ಕಥೆ

ಕಥೆ ಕಲಿಸಿದ ಪಾಠ ಅದ್ಭುತವಾಗಿದೆ ಓದಿ

ದಿನಕ್ಕೊಂದು ಕಥೆ

ಕಥೆ ಕಲಿಸಿದ ಪಾಠ

ಸುರೇಶ ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಎಂದೂ ಎದ್ದವನೇ ಅಲ್ಲ. ‘ವಾರಿಗೆಯ ಹುಡುಗರು ಎಷ್ಟು ಚಂದ ಸಾಲಿ ಹೊಂಟು, ಓದು ಬರಹ ಕಲಿತಿದ್ದಾರ. ಇಂತಾ ಮಕ್ಕಳು ಹುಟ್ಟುದಕ್ಕಿಂತ ಸಾಯುದ ಪಾಡ’ ಎಂದು ಅವನ ತಂದೆ ನಿಂಗಪ್ಪ ಮುಂಜೆ ಮುಂಜಾನೆಯೇ ಬೈಗುಳದ ಸುರಿಮಳೆಗರೆಯುತ್ತಿದ್ದ.

ಸುರೇಶನ ಅಜ್ಜಿ ಪಾರಮ್ಮ ‘ನನ್ನ ಮೊಮ್ಮಗ ಮನಿ ದೀಪದಂಗ ಇರಾಂವ ಒಬ್ಬಾಂವ ಅದಾನ. ನೀ ಹಿಂಗೆಲ್ಲ ಅವನ ಬೈಬ್ಯಾಡಾ’ ಎಂದು ಮನೆಯ ಜನರನ್ನೆಲ್ಲ ತಾಮ್ಣಿ ಮಾಡುತ್ತಿದ್ದಳು.

ಆದರೂ ಅಜ್ಜಿಗೆ ತನ್ನ ಮೊಮ್ಮಗ ಶಾಲೆ ಕಲಿತು ಸರ್ಕಾರದಾಗ ಸರಿಪಾಲು ತರುವ ಸರ್ದಾರ ಆಗಬೇಕು ಎಂಬ ಹಂಬಲ. ಹೀಗಾಗಿ ಆತನನ್ನು ಶಾಲೆಗೆ ಕಳಿಸಲು, ಪುರಾಣ, ಪುಣ್ಯಕಥæ, ನೀತಿಕಥೆಗಳನ್ನು ಹೇಳಿ ಆತನನ್ನು ಹುರಿದುಂಬಿಸುತ್ತಿದ್ದಳು.

ಹೀಗೆ ಒಂದು ದಿನ ಮೊಮ್ಮಗನನ್ನು ಕುಳ್ಳಿರಿಸಿಕೊಂಡು ಪಾರಮ್ಮ ಕಥೆ ಹೇಳಲು ಶುರುಮಾಡಿದಳು: ‘ನಮ್ಮೂರು ಹನುಮಸಾಗರ. ಬಹಳ ಅಂದ್ರ ಒಂದು ಮೂವತ್ತು ಮನೆಗಳ ರೈತ ಕೂಲಿಕಾರರ ಕುಟುಂಬ.

ಆಯಗಾರರ ಒಂದೊಂದು ಕುಟುಂಬ, ಗೌಡನದು ಮತ್ತು ಕುಲಕರ್ಣಿಯದು ಒಂದೊಂದು ಕುಟುಂಬ ಹೀಗೆ ಬಹಳವೆಂದರೆ ನಲ್ವತ್ತು ಮನೆಗಳು. ಇಂತಹ ನನ್ನ ಊರಿಗೆ ಶಾಲೆ, ಬಸ್ಸು, ರಸ್ತೆ, ಕರೆಂಟು, ಫೋನು, ಏನೊಂದು ಇರಲಿಲ್ಲ. ಆಕಸ್ಮಿಕವಾಗಿ ಒಂದೊಂದು ಪತ್ರಗಳನ್ನು ದೂರದ ಬಸವನಕೊಪ್ಪದಿಂದ ಪೋಸ್ಟಮನ್‌ ತಂದು ಕೊಡುತ್ತಿದ್ದ.

ಅದೂ ಕೆಟ್ಟ ಸುದ್ದಿಯ ಪತ್ರವೇ ಆಗಿರುತ್ತಿತ್ತು. ಹೀಗೆ ಯಾರದಾದರೂ ಮನೆಗೆ ಪತ್ರ ಬಂದರೆ ಸಾಕು ಜನ ಗುಬೆಗುಬೆ ಎಂದು ಕುತೂಹಲ ಆತಂಕದಿಂದ ಬಂದು ಸೇರುತ್ತಿದ್ದರು. ಪತ್ರ ಓದಲು ಊರಿನಲ್ಲಿ ಒಬ್ಬನೇ ಒಬ್ಬ ಮನುಷ್ಯ ಎಂದರೆ ಹನುಮನ ಗುಡಿ ಪೂಜಾರಿ ಅನಂತರಾಯ ಕುಲಕರ್ಣಿ ಮಾತ್ರ.

ಹೀಗಿರಲು, ನಮ್ಮ ಹರಿಜನ ಕೇರಿಯ ಬರಮಣ್ಣನ ಮನೆಗೆ ಒಂದು ಪತ್ರ ಬಂತು. ಲಗುಬಗೆಯಿಂದ ಪತ್ರವನ್ನು ಕೈಯಲ್ಲಿ ಹಿಡಿದು ಬರಮಣ್ಣ ಅಕ್ಷರ ಓದಿಕೊಂಡಿದ್ದ ಅನಂತರಾಯರ ಮನೆಗೆ ಹೋಗಿ ಟಪಾಲು ಮುಂದಕ್ಕೆ ಚಾಚಿದ. ರಾಯರು ‘ಹಾಂ, ಆಯ್ತು ಬಾಗಿಲ ಮುಂದೆ ಇರುವ ಅರಳಿ ಮರದ ಕೆಳಗೆ ಇಡು ಬಂದು ನೋಡುತ್ತೇನೆ’ ಎಂದರು.

ಅಷ್ಟರಲ್ಲಿ ಒಳಗಡೆಯಿಂದ ಬಂದ ರಾಯರ ಮಹಾರಾಯತಿ ‘ಬರ್ಮಾ ಹಿತ್ತಲಲ್ಲಿ ಒಂದಿಷ್ಟು ಸೌದೆ ಇದೆ ಒಡೆದು ಹಾಕು’ ಎಂದಳು.

ಪತ್ರದಲ್ಲಿ ಏನಿದೆಯೂ ಏನೋ ಎಂದು ಆತಂಕದಿಂದ ಚಡಪಡಿಸುತ್ತಿದ್ದ ಬರಮಣ್ಣ ಅದೇ ರಭಸದಲ್ಲಿ ಒಂದು ಚಕ್ಕಡಿ ಕಟ್ಟಿಗೆಯನ್ನು ಒಂದೇ ತಾಸಿನಲ್ಲಿ ಸೀಳಿ ಹಾಕಿದ! ‘ಯಾರಿಗೆ ಏನಾಗಿದೆಯೋ ಏನೋ, ದೇವರೆ ಎಲ್ಲಾರನೂ ಚನ್ನಾಗಿಟ್ಟಿರಪ್ಪಾ, ಯಾರಿಗೂ ಗೇಡಿಗ್ಗಾಲ ತರಬ್ಯಾಡ’ ಎಂದು ಮನದಲ್ಲಿಯೇ ಬೇಡಿಕೊಳ್ಳುತ್ತ ಅರಳಿ ಕಟ್ಟೆಯ ಹತ್ತಿರ ಬಂದು ರಾಯರ ದಾರಿ ಕಾಯುತ್ತ ನಿಂತ.

ಹೆಂಡತಿಯೊಂದಿಗೆ ಔಕಾಬಾರಾ ಆಡುತ್ತ ಕುಳಿತ ಅನಂತರಾಯರು ಬರಮಣ್ಣನ ಕಡೆ ತಿರುಗಿಯೂ ನೋಡುತ್ತಿಲ್ಲ.

ತಮ್ಮ ಬಾಯಲ್ಲಿಯ ತಾಂಬೂಲ ಉಗುಳಲು ಹೊರಗೆ ಬಂದ ಅನಂತರಾಯರಿಗೆ ಬರಮಣ್ಣ ನಿಂತಿರುವುದು ಕಾಣಿಸುತ್ತದೆ. ‘ಎಲಾ ಇವನ ಇಲ್ಲೇ ನಿಂತಿಯಲ್ಲಲೇ? ಕಟ್ಟಿಗೆ ಒಡೆದು ಹಾಕು ಅಂಥ ಹೇಳಿಲ್ಲಾ ನಿನಗ’ ಎಂದು ಆಜ್ಞಾ ಠೀವಿಯಿಂದ ಕೇಳಿದರು. ಇಲ್ರೀ ಬುದ್ಯಾರ ಆಗಲೇ ಎಲ್ಲಾನು ಒಡದ ಹಾಕೇನ್ರೀ’ ಎಂದ ಬರಮಣ್ಣ. ತಮ್ಮ ಅಗಲವಾದ ಕಣ್ಣುಗಳನ್ನು ಅಚ್ಚರಿಯಿಂದ ಇನ್ನಷ್ಟು ಅಗಲಿಸಿ ಮತ್ತಷ್ಟು ಕೆಲಸ ಹೇಳಿದರು.

ಬರಮಣ್ಣ ರಾಯರು ಹೇಳಿದ ಕೆಲಸಗಳನ್ನೆಲ್ಲ ಮುಗಿಸಿ ಬರುವುದರೊಳಗಾಗಿ ಸಂಜೆ ಮಬ್ಬುಗತ್ತಲಾಯಿತು. ರಾಯರು ತುದಿಬೆರಳಲ್ಲಿ ಪತ್ರವನ್ನು ಹಿಡಿದುಕೊಂಡು ಅದರ ಮೇಲೆ ಕಣ್ಣಾಡಿಸಿದರು.

ಗಾಭರಿಯಿಂದ ಹುಬ್ಬುಗಂಟಿಕ್ಕಿ ‘ಎಲಾ ದಡ್ಡರಂಡೆಗಂಡಾ ಯಂಥಾ ಕೊಟ್ಟಿ ನಸೀಬಾ ಅಧನೋ ನಿಂದು’ ಎಂದರು. ಮೊದಲೇ ಕೈಕಾಲು ಕಳೆದುಕೊಂಡಿದ್ದ ಬರಮಣ್ಣ ನೆಲಕ್ಕೆ ಕುಸಿದು, ‘ಬುದ್ಯಾರ ಯಾರಿಗೆ ಏನಾಗೇತ್ರಿಯಪ್ಪಾ..’ ಎಂದು ಅಳತೊಡಗಿದ.

‘ಏನಿಲ್ಲ ನಿನ್ನ ಮಗಳು ಬಸೂರಿಯಾಗಿದ್ದಾಳೆ. ಅವಳಿಗೆ ಬಯಕೆ ಸುರುವಾಗಿದೆಯಂತೆ. ನೀನು ತವರುಮನೆ ಊಟ ತೆಗೆದುಕೊಂಡು ಬರಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ.

ಆದರೆ ನನ್ನ ಶಕುನದ ಪ್ರಕಾರ ಅವಳಿಗೆ ಗಂಡಾಂತರವಿದೆ. ರಾಹುಕಾಲದಲ್ಲಿ ಈ ಪತ್ರವನ್ನು ನೀನು ನನ್ನ ಹತ್ತಿರ ತಂದಾಗಲೇ ಸಾಡೆಸಾತಿ ಇದೇ ಎಂದು ಅನ್ನಿಸಿತ್ತು. ಇದೆಲ್ಲ ನಮ್ಮ ಕೈಯಲ್ಲಿದೆ. ನೀನು ಹನುಮ ದೇವರಿಗೆ ಒಂದು ಆಕಳು ದಾನ ಮಾಡು ಕರಮಂತ್ರ ಕಳೆಯುತ್ತದೆ’ ಎಂದು ಹೇಳಿ ಬರಮಣ್ಣನನ್ನು ಸಾಗಹಾಕಿದ.

ಗೌಡನ ಮನೆಗೆ ಪತ್ರ ಬಂದರೆ ಮುಂಗಾಲ ಪುಟಗಿಯಲ್ಲಿ ಓಡಿ ಹೋಗಿ ಪತ್ರ ಓದಿ ಬರುತ್ತಿದ್ದ ಈ ಅನಂತರಾಯ, ಬಡವರ ಮನೆಗೆ ಪತ್ರ ಬಂದರೆ ಅವರನ್ನು ಸುಲಿದು ಸುಣ್ಣಮಾಡಿ ಬಿಡುತ್ತಿದ್ದ. ಅನಕ್ಷ ರತೆ, ಅಜ್ಞಾನ ಒಂದು ಶಾಪ. ಶಾಲೆ ಕಲಿಯದವರನ್ನು ವಂಚಿಸುವುದಕ್ಕಾಗಿಯೇ ಈ ಜಗತ್ತು ಹೊಂಚುಹಾಕಿ ಕುಳಿತಿದೆ.

ನೀನು ಶಾಲೆ ಕಲಿತು ಮಾಮಲೇದಾರ್‌ ಆಗತಿಯೋ ಇಲ್ಲಾ ಬರಮಣ್ಣನಂಗ ಶೋಷಣೆಗೆ ಸಿಕ್ಕು ನಾಷವಾಗುತ್ತಿಯೋ ಯೋಚಿಸು’ ಎನ್ನುತ್ತ ಪಾರಮ್ಮ ಕಥೆಯನ್ನು ಮುಗಿಸಿದಳು.

ಸುರೇಶ ಈಗ ಶಾಲೆಗೆ ಹೋಗುತ್ತಿದ್ದಾನೆ. ಹತ್ತನೇ ತರಗತಿಯಲ್ಲಿ ತನ್ನ ಶಾಲೆಗೆ ಮೊದಲಿಗನಾಗಿ ಪಾಸಾಗಿದ್ದಾನೆ. ಅಜ್ಜಿಯ ಹಿಗ್ಗು ಮತ್ತಷ್ಟು ಹೆಚ್ಚಿದೆ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button