ದೇಶಾಂತರ ಹೋಗಲೇ.? ಆತ್ಮಹತ್ಯೆ ಮಾಡಿಕೊಳ್ಳಲೇ.?
ನಿಮ್ಮ ಹೆಂಡತಿ ನಿಮ್ಮನ್ನು ಬಿಟ್ಟು ಹೋಗಿದ್ದಾರಾ.?
ಛೇ! ಇದೆಂತಹ ಪ್ರಶ್ನೆ? ಹೀಗೆ ಕೇಳಬಹುದೇ? ಗಾಬರಿ ಆಗಬೇಡಿ! ಈ ಪ್ರಶ್ನೆಯನ್ನು ಕೇಳಿದವರು ಪ್ರಖ್ಯಾತ ಲೇಖಕ ನಾರ್ಮನ್ ವಿನ್ಸೆಂಟ್ ಪೀಲೆ (೧೮೯೮ – ೧೯೯೩). ಸಕಾರಾತ್ಮಕ ಚಿಂತನೆಯ ಪ್ರಯೋಜನಗಳ ಬಗ್ಗೆ ಅನೇಕ ಗ್ರಂಥಗಳನ್ನು ಬರೆದಿದ್ದ ಅವರು ಉತ್ತಮ ಪ್ರವಚನಕಾರರೂ ಆಗಿದ್ದರು. ಅಸಂಖ್ಯಾತ ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದರು.
ಒಮ್ಮೆ ಅವರ ಬಳಿ ಯುವಕನೊಬ್ಬ ಬಂದನು. ಬಹಳ ಚಿಂತಾಕ್ರಾಂತನಾಗಿದ್ದನು. ಏಕೆಂದು ಕೇಳಿದಾಗ ‘ನಾನು ನನ್ನ ವ್ಯವಹಾರದಲ್ಲಿ ಸೋತಿದ್ದೇನೆ. ಹಣವನ್ನು ಕಳೆದುಕೊಂಡುಬಿಟ್ಟಿದ್ದೇನೆ. ಬರಿಗೈಯವನಾಗಿಬಿಟ್ಟಿದ್ದೇನೆ. ಮುಂದೇನು ಮಾಡಲೂ ತೋಚಲಿಲ್ಲ.
ದೇಶಾಂತರ ಹೋಗಬೇಕು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಸ್ಥಿತಿಯಲ್ಲಿದ್ದೇನೆ. ದಿಕ್ಕು ತೋಚದಂತಾಗಿದೆ. ಏನು ಮಾಡಲಿ?’ ಎಂದು ಗೋಳಾಡಿದನು. ನಾರಮನ್ನರು ನಗುನಗುತ್ತಲೇ ಆತನ ವ್ಯವಹಾರದ ಬಗ್ಗೆ ವಿಚಾರಿಸಿದರು.
ವಿದ್ಯಾವಂತನಂತೆ, ಬುದ್ಧಿವಂತನಂತೆ ಕಾಣುತ್ತಿದ್ದ ಆತ ಪ್ರಶ್ನೆಗಳಿಗೆಲ್ಲ ಉತ್ತರಿಸಿದನು. ಆನಂತರ ನಾರ್ಮನ್ ರು ‘ನಿಮ್ಮ ಪರಿಸ್ಥಿತಿ ನನಗೆ ಅರ್ಥವಾಗುತ್ತಿದೆ. ನೀವು ವ್ಯವಹಾರಸ್ಥರು. ವ್ಯವಹಾರದಲ್ಲಿ ಬ್ಯಾಲೆನ್ಸ ಶೀಟ್ ತಯಾರಿಸುತ್ತೀರಲ್ಲವೇ? ನೀವು ಕಳೆದುಕೊಂಡಿರುವ ಮತ್ತು ಉಳಿಸಿಕೊಂಡಿರುವ ವಿಷಯಗಳ ಪಟ್ಟಿ ಮಾಡೋಣ.
ಆನಂತರ ದೇಶಾಂತರವೋ, ಆತ್ಮಹತ್ಯೆಯೋ ಎಂಬುದನ್ನು ತೀರ್ಮಾನಿಸಿದರಾಯಿತು. ಒಪ್ಪಿಗೆಯೇ?’ ಎಂದು ಕೇಳಿದರು. ಯುವಕ ಒಪ್ಪಿಕೊಂಡ.
ನಾರ್ಮನ್ನರು ಕಾಗದವೊಂದನ್ನು ಯುವಕನ ಕೈಗಿತ್ತರು. ಕಾಗದದ ಮಧ್ಯೆ ಗೆರೆಯೊಂದನ್ನು ಎಳೆಸಿದರು. ಆನಂತರ ಆತ ಕಳೆದು ಕೊಂಡಿರುವುದನ್ನೆಲ್ಲ ಎಡ ಭಾಗದಲ್ಲಿ ಬರೆಯಲು ಹೇಳಿದರು.
ಆತ ತನ್ನ ಮೂಲ ಬಂಡವಾಳ, ಬ್ಯಾಂಕ್ ಸಾಲದ ಹಣ, ತಯಾರಿಕೆಯಲ್ಲಿನ ನಷ್ಟ ಮುಂತಾದವನ್ನೆಲ್ಲ ಬರೆಯುವಂತೆ ನಾರ್ಮನ್ನರು ಹೇಳಿದಾಗ, ಆತ ಇಲ್ಲಿ ಬರೆಯಲು ಏನೂ ಉಳಿದಿಲ್ಲ ಎಂದು ಬಿಟ್ಟ.
ಆತನ ಉತ್ತರವನ್ನು ನಿರೀಕ್ಷಿಸಿದ್ದವರಂತೆ ಕಂಡ ನಾರ್ಮನ್ನರು ಮುಗುಳ್ನಕ್ಕು ‘ಚಿಂತೆಯಿಲ್ಲ! ಈಗ ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಿ. ಪ್ರತಿ ಸರಿ ಉತ್ತರಕ್ಕೂ ಪ್ಲಸ್ ಎಂದು ಬಲಗಡೆ ಬರೆಯಿರಿ.
ಮೊದಲನೆಯದಾಗಿ ನಿಮ್ಮ ಹೆಂಡತಿ ನಿಮ್ಮನ್ನು ಬಿಟ್ಟು ಓಡಿ ಹೋಗಿದ್ದಾರೆಯೇ?’ ಎಂದು ಕೇಳಿದರು. ಯುವಕ ತಕ್ಷಣ ‘ಇಲ್ಲ ಆಕೆ ನನ್ನೊಂದಿಗೆ ಇದ್ದಾಳೆ’ ಎಂದನು. ಆಗ ನಾರ್ಮನ್ನರು ಹಾಗಿದ್ದರೆ ಬಲಗಡೆ ಪ್ಲಸ್ ಒಂದನ್ನು ಬರೆಯಿರಿ.
ನಿಮ್ಮ ಮಕ್ಕಳು ಸೆರೆ ಮನೆಯಲ್ಲಿದ್ದಾರೆಯೇ? ಇಲ್ಲದಿದ್ದರೆ ಮತ್ತೆ ಪ್ಲಸ್ಸನ್ನು ಬರೆಯಿರಿ. ನಿಮ್ಮ ವಿದ್ಯಾಭ್ಯಾಸದ ಡಿಗ್ರಿ ಮುಂತಾದ ಅರ್ಹತಾ ಪತ್ರಗಳನ್ನು ಕಳೆದುಕೊಂಡಿದ್ದೀರಾ ಅಥವಾ ಅವು ಉಳಿದಿವೆಯೇ? ನಿಮ್ಮ ಅನುಭವ ಕಳೆದು ಹೋಗಿದೆಯೇ? ಉಳಿದಿದೆಯೇ? ಉಳಿದಿದ್ದರೆ ಪ್ಲಸ್ ಬರೆಯಿರಿ’ ಎನ್ನುತ್ತ ಕೇಳತೊಡಗಿದರು. ಯುವಕ ಬರೆಯುತ್ತ ಹೋದ.
ಕೆಲವೇ ನಿಮಿಷಗಳಲ್ಲಿ ಆತನ ಮುಖ ಹೊಳೆಯ ತೊಡಗಿತು. ಸ್ವಲ್ಪ ಹೊತ್ತಿನ ನಂತರ ಆತನೇ ಬರೆಯುವುದನ್ನು ನಿಲ್ಲಿಸಿ ‘ಸರ್! ನಿಮ್ಮ ಮಾತು ನನಗೆ ಅರ್ಥವಾಗುತ್ತಿದೆ. ನಾನು ಕೇವಲ ಹಣವನ್ನು ಕಳೆದುಕೊಂಡಿದ್ದೇನೆ. ಆದರೆ ಹಣದಿಂದ ಅಳೆಯಲಾಗದ ಎಷ್ಟೋ ವಿಷಯಗಳು ನನ್ನಲ್ಲಿನ್ನೂ ಉಳಿದಿವೆ.
ಆರೋಗ್ಯವಿದೆ, ಉತ್ಸಾಹವಿದೆ, ಪ್ರೋತ್ಸಾಹಿಸುವ ಸಂಸಾರವಿದೆ. ಗೆಳೆಯರಿದ್ದಾರೆ. ನಾನು ಅವನ್ನೆಲ್ಲ ಮರೆತು ಬಿಟ್ಟಿದೆ. ಕಷ್ಟನಷ್ಟಗಳೇ ದೊಡ್ಡದಾಗಿ ಕಾಣುತ್ತಿದ್ದವು. ಈಗ ನನ್ನ ಕಣ್ಣು ಸ್ಪಷ್ಟವಾಗಿ ಕಾಣತೊಡಗಿದೆ. ಮತ್ತೆ ಹೊಸ ಪ್ರಾರಂಭವನ್ನು ಮಾಡುತ್ತೇನೆ’ ಎಂದು ಹೇಳಿ ಹೋದನಂತೆ.
ನಾವೀಗ ನಾರ್ಮನ್ ವಿನ್ಸೆಂಟ್ ಪೀಲೆ ಅವರಿಗೆ ಧನ್ಯವಾದಗಳನ್ನು ಅರ್ಪಿಸಬಹುದು. ನಮ್ಮೆಲ್ಲರ ಬದುಕಿನಲ್ಲೂ ಆ ಯುವಕ ಎದುರಿಸಿದ್ದಂತಹ ಪರಿಸ್ಥಿತಿ ಎದುರಾಗಿರಬಹುದಲ್ಲವೇ? ಆಗ ನಾವು ಪೀಲೆ ಮಾಡಿದಂತೆ ಬದುಕಿನ ಲೆಕ್ಕಾಚಾರ ಹಾಕಬಹುದೇ? ನಮ್ಮ ಬದುಕಿನಲ್ಲಿ ಪ್ಲಸ್, ಮೈನಸ್ಸುಗಳನ್ನು ಲೆಕ್ಕ ಹಾಕಿಕೊಂಡು ಬದುಕನ್ನು ಬದಲಾಯಿಸಿಕೊಳ್ಳಬಹುದೇ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882