ವಯಸ್ಸಾದವರು ಒಗ್ಗೂಡಿ ಕಳ್ಳರನ್ನೋಡಿಸಿ ಮನೆ ಸೇರಿದ ಕಥೆ
ಸಂಗೀತಗಾರರ ಸಂಮಿಲನ
ಒಂದೂರಿನಲ್ಲಿ ಒಂದು ಕತ್ತೆಯಿತ್ತು. ಅದು ಮುದಿಯಾದುದರಿಂದ ಅದನ್ನು ಸಾಯಿಸಬೇಕೆಂದು ಯಜಮಾನ ಯೋಚಿಸುತ್ತಿರುವಾಗಲೇ ಒಂದು ರಾತ್ರಿ ಕತ್ತೆ ಮನೆಬಿಟ್ಟು ಪಲಾಯನ ಮಾಡಿತು.
ಪಕ್ಕದ ಆವಂತೀ ರಾಜ್ಯಕ್ಕೆ ಹೋಗಿ ಅಲ್ಲಿ ದೊಡ್ಡ ಸಂಗೀತಗಾರನಾಗುವ ಕನಸಿನೊಂದಿಗೆ ನಿಧಾನವಾಗಿ ಹೆಜ್ಜೆ ಹಾಕಿತು. ಮರುದಿನ ಬೆಳಿಗ್ಗೆ ದಾರಿಯಲ್ಲಿ ಏದುಸಿರು ಬಿಡುತ್ತಾ ಕುಳಿತಿದ್ದ ನಾಯಿಯು ಕಣ್ಣಿಗೆ ಬಿತ್ತು.
ಕತ್ತೆ ಅದನ್ನು ಪ್ರೀತಿಯಿಂದ ಮಾತನಾಡಿಸಿತು. ಆ ನಾಯಿಯದೂ ಅದೆ ದುರವಸ್ಥೆ. ಮುದಿಯಾದ ನಾಯಿಯನ್ನು ಸಾಯಿಸಬೇಕೆಂದು ಯಜಮಾನ ಯೋಜಿಸಿದಾಗ ಅದೂ ಮನೆಯಿಂದ ತಪ್ಪಿಸಿಕೊಂಡು ಓಡಿ ಬಂದಿತ್ತು. ನಾಯಿ ಸಂತೋಷದಿಂದ ಕತ್ತೆಯನ್ನು ಹಿಂಬಾಲಿಸಿತು.
ಸ್ವಲ್ಪ ದೂರ ಹೋಗುವಾಗ ಕಾಳಬೆಕ್ಕೊಂದು ಸಿಕ್ಕಿತು. ಅದರದ್ದೂ ಅದೇ ಅವಸ್ಥೆ. ಮುದಿಯಾಯಿತೆಂದು ನೀರೊಳಗೆ ಮುಳುಗಿಸಿ ಸಾಯಿಸಲು ಅದರ ಯಜಮಾನಿ ಅಂದು ಹೊರಟಿದ್ದಳು.
ಕತ್ತೆಯನ್ನು ಅವೆಲ್ಲವೂ ಅನುಸರಿಸಿದವು. ಸ್ವಲ್ಪದೂರ ಹೋಗುವಾಗ ಗೇಟೊಂದರ ಮೇಲೆ ಹುಂಜ ಕುಳಿತಿತ್ತು. “ಭಾನುವಾರ ಬರೇ ಅತಿಥಿಗಳ ಊಟಕ್ಕೆಂದೇ ನನ್ನ ಕೊರಳು ಕುಯ್ಯೋ ಯೋಚನೆ ಮಾಡ್ತಿದ್ದಾಳೆ ನನ್ನ ಯಜಮಾನಿ . ಹಾಗೆಂದೇ ಅಳುತ್ತಿರುವೆ” ಎಂದಿತದು. ಆಗ ಕತ್ತೆ ಅದನ್ನು ಜತೆಗೆ ಸೇರಿಸಿಕೊಂಡು ನಡೆಯಿತು.
ಕಾಡಿನ ಒಂದು ದಟ್ಟ ಮರದ ಕೆಳಗೆ ಆ ರಾತ್ರಿ ಎಲ್ಲರೂ ಬೀಡು ಬಿಟ್ಟರು. ಕತ್ತೆ ಮತ್ತು ನಾಯಿ ಹುಲ್ಲಿನ ಮೇಲೆ ಮಲಗಿದವು. ಬೆಕ್ಕು ಮರದ ರೆಂಬೆಯಲ್ಲಿ ಮಲಗಿತು. ಹುಂಜ ಮರದ ತುತ್ತ ತುದಿಗೇರಿ ಕಂಡಾಗ ದೂರದಲ್ಲೊಂದು ಬೆಳಕು ಕಂಡಿತು. ತಕ್ಷಣವೇ ಅದು ಆ ಬೆಳಕಿನತ್ತ ಹೋಗಲು ಎಲ್ಲರನ್ನೂ ಕರೆಯಿತು. ಮನೆಯ ಸಮೀಪಕ್ಕೆ ಬಂದರು. ಎಲ್ಲರಿಗಿಂತ ಎತ್ತರವಾದ ಕತ್ತೆ ಕಿಟಕಿಗೆ ಮುಖ ತೂರಿಸಿ ಒಳಗೆ ನೋಡಿ “ದೊಡ್ಡ ಮೇಜಿನ ಮೇಲೆ ನಾನಾ ಭಕ್ಷ್ಯಗಳಿವೆ . ಕಳ್ಳರು ತಿನ್ನುತ್ತಿದ್ದಾರೆ” ಎಂದಿತು.
ಕಿಟಕಿಯ ಮೇಲೆ ಕತ್ತೆ ಮುಂಗಾಲಿಟ್ಟು ನಿಂತಿತು. ಅದರ ಬೆನ್ನ ಮೇಲೆ ನಾಯಿ ನಿಂತಿತು. ನಾಯಿಯ ಬೆನ್ನ ಮೇಲೆ ಬೆಕ್ಕು ಕುಳಿತಿತು. ಬೆಕ್ಕಿನ ತಲೆಯ ಮೇಲೆ ಹುಂಜ. ಎಲ್ಲ ಪ್ರಾಣಿಗಳು ಒಟ್ಟಿಗೇ ಸಂಗೀತ ಆರಂಭಿಸಿದವು. ಕತ್ತೆ ಅರಚಿತು. ನಾಯಿ ಬೊಗಳಿತು. ಬೆಕ್ಕು ಮಿಯಗುಟ್ಟಿತು. ಹುಂಜ ಒರಲಿತು. ಆನಂತರ ಒಂದೇ ಉಸುರಿನಲ್ಲಿ ಅವೆಲ್ಲವೂ ಕಿರುಚುತ್ತಾ ಕಿಟಕಿ ಮೂಲಕ ಒಳಗೆ ನುಗ್ಗಿದವು. ಆಗ ಕಳ್ಳರು ಹೆದರಿ ಚೆಲ್ಲಾಪಿಲ್ಲಿಯಾಗಿ ಓಡಿ ಹೋದರು.
ಆಗ ಪ್ರಾಣಿಗಳು ಅಳಿದುಳಿದ ತಿಂಡಿಯನ್ನು ಗಬಗಬನೆ ತಿಂದುವು. ಹೊಟ್ಟೆ ತುಂಬಿದ ನಂತರ ಮನೆಯೊಳಗೇ ಅಲ್ಲಲ್ಲೇ ಮಲಗಿದವು. ಇತ್ತ ಕಳ್ಳರು “ಎಲ್ಲರೂ ನಿಶ್ಯಬ್ದವಾಗಿದೆ. ಹಾಯಾಗಿರೋಣ” ಎಂದು ಒಳಗೆ ಬಂದರು. ಮನೆಯೊಳಗೆ ದೀಪಹಚ್ಚಲೆಂದು ಬೆಂಕಿ ಕಡ್ಡಿ ಹಿಡಿದು ಒಲೆಯ ಬಳಿ ಒಬ್ಬ ಹೋದ. ಅಲ್ಲಿ ಮಿನುಗುತ್ತಿರುವ ಬೆಕ್ಕಿನ ಕಣ್ಣಗಳನ್ನು ಕಂಡು ಕಂಡ ಎಂದೇ ಭಾವಿಸಿ ಕಡ್ಡಿಯನ್ನು ಊದಿದಾಗ ಬೆಕ್ಕು ಸಿಟ್ಟಿನಿಂದ ಅವನ ಮುಖ ಪರಚಿತು.
ಕಳ್ಳ ಗಲಿಬಿಲಿಯಲ್ಲಿ ಓಡಿದಾಗ ನಾಯಿ ಅವನ ಕಾಲಿಗೆ ಕಚ್ಚಿತು. ಅಲ್ಲಿಂದ ಅವನು ಹಿತ್ತಲಿಗೆ ಹಾರಿದಾಗ ಕತ್ತೆ ಒದೆಯಿತು. ಇದನ್ನು ಕಂಡ ಹುಂಜ ಒಂದೇ ಸಮನೆ ‘ಕೋ ಕೋ: ಎಂದು ಕಿರುಚಿತು. ಕಳ್ಳನಂತೂ ಸಂಗಡಿಗರೊಂದಿಗೆ ಜೀವ ಉಳಿದರೆ ಸಾಕೆಂದು ಓಡುವಾಗ “ಅಯ್ಯೋ, ಈ ಮನೆ ತುಂಬ ದೆವ್ವಗಳಿವೆ. ನಾನಾ ರೀತಿಯಲ್ಲಿ ಹೆದರಿಸಿ ಬಿಟ್ಟವು” ಎಂದ .
ಅಂತೂ ಕಳ್ಳರೆಲ್ಲ ಆ ದೆವ್ವದ ಮನೆ ಸಹವಾಸವೇ ಬೇಡ ಎಂದು ಓಡಿ ಬಿಟ್ಟರು. ಈ ಮನೆಯಲ್ಲಿ ಎಲ್ಲ ಮುದಿ ಪ್ರಾಣಿಗಳೂ ಒಟ್ಟಾಗಿ ನವೋತ್ಸಾಹದಿಂದಲೇ ಬಾಳಲು ತೊಡಗಿದವು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.