ಜನ ಜಾಗೃತಿಗಾಗಿ ಡಾ.ವಿಷ್ಣುದಾದಾ ಅಭಿಮಾನ ರಥ
ಜನ ಜಾಗೃತಿಗಾಗಿ ಡಾ.ವಿಷ್ಣುದಾದಾ ಅಭಿಮಾನ ರಥ
yadgiri, ಶಹಾಪುರಃ ಕನ್ನಡ ಸಿನಿಮಾ ಲೋಕದ ದೃವತಾರೆ ಡಾ.ವಿಷ್ಣುವರ್ಧನ ಅವರ ಅಭಿಮಾನಿಯೋರ್ವ ದ್ವಿಚಕ್ರವಾಹನವೊಂದು ರಥವನ್ನಾಗಿಸಿ ಡಾ.ವಿಷ್ಣುದಾದಾ ಅಭಿಮಾನಿ ರಥ ಮಾಡಿಕೊಂಡು ರಾಜ್ಯದಾದ್ಯಂತ ಸುತ್ತಾಡುತ್ತಿದ್ದು, ರಾಜ್ಯೋತ್ಸವ ಸಂದರ್ಭದಲ್ಲಿ ರವಿವಾರ ನಗರಕ್ಕೆ ಆಗಮಿಸಿದ ಜ್ಯೂನಿಯರ್ ವಿಷ್ಣುವರ್ಧನ ಅವರನ್ನು ಇಲ್ಲಿನ ವಿಷ್ಣು ಅಭಿಮಾನಿ ಬಳಗ ಸ್ವಾಗತಿಸಿ ಸನ್ಮಾನಿಸಿ ಆತನಿಗೆ ಅತಿಥಿ ಸತ್ಕಾರಗೈದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ವಿಷ್ಣು ಅಭಿಮಾನಿ, ತಮ್ಮ ಪಯಣದ ಕುರಿತು ಮನಬಿಚ್ಚಿ ಮಾತನಾಡಿದರು. ಕರುನಾಡಿನಲ್ಲಿ ಕನ್ನಡ ಉಳಿಸಿ ಬೆಳೆಸುವಲ್ಲಿ ಕನ್ನಡಿಗರು ಶ್ರಮಿಸಬೇಕು. ಮತ್ತು ಸಂಚಾರಿ ನಿಯಮಗಳನ್ನು ಜನರು ಕಡ್ಡಾಯವಾಗಿ ಪಾಲಿಸಬೇಕು. ಅಲ್ಲದೆ ಕೊರೊನಾ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹುಟ್ಟೂರಾದ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಐರಣಿ ಗ್ರಾಮದಿಂದ ದ್ವಿಚಕ್ರ ವಾಹನವೊಂದು ರಥವನ್ನಾಗಿ ಪ್ರಯಾಣ ಹೊರಟಿರುವ ಕುರಿತು ಮಾಹಿತಿ ನೀಡಿದರು.
ತುಮಕೂರ, ದಾವಣಗೆರೆ, ಇಲಕಲ್, ಸಿಂದಗಿ, ಜೇವರ್ಗಿ ಮೂಲಕ ಶಹಾಪುರಕ್ಕೆ ಆಗಮಿಸಿದ್ದು, ಮುಂದೆ ಸುರಪುರ, ಲಿಂಗಸೂಗೂರು ಮಾರ್ಗವಾಗಿ ಬೆಂಗಳೂರ ತಲುಪುತ್ತೇನೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಮಾರ್ಗ ಮಧ್ಯ ವಿಷ್ಣು ಅಭಿಮಾನಿಗಳು ಊಟ ಉಪಚಾರ ಮಾಡಿಸುತ್ತಿದ್ದಾರೆ, ನಾನು ಸ್ವಂತ ಖರ್ಚಿನಲ್ಲಿ ಜಾಗೃತಿಗಾಗಿ ಸುತ್ತುತ್ತಿದ್ದೇನೆ ಎಂದು ಅವರ ಅಭಿಪ್ರಾಯ ವ್ಯಕ್ತಪಡಿಸಿದರು.
ಹಾವೇರಿ ಭಾಗದಲ್ಲಿ ಜ್ಯೂನಿಯರ್ ವಿಷ್ಣು ಎಂದಲೇ ಗುರುತಿಸಿಕೊಂಡಿದ್ದು, ಮುಂಬರುವ ದಿನಗಳಲ್ಲೂ ವಿಷ್ಣು ಅಭಿಮಾನಿಯಾದ ನಾನು ಹೃದಯ ವಿಷ್ಣು ಅವರಿಗೆ ಇರುತ್ತೇ ಈ ದೇಹ ಕನ್ನಡ ಮಣ್ಣಿಗೆ ಇರಲಿದೆ ಎಂಬ ಅಭಿಮಾನದ ಮಾತುಗಳನ್ನಾಡುತ್ತಾರೆ.
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಸಾರುವ ಅವರು, ದಯವಿಟ್ಟು ಎಲ್ಲರೂ ಕನ್ನಡದಲ್ಲಿ ಮಾತನಾಡುವಂತೆ ಹುರಿದುಂಬಿಸುತ್ತಾರೆ. ಕನ್ನಡಾಂಬೆಗೆ ಶರಣೆನ್ನಿ ಎಂದು ರಾಜ್ಯೋತ್ಸವ ದಿನಚಾರಣೆ ಸಂದರ್ಭ ಶಹಾಪುರದಲ್ಲಿರುವದು ಇಲ್ಲಿನ ಜನರ ಅಭಿಮಾನಕ್ಕೆ ಚಿರಋಣಿ ಎಂದ ಅವರು, ಜೊತೆಗೆ ಮಾರ್ಗ ಮಧ್ಯ ಪೊಲೀಸರು, ಪತ್ರಕರ್ತರ ಪ್ರೀತಿ ಅಭಿಮಾನಕ್ಕೆ ಧನ್ಯವಾದಗಳನ್ನು ಅರ್ಪಿಸಿ ಎಲ್ಲರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳನ್ನು ತಿಳಿಸಿ ಮುಂದಿನ ಪ್ರಯಾಣ ಬೆಳೆಸಿದರು. ತಾಲೂಕು ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಉದಯಕುಮಾರ ಸೇರಿದಂತೆ ಇತರರಿದ್ದರು.
ಕೊರೊನಾ ಜಾಗೃತಿ ಸಹ ಕೈಗೊಂಡಿದ್ದೇನೆ ಎಂದು ತಿಳಿಸಿದ ಜ್ಯೂನಿಯರ್ ವಿಷ್ಣು, ಅವರು ಅಭಿಮಾನದಿಂದ ಶಹಾಪುರದ ಬಸವೇಶ್ವರ ಸರ್ಕಲ್‍ನಲ್ಲಿ ಜನ ಮುಗಿ ಬಿದ್ದಾಗ ಮಾಸ್ಕ್ ಧರಿಸಿ ಎಂದೂ ಹೇಳಲಿಲ್ಲ. ಅಲ್ಲದೆ ಸ್ವತಃ ತಾವೇ ಖುದ್ದಾಗಿ ಮಾಸ್ಕ್ ಧರಿಸದಿರುವದು ಕಂಡು ಬಂದಿತು. ಮಾಸ್ಕ್ ಧರಿಸದೆ, ಅಂತರ ಕಾಪಾಡದೆ ಎಲ್ಲರೊಂದಿಗೆ ಭಾವಚಿತ್ರ ತೆಗೆಸಿಕೊಂಡಿರುವದು ಕಂಡು ಬಂದಿತು. ಕೊರೊನಾ ಜಾಗೃತಿ ಮೂಡಿಸುವೆ ಎಂದು ಹೇಳುವ ಜ್ಯೂ.ವಿಷ್ಣು ಅವರು, ಅವುಗಳನ್ನು ಮೊದಲು ಖುದ್ದಾಗಿ ಪಾಲನೆ ಮಾಡಬೇಕಲ್ಲವೇ.?