ಶ್ರಮಕ್ಕೆ ತಕ್ಕ ಪಾಲು ಈ ಕಥೆ ಓದಿ
ದಿನಕ್ಕೊಂದು ಕಥೆ
ಗದ್ದೆ ಪಾಲು
ಒಂದೂರಿನಲ್ಲಿ ಒಬ್ಬ ರೈತನಿದ್ದ. ಅವನಿಗೆ ಮೂರು ಮಂದಿ ಮಕ್ಕಳಿದ್ದರು. ಮಕ್ಕಳಲ್ಲಿ ಜವಾಬ್ದಾರಿ ಅದೆಷ್ಟು ಮೂಡಿರುತ್ತದೆ ಎಂದು ಪರೀಕ್ಷಿಸಲೆಂದೇ ಆತ ಯೋಜಿಸಿದ. ಒಮ್ಮೆ ಮೂವರನ್ನೂ ಬಳಿ ಕರೆದು “ನನ್ನ ಪ್ರೀತಿಯ ತನುಜರೇ, ನನಗೀಗ ವಯಸ್ಸಾಗುತ್ತಿದೆ.
ನನ್ನ ಭೂಮಿಯನ್ನು ಮೂರು ಭಾಗ ಮಾಡಿ ಕೊಡುವೆ. ನಿಮ್ಮ ನಿಮ್ಮ ಜಾಗದಲ್ಲಿ ಚಿನ್ನದಂಥ ಬೆಳೆ ಬೆಳೆಯಿರಿ. ಈ ವರ್ಷಕ್ಕೆ ಬೇಕಾದಷ್ಟು ಧಾನ್ಯ ಸಂಗ್ರಹವಿದೆ. ಮುಂದಿನ ವರ್ಷಕ್ಕಾಗಿ ಈಗಿಂದೀಗಲೇ ಚುರುಕಾಗಿ, ಗುರಿಯತ್ತ ಮುನ್ನುಗ್ಗಿ” ಎಂದೇ ಬಡಿದೆಬ್ಬಿಸಿದ.
ನನಗೆ ಕೆರೆಯ ಬಳಿಯ ಗದ್ದೆಯೇ ಬೇಕು ಎಂದ ದೊಡ್ಡವ. ರೈತ ಒಪ್ಪಿದ. ಎರಡನೇ ಮಗ ಅದರ ಪಕ್ಕದ ಜಾಗ ಪಡೆದ. ದೂರದ ಜಾಗವು ಕೊನೆಯ ಮಗನ ಪಾಲಿಗಾಯ್ತು.
ಕಿರಿಯ ಮಗ ಆ ದಿನವೇ ಕಷ್ಟಪಟ್ಟು ನಲಿನಲಿದು ದುಡಿಯತೊಡಗಿದ. ತನ್ನ ಜಾಗದ ಕಳೆಯನ್ನೆಲ್ಲ ಕಿತ್ತು ಉಳಲುತೊಡಗಿದ. ಅಣ್ಣಂದಿರಿಬ್ಬರಿಗೂ ಚುರುಕಾಗುವಂತೆ ಆತನೇ ಎಚ್ಚರಿಸುತ್ತಿದ್ದ. ಆಗಲೆಲ್ಲ ಅವರಿಬ್ಬರು ನೀನು ಬಾಯಿ ಮುಚ್ಚಿಕೋ . ಮತ್ತೆ ಮಾಡಿದರಾಯಿತು. ಅವಸರವೇನಿಲ್ಲ ‘ ಎಂದು ತಟ್ಟಿಹಾರಿಸುತ್ತಲೇ ಇದ್ದರು.
ಉತ್ತು ಬಿತ್ತು ತನ್ನ ಪಾಲಿನ ಗದ್ದೆಯಲ್ಲಿ ಚೆನ್ನಾಗಿ ಫಸಲನ್ನು ಕಿರಿಯ ಮಗನು ಕೊಂಚವೂ ವಿರಮಿಸದೆ ಪಡೆದೇ ಬಿಟ್ಟನು. ಉಳಿದವರಿಬ್ಬರ ಗದ್ದೆಯಲ್ಲೂ ತಾನೇ ಶ್ರಮಿಸಿ ಫಸಲನ್ನು ಬೆಳೆದನು. ಮೂರು ಗದ್ದೆಗಳ ಫಸಲನ್ನೂ ಕಟಾವು ಮಾಡಿ ಭತ್ತವನ್ನು ಮಿಲ್ಲಿಗೆ ಸಾಗಿಸಿ ಅಕ್ಕಿಯನ್ನು ತಂದು ಅಪ್ಪನೊಡನೆ ಚಿಕ್ಕ ಮಗ “ನೋಡಪ್ಪಾ, ಎಷ್ಟೊಂದು ಮೂಟೆ.
ಅಕ್ಕಿಗಳಿವೆ. ನಾನೊಬ್ಬನೇ ಶ್ರಮಿಸಿ ಪಡೆದ ಚಿನ್ನ ಇದು” ಎಂದನು. ಭೇಷ್ ಮಗನೇ, ನಿಜವಾಗಿಯೂ ನೀನು ಮಣ್ಣಿನ ಮಗ ಹೌದು ಎಂದು ತಂದೆ ಬೆನ್ನು ತಟ್ಟಿದ. ಆಗ ದೊಡ್ಡವರಿಬ್ಬರೂ ಬಂದು ಅಪ್ಪಾ ಇದರಲ್ಲಿ ನಮ್ಮ ಪಾಲು ಕೊಡಬೇಡವೇ ? ಆಗ ರೈತ ಏನೆಲ್ಲ ಕೆಲಸ ಮಾಡಿದ್ದೀರಿ ನೀವು ? ಎಂದು ಪ್ರಶ್ನಿಸಿದ.
ಎಲ್ಲಾ ತಮ್ಮನೇ ಮಾಡಿದ ಎಂದರು ಮೆಲ್ಲಗೆ. ತಕ್ಷಣ ರೈತ ನಿಮಗೇನೂ ಕೊಡುವುದಿಲ್ಲ ಎಂದನು. ಎಲ್ಲವನ್ನೂ ಕಷ್ಟಪಟ್ಟು ದುಡಿದ ದಣಿದ ನಿಮ್ಮ ತಮ್ಮನಿಗೇ ಕೊಟ್ಟು ಬಿಡುವೆ ಎಂದ ಹಿಗ್ಗಿನಿಂದ. ತಕ್ಷಣವೇ ಅವರಿಬ್ಬರೂ ಅಪ್ಪಾ , ನಮ್ಮನ್ನು ಕ್ಷಮಿಸಿ. ನಮಗೀಗ ಪ್ರಜ್ಞೆ ಬಂದಿದೆ. ಇನ್ನು ಮುಂದೆ ಚುರುಕಾಗುವೆವು ಎಂದು ಶಿರಬಾಗಿ ವಂದಿಸಿದರು.
ನೀತಿ :– ಆಲಸ್ಯವನ್ನು ಮಾಡದೆ, “ಕೂಳಿತು ಉಂಡರೆ ಕುಡಿಕೆ ಹೊನ್ನು ಸಾಲದು” “ಕೈ ಕೆಸರಾದರೆ ಬಾಯಿ ಮೊಸರು” ಎಂಬ ಗಾದೆ ಮಾತು ಮರೆಯಬಾರದು.
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
– 9341137882.