ದಿನಕ್ಕೊಂದು ಕಥೆ
ಮತ್ತೊಮ್ಮೆ ಹುಟ್ಟುವುದಾದರೆ ಏನಾಗಿ ಹುಟ್ಟಲು ಬಯಸುತ್ತೀರಿ.?
ಈ ಸರಳ ಪ್ರಶ್ನೆಯನ್ನು ನಮಗೆ ಯಾರಾದರೂ ಕೇಳಿದರೆ ನಮ್ಮ ಉತ್ತರ ಏನಿರಬಹುದು? “ನಿಮಗೆ ಮತ್ತೊಮ್ಮೆ ಹುಟ್ಟಿ ಬರುವ ಅವಕಾಶ ಸಿಕ್ಕರೆ ಏನಾಗಿ ಹುಟ್ಟಿ ಬರಲು ಬಯಸುತ್ತೀರಿ?”ನಾವು ಉತ್ತರ ನೀಡುವ ಮುಂಚೆ ಇದೇ ಪ್ರಶ್ನೆಗೆ ಕೆಲವು ಮಹಾನುಭಾವರು ನೀಡಿದ ಉತ್ತರಗಳನ್ನು ನೋಡಬಹುದು!
ಸ್ವಲ್ಪ ವರ್ಷಗಳ ಹಿಂದೆ ಮೈಸೂರಿನ ಜೆಎಸ್‌ಎಸ್ ವಿಶ್ವವಿದ್ಯಾಲಯದ ಸಮಾರಂಭದಲ್ಲಿ ಮಾಜಿ ರಾಷ್ಟ್ರಪತಿ ದಿವಂಗತ ಎ.ಪಿ.ಜೆ ಅಬ್ದುಲ್ ಕಲಾಂ ಅವರು ಭಾಗವಹಿಸಿ ಉಪನ್ಯಾಸ ನೀಡಿದ್ದರು. ಪೂಜ್ಯ ಸುತ್ತೂರು ಶ್ರೀಗಳವರು ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಉಪನ್ಯಾಸದ ನಂತರ ಕಲಾಂರವರು ವಿದ್ಯಾರ್ಥಿಗಳು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತಿದ್ದ ಶೈಲಿ ಎಲ್ಲರನ್ನೂ ಕುರ್ಚಿಯ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿತ್ತು.
ಒಮ್ಮೆ ವಿದ್ಯಾರ್ಥಿ ಕಲಾಂ ಅವರನ್ನು “ತಾವು ವಿಜ್ಞಾನಿಯಾಗಿದ್ದವರು. ಇಸ್ರೋದ ಅಧ್ಯಕ್ಷರಾಗಿದ್ದವರು. ಭಾರತವನ್ನು ರಾಕೆಟ್ ತಂತ್ರಜ್ಞಾನ ಕ್ಷೇತ್ರದಲ್ಲಿ ಮುನ್ನಡೆಸಿದವರು. ಭಾರತರತ್ನ ಪ್ರಶಸ್ತಿ ವಿಜೇತರು. ರಾಷ್ಟ್ರಪತಿಯಾಗಿ ಅಮೂಲ್ಯ ಸೇವೆ ಸಲ್ಲಿಸಿದವರು. ಈಗ ನಿಮಗೆ ಮತ್ತೊಮ್ಮೆ ಹುಟ್ಟಿ ಬರುವ ಅವಕಾಶವನ್ನು ಕೊಟ್ಟರೆ ನೀವು ಏನಾಗಿ ಹುಟ್ಟಲು ಬಯಸುತ್ತೀರಿ?”ಎಂದು ಪ್ರಶ್ನಿಸಿದರು. ಕಲಾಂ ಉತ್ತರಿಸಲು ಒಂದು ಕ್ಷಣವೂ ಹಿಂದೆ ಮುಂದೆ ನೋಡಲಿಲ್ಲ.
ತಕ್ಷಣ ನಗುನಗುತ್ತಾ “ನಾನು ಒಳ್ಳೆಯ ಮನುಷ್ಯನಾಗಿ ಹುಟ್ಟಲು ಬಯಸುತ್ತೇನೆ” ಎಂದು ಉತ್ತರಿಸಿದರು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಚಪ್ಪಾಳೆಯ ಸುರಿಮಳೆಯಾಯಿತು. ಆ ವಿದ್ಯಾರ್ಥಿ ಮತ್ತೊಮ್ಮೆ ಎದ್ದು ನಿಂತು, ‘ಒಳ್ಳೆಯ ಮನುಷ್ಯನಾಗಿಯೇ ಹುಟ್ಟಬೇಕೆಂದು ಏಕೆ ಬಯಸುತ್ತೀರಿ?” ಎಂದು ಕೇಳಿದ. ಅವರು ‘ನಾನು ಒಳ್ಳೆಯ ಮನುಷ್ಯನಾದರೆ ಮಾತ್ರ ಒಳ್ಳೆಯ ವಿಜ್ಞಾನಿಯಾಗಬಹುದು! ಒಳ್ಳೆಯ ರಾಷ್ಟ್ರಪತಿಯೂ ಆಗಬಹುದು!” ಎಂದಾಗ ಸಭಾಂಗಣದಲ್ಲಿ ಮತ್ತೆ ಚಪ್ಪಾಳೆಯ ಸುರಿಮಳೆ!
ಪೂಜ್ಯರಾದ ಸ್ವಾಮಿ ಚಿನ್ಮಯಾನಂದಜೀಯವರು ಒಮ್ಮೆ ತಮ್ಮ ಉಪನ್ಯಾಸದಲ್ಲಿ ಹೇಳಿದ್ದ ಒಂದು ಘಟನೆ. ಒಬ್ಬ ಹಿರಿಯ ನ್ಯಾಯಾಧೀಶರಿದ್ದರು. ಒಳ್ಳೆಯ ಹೆಸರನ್ನು ಗಳಿಸಿದ್ದವರು. ವೃತ್ತಿಗೂ, ಹುದ್ದೆಗೂ ಗೌರವ ತಂದುಕೊಟ್ಟವರು. ಅವರ ನಿವೃತ್ತಿ ಸಮಯದಲ್ಲಿ ಅವರನ್ನೂ ಇದೇ ರೀತಿಯ ಪ್ರಶ್ನೆಯನ್ನು “ತಾವು ನ್ಯಾಯಾಧೀಶರಾಗಿ ಸ್ತುತ್ಯರ್ಹ ಸೇವೆ ಸಲ್ಲಿಸಿದ್ದೀರಿ! ತಮಗೆ ಮತ್ತೊಂದು ಅವಕಾಶ ಸಿಕ್ಕರೆ ಏನಾಗಬೇಕೆಂದು ಬಯಸುತ್ತೀರಿ?” ಎಂದು ಕೇಳಲಾಯಿತು.
ಅವರು ‘ನಾನು ವೈದ್ಯನಾಗಲು ಬಯಸುತ್ತೇನೆ. ಏಕೆಂದರೆ ನಾನು ನ್ಯಾಯಾಧೀಶನಾಗಿ ಹಲವರಿಗೆ ಜೈಲು ಶಿಕ್ಷೆ, ಮತ್ತೆ ಕೆಲವರಿಗೆ ಗಲ್ಲು ಶಿಕ್ಷೆ ವಿಧಿಸಿ ಪ್ರಾಣಾಪಾಯ ತಂದಿರಬಹುದು! ವೈದ್ಯನಾದರೆ ಹಲವರ ಪ್ರಾಣವನ್ನಾದರೂ ಉಳಿಸಬಹುದೆಂಬ ಬಯಕೆ! ಅದೂ ಅಲ್ಲದೇ ನನಗೆ ಬಾಲ್ಯದಿಂದಲೂ ಡಾಕ್ಟರಾಗಬೇಕೆಂಬ ಆಸೆಯಿತ್ತು.
ಆದರೆ ಪರಿಸ್ಥಿತಿಗಳು ನನ್ನನ್ನು ನ್ಯಾಯಾಂಗಕ್ಕೆ ತಂದವು!” ಎಂದು ಹೇಳಿ ನಕ್ಕರು. ನಕ್ಕುಸುಮ್ಮನಾಗಲಿಲ್ಲ. ನಿವೃತ್ತಿಯಾದ ನಂತರ ಹೋಮಿಯೋಪಥಿ ವೈದ್ಯಶಾಸ್ತ್ರವನ್ನು ಅಧ್ಯಯನ ಮಾಡಿ ಕೆಲವು ವರ್ಷಗಳ ಕಾಲ ಡಾಕ್ಟರಿಕೆ ಮಾಡಿ ತಮ್ಮ ಆಸೆಯನ್ನು ಕಾರ್ಯರೂಪಕ್ಕೆ ತಂದರಂತೆ!
ಭಾರತದ ಅಣುವಿಜ್ಞಾನಿ ಕ್ಷೇತ್ರದ ಹಿರಿಯ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಒಬ್ಬ ಮಹಾನುಭಾವರು ತಮ್ಮ ನಿವೃತ್ತಿಯ ನಂತರ ಶಾಲೆಯ ಸಂಗೀತ ಮಾಸ್ತರರಾಗಿ ಮಕ್ಕಳೊಂದಿಗೆ ಕಾಲ ಕಳೆಯಬೇಕೆಂದು ನನ್ನಾಸೆ ಎನ್ನುತ್ತಿದ್ದರು. ನಿವೃತ್ತಿಯ ನಂತರ ಸುಮಾರು ವರ್ಷ ಸಂಗೀತ ಕಲಿತರು. ಒಂದು ಶಾಲೆಯಲ್ಲಿ ಮಕ್ಕಳಿಗೆ ವಾರಕ್ಕೊಂದು ದಿನ ಸಂಗೀತ ಹೇಳಿಕೊಡುತ್ತಿದ್ದರು. ಈಗ ನಮಗೆ ಅದೇ ಪ್ರಶ್ನೆ “ನಿಮಗೆ ಮತ್ತೊಂದು ಅವಕಾಶ ಸಿಕ್ಕರೆ ಏನಾಗಬೇಕೆಂದು ಬಯಸುತ್ತೀರಿ?” ಎಂದರೆ ನಿಮ್ಮ ಉತ್ತರವೇನು? ಮತ್ತು ಆ ದಿಕ್ಕಿನಲ್ಲಿ ನಿಮ್ಮ ಪ್ರಯತ್ನವೇನು? ಯೋಚಿಸಲು ಒಳ್ಳೆಯ ವಿಷಯವಲ್ಲವೇ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.