
ದಿನಕ್ಕೊಂದು ಕಥೆ
ತನಗಿಂತ ದೊಡ್ಡವರು ಹಲವರು..
ಒಂದು ರಾಜ್ಯದಲ್ಲಿ ರಾಜನೊಬ್ಬ ರಾಜ್ಯವಾಳುತಿದ್ದ. ಅವನಿಗೆ “ತಾನೇ ದೊಡ್ಡವನು, ತನ್ನಿಂದಲೇ ತಾಜ್ಯ ನಡೆಯುತ್ತಿದೆ, ಜನರು ತನ್ನಿಂದಲೇ ಸುಖವಾಗಿ ಜೀವನ ಸಾಗಿಸುತ್ತಿದ್ದಾರೆ ಎಂಬ ಅಹಂಕಾರದ ಭಾವನೆ” ಅವನಲ್ಲಿತ್ತು. ಆಗ ಆತ ತಾನೇ ದೊಡ್ಡವನೆಂಬುದನ್ನು ಡಂಗುರ ಸಾರಿಸಿ ಪ್ರಜೆಗಳಿಗೆ ತಿಳಿಸಿದ. ಪ್ರಜೆಗಳು ರಾಜನನ್ನು ಪೂಜಿಸತೊಡಗಿದರು. ರಾಜನ ಮಾತೆ ಸರ್ವಸ್ವವಾಯಿತು.
ಕೆಲವು ದಿನಗಳ ನಂತರ ರಾಜ ಮಾರುವೇಷದಲ್ಲಿ ಸಂಚಾರಕ್ಕೆ ಹೊರಟ. ಮಾರುವೇಷದಲ್ಲಿದ್ದ ರಾಜನನ್ನು ಯಾರೂ ಗುರುತಿಸಲಿಲ್ಲ. ಒಬ್ಬ ರೈತ ಒಂದು ಮರದ ಕೆಳಗೆ ಸುಖವಾಗಿ ಮಲಗಿದ್ದ. ರಾಜ ಅವನನ್ನು ಎಚ್ಚರಿಸಿ “ನಿನ್ನ ಸುಖನಿದ್ದೆಗೆ ಕಾರಣ ಯಾರು?’ ಎಂದು ಕೇಳಿದ. ರೈತ “ಹೊಲದಲ್ಲಿ ಕಷ್ಟಪಟ್ಟು ದುಡಿದು ಹೊಟ್ಟೆ ತುಂಬಾ ಊಟ ಮಾಡಿ ಮರದ ನೆರಳಲ್ಲಿ ಕುಳಿತಿದ್ದೆ. ಅದರಿಂದಾಗಿ ನಿದ್ದೆ ಚೆನ್ನಾಗಿ ಬಂತು. ಭೂಮಿತಾಯಿ ತುಂಬಾ ದೊಡ್ಡವಳು. ನನ್ನ ನೆಮ್ಮದಿಗೆ ಅವಳೇ ಕಾರಣ” ಎಂದನು.
ರಾಜನು ಹಾಗೆಯೇ ಮುಂದೆ ಹೊರಟ. ಅಲ್ಲೊಂದು ವೈದ್ಯಶಾಲೆ ಇತ್ತು. ಅಲ್ಲಿ ಸರದಿಯಲ್ಲಿ ನಿಂತ ಜನರನ್ನು ರಾಜನು ಮಾತನಾಡಿಸಿದ. ಅವರಲ್ಲಿ ಒಬ್ಬ “ಈ ವೈದ್ಯ ತುಂಬಾ ಜಾಣ. ಅನೇಕ ರೋಗಗಳನ್ನು ವಾಸಿ ಮಾಡಿದ್ದಾನೆ. ಇವನಿಂದಾಗಿ ನಾವು ಇಂದು ಬದುಕಿದ್ದೇವೆ. ಇವನಿಗಿಂತ ಯಾರು ದೊಡ್ಡವರಿಲ್ಲ” ಎಂದು ವೈದ್ಯನನ್ನು ಕೊಂಡಾಡಿದರು.
ರಾಜನು ಮುಂದೆ ಹೋದಾಗ ಒಂದು ಧರ್ಮಛತ್ರ ಕಂಡಿತು. ಅಲ್ಲಿ ನಿಂತ ಜನರನ್ನು ಮಾತನಾಡಿಸಿದ. ಅವರು “ಧರ್ಮಛತ್ರವನ್ನು ನಡೆಸುತ್ತಿರುವ ದಾನಿ ತುಂಬಾ ದೊಡ್ಡವರು. ಅವರು ಹಸಿದವರಿಗೆ ಅನ್ನ ನೀಡುತ್ತಾ ಬಂದಿದ್ದಾರೆ. ಅವರು ತುಂಬಾ ದೊಡ್ಡವರು” ಎಂದು ಹೇಳಿದರು. ಕೊನೆಗೆ ರಾಜನಿಗೆ ಒಂದು ಸತ್ಯ ಗೊತ್ತಾಯಿತು.
ನೀತಿ :– ಈ ಜಗತ್ತಿನಲ್ಲಿ ಯಾರೇ ಒಬ್ಬ ವ್ಯಕ್ತಿ ದೊಡ್ಡವನಾಗಲು ಸಾಧ್ಯವಿಲ್ಲ. ತನಗಿಂತ ದೊಡ್ಡವರು ಹಲವಾರು ಜನರಿದ್ದಾರೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.