
ದಿನಕ್ಕೊಂದು ಕಥೆ
ಭ್ರಾಂತಿಯ ಸಂಸಾರ
ಒಂದು ಊರಲ್ಲಿ ಒಬ್ಬ ಶ್ರೀಮಂತ. ಆತ ತನ್ನ ಶ್ರೀಮಂತಿಕೆಯಲ್ಲಿ ಮೈಮರೆತು ಹೋಗಿದ್ದ. ಅವನು ಒಂದು ದಿವಸ ಊರಹೊರಗೆ ಬೆಳೆದು ನಿಂತಿರುವ ತನ್ನ ಹೊಲವನ್ನು ನೋಡಿ ಆನಂದದಿಂದ “ಆಹಾ ! ನನ್ನ ಹೊಲಗಳು ಎಷ್ಟು ಬೆಳೆದಿದೆ ? ಎತ್ತ ನೋಡಿದರೂ ನನ್ನ ಹೊಲಗಳೇ ಎನ್ನುತ್ತ ತನ್ನ ಹೊಲವನ್ನು ದಿಟ್ಟಿಸುತ್ತ ನಿಂತಿರುವಾಗ, ಒಬ್ಬ ಹಾದಿಕಾರನು ಅಲ್ಲಿಗೆ ಬಂದು ಸ್ವಾಮೀ ಮುಂದೆ ಕಾಣುವದು ಯಾವ ಊರು ಎಂದು ಕೇಳಿದ. ಅದಕ್ಕೆ ಆ ಶ್ರೀಮಂತನು ಅಯ್ಯಾ ಇಲ್ಲಿ ಕಾಣುವ ಹೊಲಗಳೆಲ್ಲ ನನ್ನವೇ ಎಂದ. ಅದಕ್ಕೆ ಆ ಹಾದಿಕಾರನು ಇದೇನು ನಾನೊಂದು ಕೇಳಿದರೆ ಇವನೊಂದು ಉತ್ತರ ಹೇಳುತ್ತಾನೆ ಇವನಿಗೆ ನನ್ನ ಹೊಲ ನನ್ನ ಮನೆ ಎಂಬ ಭ್ರಾಂತಿ ಬಡೆದಿದೆ ಆಗಲಿ ಇನ್ನೊಮ್ಮೆ ಕೇಳಿ ನೋಡುವಾ ಎಂದು ಸ್ವಾಮಿ ನಾನು ನಿಮ್ಮ ಹೊಲಗಳನ್ನು ಕೇಳಲಿಲ್ಲ. ಮುಂದೆ ಕಾಣುವ ಊರು ಯಾವುದು ಎಂದು ವಿಚಾರಿಸಿದೆ ಎನ್ನಲಾಗಿ ಶ್ರೀಮಂತನು ಅಯ್ಯಾ ಅದೋ ಆ ಊರಲ್ಲಿ ಎತ್ತರವಾಗಿ ಕಾಣುವ ಮಹಡಿಯ ಮನೆ ನನ್ನದು ಎಂದ. ಅದಕ್ಕೆ ಆ ಹಾದಿಕಾರನು ಇವನಿಗೆ ತಾನು ತನ್ನದೆನ್ನುವ ಹುಚ್ಚು ಹಿಡಿದಿದೆ ಎಂದು ಅವನೊಡನೆ ಮಾತನಾಡುವದನ್ನು ಬಿಟ್ಟು ಮುಂದೆ ನಡೆದ.
ಶ್ರೀಮಂತನು ಮನೆಗೆ ಬಂದು ತನ್ನ ಹೆಂಡತಿಗೆ “ಏನೇ ನಾನು ಊರಲ್ಲಿರಬೇಕೋ ಇರಬಾರದೊ ಎಲ್ಲಿ ಹೋದರೂ ಈ ಹೊಲಮನೆಗಳು ನಿಮ್ಮವೇ ಏನು ಎಂದು ಕೇಳುತ್ತಾರೆ. ನಮ್ಮವೇ ಎಂದು ಅವರಿಗೆ ಹೇಳಿ ಹೇಳಿ ಸಾಕಾಗಿದೆ” ಎಂದ. ಆ ಹೆಂಡತಿಗೆ ಒಂದು ಹುಚ್ಚು ಹಿಡಿದಿತ್ತು. ಅವಳು ತನ್ನ ಗಂಡನಿಗೆ “ಏನ್ರಿ ಬಂಗಾರ ಒಡವಿ ಮಾಡಸ್ತೀನಿ ಮಾಡಸ್ತೀನಿ ಮಾಡಸ್ತೀನಿ ಅಂತ ಹಾಂಗ ಹೇಳಿಕೊಂತಾ ಬಂದ್ರಿ ಒಂದು ಕಾಸಿನ ಸರ ಮಾಡಿಸಿರಿ ಎರಡು ಕಾಸಿನ ಸರ
ಮಾಡಿಸಿರಿ ಒಟ್ಟಿಗೆ ನನ್ನ ಕೈಗೆ ಒಂಕಿ ಆದರೆ ಆಯ್ತು” ಅಂದಳು ಅದಕ್ಕೆ ಗಂಡನು ನಿನ್ನ ಇಚ್ಛೆಯಿಂದಾಗಲಿ ಎಂದ.
ಹೆಂಡತಿ ಹಿಗ್ಗಿ ಅದೇ ಆನಂದದಲ್ಲಿ ತನ್ನ ಮಗಳ ಬಳಿಗೆ ಹೋಗಿ ಮಗಳಿಗೆ “ನೋಡೇ ನಿನ್ನ ಅಪ್ಪಾ ಮನೆಗೆ ಬಂದು ನನಗೆ ಒಂದು ಕಾಸಿನ ಸರ ಬೇಕೋ ಎರಡು ಕಾಸಿನ ಸರ ಬೇಕೆ ಎಂದು ಕೇಳುತ್ತಾರೆ ನಾನೇನು ಹೇಳಬೇಕಮ್ಮಾ” ಅಂದಳು ಅದಕ್ಕೆ ಮಗಳು “ಅವ್ವಾ ನಾನು ಸಣ್ಣವಳು ನನಗೇನ ಗೊತ್ತು ಹರೆದವಗಾದರೂ ಕೊಡಿ, ಮುದುಕಗರ ಕೊಡಿ ಎಂದು ಹೇಳುತ್ತ ವೈಯಾರ ಮಾಡುತ್ತ ತಮ್ಮ ಮನೆಯಲ್ಲಿ ಕೆಲಸಮಾಡ ತಕ್ಕ ದಾಸಿಯ ಬಳಿಗೆ ಹೋದಳು.
ನೋಡಮ್ಮಾ ನನ್ನವ್ವನು “ನನ್ನ ಹರೆದವಗೆ ಕೊಡಬೇಕೋ ಮುದುಕನಿಗೆ ಕೊಡಬೇಕೋ ಎಂದು ಕೇಳುತ್ತಾಳೆ, ನಾನೇನು ಹೇಳಬೇಕು. ಯಾರಿಗಾದರೂ ಬೇಗ ಕೊಟ್ಟು ಲಗ್ನ ಮಾಡಿದರಾಯಿತು” ಎಂದು ತನ್ನ ಇಚ್ಛೆಯನ್ನು ಪ್ರಕಟಮಾಡಿದಳು. ಅದನ್ನು ಕೇಳುತ್ತ ಆ ದಾಸಿಅಮ್ಮಾ 10 ರೂಪಾಯಿಯದರ ಕೊಡಿಸಲಿ 15 ರೂಪಯಿಯದರ ಕೊಡಿಸಲಿ ನನಗೊಂದು ಉಡಾಕ ಸೀರೆ ಆದರಾಯಿತು ಎಂದಳು.
ಹೀಗೆ ಪ್ರತಿಯೊಬ್ಬರಿಗೆ ಯಾವುದರ ಇಚ್ಛೆಯುಂಟೋ ಅವರು ಅದನ್ನೆ ಬಡಬಡಿಸತ್ತಾರೆ. ಅದೇ ಸಂಸಾರದ ಭ್ರಾಂತಿ
ನೀತಿ :– ಇದೊಂದು ಹಾಸ್ಯ ಕಥೆಯಾದರೂ ಸತ್ಯ. ಯಾರ ಮನಸ್ಸಿನಲ್ಲಿ ಯಾವ ಅಪೇಕ್ಷೆಯಿರುವದೋ ಅವರು ಯಾವಾಗಲೂ ಅದನ್ನೇ ಬಡಬಡಿಸುತ್ತಿರುತ್ರಾರೆ ಎಂಬುದಕ್ಕೆ ಒಂದು ಉತ್ತಮ ಕಥೆ ಇದು.
🖊️ಸಂಗ್ರಹ🖋️
ಡಾ.ಅಭಿನವ ರಾಮಲಿಂಗ ಶಿವಶರಣ ಮಹಾಸ್ವಾಮೀಜಿ.
📞 – 9341137882.