ಕಥೆ

ಅಣ್ಣ ತಮ್ಮಂದಿರ ಮಧ್ಯೆ ಅಸೂಯೆ ಬೇಡ.

ದಿನಕ್ಕೊಂದು ಕಥೆ

ದಿನಕ್ಕೊಂದು ಕಥೆ

ಅಣ್ಣ ತಮ್ಮಂದಿರ ಮಧ್ಯೆ ಅಸೂಯೆ ಬೇಡ

ಶ್ರೀಮಂತ ವ್ಯಾಪಾರಿಯೊಬ್ಬನಿಗೆ ಮೂವರು ಗಂಡು ಮಕ್ಕಳಿದ್ದರು. ಆತ ಮೂವರನ್ನೂ ಸಮಾನವಾಗಿ ಪ್ರೀತಿಸುತ್ತಿದ್ದರೂ ಹಿರಿಯ ಮಗನಿಗೆ ಹೆಚ್ಚಿನ ಜವಾಬ್ದಾರಿ ನೀಡುತ್ತಿದ್ದ. ಇದು ಉಳಿದ ಇಬ್ಬರಿಗೆ ಸಹಿಸಲಾಗದ ವಿಷಯವಾಗಿತ್ತು. ನಮ್ಮಿಬ್ಬರನ್ನು ಕಡೆಗಣಿಸಿ ಎಲ್ಲ ಆಸ್ತಿಯನ್ನೂ ಅಣ್ಣನ ಹೆಸರಿಗೇ ಬರೆದು ಬಿಟ್ಟರೆ ಎಂಬ ಸಂಶಯ, ಅಸೂಯೆ ಅವರನ್ನು ಕಾಡತೊಡಗಿತು.

ಒಂದು ದಿನ ಇಬ್ಬರೂ ತಂದೆಯ ಬಳಿ ಹೋಗಿ “ನೀವು ಅಣ್ಣನಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದೀರಿ. ಅವನು ಮಾತ್ರ ಕೆಲಸ ಮಾಡಬಲ್ಲ, ನಂಬಿಕಸ್ಥ ಎಂದು ಭಾವಿಸಿ ನಮ್ಮನ್ನು ಕಡೆಗಣಿಸುತ್ತಿರುವುದು ಚೂರೂ ಸರಿಯಿಲ್ಲ” ಎಂದು ತಮ್ಮ ಅಸಮಾಧಾನವನ್ನು ಸಿಟ್ಟಿನಿಂದ ಹೊರಗೆ ಹಾಕಿದರು.

ವ್ಯಾಪಾರಿ ಏನನ್ನೂ ಹೇಳಲಿಲ್ಲ. ಬದಲಿಗೆ ಮೂರು ಮಕ್ಕಳನ್ನು ಹತ್ತಿರಕ್ಕೆ ಕರೆದು ಪ್ರತಿಯೊಬ್ಬರಿಗೂ ತಲಾ ನೂರು ರುಪಾಯಿಗಳನ್ನು ಕೈಯಲ್ಲಿಟ್ಟ. “ನಾನು ನಿಮಗೊಂದು ಸವಾಲು ಹಾಕುತ್ತಿದ್ದೇನೆ. ನಿಮಗೆ ಕೊಟ್ಟಿರುವ ಹಣದಲ್ಲಿ ನೀವು ಯಾವ ವಸ್ತುವನ್ನು ಬೇಕಾದರೂ ಖರೀದಿಸಬಹುದು.

ಆದರೆ ಆ ವಸ್ತುವಿನಿಂದ ನಿಮ್ಮ ನಿಮ್ಮ ಕೋಣೆಗಳನ್ನು ಪೂರ್ತಿಯಾಗಿ ತುಂಬಿಸಬೇಕು. ಯಾರು ತಮ್ಮ ಕೋಣೆಯನ್ನು ಪೂರ್ತಿಯಾಗಿ ತುಂಬಿಸುತ್ತಾರೋ ಅವರು ನನ್ನ ವ್ಯಾಪಾರಕ್ಕೆ, ಆಸ್ತಿಗೆ ವಾರಸುದಾರರು” ಎಂದು ಸವಾಲನ್ನೊಡ್ಡಿದ. ಕಿರಿಯ ಮಗ ಸಂತೆಗೆ ಹೋದ. ಕೊಟ್ಟಿರುವ ನೂರು ರುಪಾಯಿಯಲ್ಲಿ ಯಾವ ವಸ್ತು ಖರೀದಿಸಿದರೆ ಕೋಣೆ ತುಂಬುತ್ತದೆ ಎಂದು ಬಹಳ ಹೊತ್ತು ಯೋಚಿಸಿದ.

ಕೊನೆಗೆ ಆತನಿಗೊಂದು ಉಪಾಯ ಹೊಳೆಯಿತು. ಆತ ನೂರು ರುಪಾಯಿಗೆ ಒಣ ಹುಲ್ಲನ್ನು ಖರೀದಿ ಮಾಡಿದ. ಆದರೆ ಅಷ್ಟು ಹುಲ್ಲಿನಿಂದ ಅರ್ಧ ಕೋಣೆಯನ್ನೂ ತುಂಬಲಾಗಲಿಲ್ಲ. ಎರಡನೆಯ ಮಗ ಸಂತೆಯಲ್ಲಿ ನೂರು ರುಪಾಯಿಗೆ ಹತ್ತಿ ಖರೀದಿಸಿದ. ಅಷ್ಟು ಹತ್ತಿಯಿಂದಲೂ ಕೋಣೆ ಭರ್ತಿಯಾಗಲಿಲ್ಲ.

ವ್ಯಾಪಾರಿ ಅವರಿಬ್ಬರನ್ನೂ ಕರೆದು ಅಣ್ಣನ ಕೋಣೆಗೆ ಹೋಗಿ ನೋಡಿ ಬನ್ನಿ ಎಂದು ಕಳಿಸಿದ. ಇಬ್ಬರೂ ಅಣ್ಣನ ಕೋಣೆಗೆ ಹೋದರು. ಅವರಿಬ್ಬರಿಗೂ ಅಚ್ಚರಿ ಕಾದಿತ್ತು. ಹಿರಿಯ ಮಗ ಏನನ್ನು ಖರೀದಿಸಿದ್ದ ಗೊತ್ತೇ? ಆತ ಒಂದಷ್ಟು ಮೇಣದ ಬತ್ತಿಗಳನ್ನು ಹಚ್ಚಿಟ್ಟಿದ್ದ. ಅದರಿಂದ ಬಂದ ಬೆಳಕು ಇಡೀ ಕೋಣೆಯನ್ನಾವರಿಸಿತ್ತು.

ಅಣ್ಣನ ಬುದ್ಧಿವಂತಿಕೆಯನ್ನು ನೋಡಿ ತಮ್ಮಂದಿರಿಗೆ ನಾಚಿಕೆಯಾಯಿತು. ತಂದೆಯೇಕೆ ತಮ್ಮಿಬ್ಬರಿಗಿಂತ ಅಣ್ಣನನ್ನು ನಂಬುತ್ತಾರೆ, ಜವಾಬ್ದಾರಿಗಳನ್ನು ವಹಿಸುತ್ತಾರೆ ಎಂಬುದರ ಅರಿವಾಯಿತು. ಆತನ ಬಗ್ಗೆ ಅಸೂಯೆ ಪಟ್ಟಿದ್ದಕ್ಕೆ ಕ್ಷಮೆ ಯಾಚಿಸಿದರು. ಅವರಂತೆ ತಾವೂ ಆಗುತ್ತೇವೆಂದು ತಂದೆಗೆ ಮಾತು ಕೊಟ್ಟರು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button