿ ಮಳೆ ನೀರು ತುಂಬಿತು. ಅಬ್ಬಬ್ಬಾ ಅಂದರೆ ಎಷ್ಟು, ಒಂದು ಬೊಗಸೆ ತುಂಬುವಷ್ಟು ನೀರು ಆಗಬಹುದು. ಆದರೆ ಗುಬ್ಬಿಗೆ ಅಷ್ಟು ಸಾಕು. ಗುಬ್ಬಿ ಅದರಲ್ಲಿ ಸ್ನಾನ ಮಾಡಿತು. ಆಮೇಲೆ ಒಂದು ಹಂದಿ(ವರಾಹ) ಅಲ್ಲಿಗೆ ಬಂದು ಅದೇ ಗುಳಿ ಯನ್ನು ತನ್ನ ಮೂತಿಯಿಂದ ಕೊರೆದು ದೊಡ್ಡದಾಗಿಸಿತು.
ಕೆಸರಿನಲ್ಲಿ ಹಂದಿ ಹೊರಳಾಡಿತು, ಖುಷಿಪಟ್ಟಿತು. ಅದಾದ ಮೇಲೆ ಅಲ್ಲಿಗೆ ಒಂದು ಕೋಣ(ಮಹಿಷ) ಬಂತು. ಹೊಂಡದಲ್ಲಿ ಆರಾಮಾಗಿ ಮಲಗಿ ಮುದಗೊಂಡಿತು.
ಕೊನೆಗೊಂದು ಆನೆ(ಕುಂಜರ) ಆ ಹೊಂಡಕ್ಕಿಳಿದು ಅದನ್ನು ಮತ್ತೂ ದೊಡ್ಡದಾಗಿಸಿತು. ತುಂಬಿದ ನೀರನ್ನು ಸೊಂಡಿಲಿನಿಂದ ಮೈಮೇಲೆಲ್ಲ ಸಿಂಪಡಿಸಿಕೊಂಡು ಸಂತಸಪಟ್ಟಿತು.
ಇವೆಲ್ಲ ಪ್ರಾಣಿಗಳು ನೀರಿನಾಟ ಆಡುತ್ತಿರುವುದನ್ನು ಆ ರಾಜ್ಯದ ರಾಜ ಮತ್ತು ಮಂತ್ರಿ ಅಲ್ಲೇ ವಾಯುವಿಹಾರಕ್ಕೆಂದು ಬಂದಿದ್ದವರು ಗಮನಿಸಿದರು.
ರಾಜ ಯೋಚಿಸಿದನು: ‘ಈ ನೀರಿನ ಹೊಂಡಕ್ಕೆ ಮೆಟ್ಟಿಲು ಮತ್ತು ಸುತ್ತಲೂ ಕಟ್ಟೆ ಕಟ್ಟಿಸಿದರೆ ತುಂಬ ಚೆನ್ನಾಗಿರುತ್ತದೆ. ಪ್ರಜೆ ಗಳಿಗೂ ಅನುಕೂಲವಾಗುತ್ತದೆ’ ಎಂದು. ಒಡನೆಯೇ ಮಂತ್ರಿಗೆ ಆದೇಶವಿತ್ತನು. ಕಟ್ಟೆ ಕಟ್ಟುವ ಕಾಮಗಾರಿಯು ಮಂತ್ರಿಯ
ಉಸ್ತುವಾರಿಯಲ್ಲಿ ನಡೆಯಿತು. ಪ್ರಪಂಚದ ಮೊತ್ತಮೊದಲ, ಸುಂದರವಾದ ಕೆರೆಯ ನಿರ್ಮಾಣವಾಯ್ತು.
ಆದರೆ, ತಾನೇ ಆ ಕೆರೆಯನ್ನು ನಿರ್ಮಿಸಿದ್ದೆಂದು ರಾಜ ಹೇಳಿಕೊಳ್ಳಬಹುದೇ? ಖಂಡಿತ ಇಲ್ಲ. ಅವನೇನಿದ್ದರೂ ಮಂತ್ರಿಯ ಮೂಲಕ, ಕೆಲಸಗಾರರ ಮೂಲಕ ಕೆರೆಯನ್ನು ಮಾಡಿಸಿದವನು(ಕಾರಯಿತಾ) ಅಷ್ಟೇ. ಮಂತ್ರಿ ಮತ್ತು ಕೆಲಸಗಾರರು ತಾವೇ ಆ ಕೆರೆಯ ನಿರ್ಮಾತೃರು ಎನ್ನಬಹುದೇ? ಇಲ್ಲ.
ಅವರು ಕಟ್ಟೆ ಮತ್ತು ಮೆಟ್ಟಿಲುಗಳನ್ನು ಕಟ್ಟಿದವರು, ಆ ಮೂಲಕ ಕರ್ತಾ ಎನಿಸಿ ಕೊಂಡವರು ಹೌದಾದರೂ ಅಲ್ಲಿ ನೀರಿನ ಹೊಂಡ ಮೊದಲೇ ಇತ್ತಲ್ಲವೇ? ಹಾಗೆ ನೋಡಿದರೆ ಕೆರೆ ನಿರ್ಮಾಣದ ಶ್ರೇಯಸ್ಸಿ ನಲ್ಲಿ ರಾಜ, ಮಂತ್ರಿ ಮತ್ತು ಕೆಲಸಗಾರರದು ಮಾತ್ರವಲ್ಲ, ಆನೆ, ಕೋಣ, ಹಂದಿ, ಮತ್ತು ಗುಬ್ಬಿ – ಎಲ್ಲರದೂ ಸಮಪಾಲು ಇದೆ!
ಪ್ರಪಂಚದಲ್ಲಿ ಎಲ್ಲ ವಿಚಾರಗಳೂ ಹೀಗೆಯೇ. ನಾನೇ ಮಾಡಿದ್ದು, ನನ್ನಿಂದಲೇ ಎಲ್ಲ ಆದದ್ದು ಎಂಬ ಅಹಂಕಾರ ಸಲ್ಲದು. ಗುಬ್ಬಿಯಂಥ ಚಿಕ್ಕ ಪಕ್ಷಿಯಿಂದ ಹಿಡಿದು, ಆನೆಯಂಥ ಬೃಹದ್ಗಾತ್ರದ ಜೀವಿಗಳ ಕೊಡುಗೆ, ಸಹಕಾರ ಎಲ್ಲದರಲ್ಲೂ ಎಲ್ಲ ಕಡೆಯೂ ಇರುತ್ತದೆ. ಒಂದು ಸಾಧನೆಯಲ್ಲಿ, ಅದರ ಯಶಸ್ಸಿನಲ್ಲಿ, ಮತ್ತು ಪ್ರಯೋಜನದಲ್ಲಿ ಎಲ್ಲರೂ ಭಾಗಿಗಳಾಗುತ್ತಾರೆ.
ಒಂದು ಮಹಾಕಾರ್ಯದಲ್ಲಿ ಕೆಲವರದು ಪ್ರತ್ಯಕ್ಷ, ಹಲವರದು ಪರೋಕ್ಷ ಸಹಕಾರವಿರಬಹುದು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.