ವಿನಯ ವಿಶೇಷ

ಮಾನವೀಯತೆಯ ಮಂದಾರ, ಶ್ರೇಷ್ಠ ಚಿಂತಕ, ಸಂತ – ನಾರಾಯಣ ಗುರು

ಆ. 27 ನಾರಾಯಣ ಗುರು ಅವರ ಜಯಂತಿ ನಿಮಿತ್ಯ ಈ ಲೇಖನ

-ರಾಘವೇಂದ್ರ ಹಾರಣಗೇರಾ

ನಮ್ಮ ದೇಶದ ಇತಿಹಾಸವನ್ನು ಅವಲೋಕಿಸಿದಾಗ ಈ ಭರತ ಭೂಮಿಯ ಪುಣ್ಯ ನೆಲದಲ್ಲಿ ನೂರಾರು ಜನ ಚಿಂತಕರು, ತತ್ವಜ್ಞಾನಿಗಳು, ಸಮಾಜ ಸುಧಾರಕರು, ಶರಣರು, ಸೂಫಿ ಸಂತರು, ಮಹಾನ್ ಪುಣ್ಯ ಪುರುಷರು ತಮ್ಮ ಉದಾತ ತತ್ವ ವಿಚಾರಗಳಿಂದ, ಸಾಧನೆಗಳಿಂದ ಸಾಮಾಜಿಕ ಸುಧಾರಣೆಯ ಶ್ರೇಷ್ಠ ಕಾರ್ಯಗಳಿಂದ ಮನುಷ್ಯ ಕುಲದ ಕಲ್ಯಾಣಕ್ಕಾಗಿ, ಆರೋಗ್ಯಕರ, ಸಮಾನತೆಯ ಸಮಾಜಕ್ಕಾಗಿ ಶ್ರೇಷ್ಠತೆಗಾಗಿ, ಅಭಿವೃದ್ದಿಗಾಗಿ ಅವಿರತ ಶ್ರಮಿಸಿರುವುದನ್ನು ಕಾಣುತ್ತೇವೆ.

ಅಂತಹ ಶ್ರೇಷ್ಠ ಸಮಾಜ ಸುಧಾರಕರ, ಸಂತರ ಸಾಲಿಗೆ ನಾರಾಯಣ ಗುರು ಅವರು ಸೇರುತ್ತಾರೆ. ಕೇರಳ ರಾಜ್ಯದ ತಿರುವಂತನಪುರದಿಂದ ಏಳು ಮೈಲಿ ದೂರದಲ್ಲಿರುವ ಚೆಂಬಳಾಂತಿ ಎಂಬ ಗ್ರಾಮದಲ್ಲಿ ಮಧ್ಯಮ ವರ್ಗದ ಈಳವ ಸಮುದಾಯದ ಮಾಡನಾಶಾನ್ ಮತ್ತು ಕುಟ್ಟಿಯಮ್ಮ ಎಂಬ ಸುಸಂಸ್ಕøತ ಕೃಷಿಕ ದಂಪತಿಗಳ ಉದರದಲ್ಲಿ ನಾಲ್ಕನೆ ಮಗನಾಗಿ ಜನಿಸಿದರು.

ಚೆಂಬಳಾಂತಿ ಗ್ರಾಮದಲ್ಲಿ ಎಲ್ಲರಿಗೂ ಬೇಕಾಗಿದ್ದ ಮಾಡನಾಶಾನ್ ಮತ್ತು ಕುಟ್ಟಿಯಮ್ಮ ದಂಪತಿಗಳು ತಮ್ಮ ಕೃಷಿಕ ಬದುಕಿನೊಂದಿಗೆ ಆರ್ಯುವೇದಿಕ್ ವಿದ್ಯೆಯನ್ನು ಹಾಗೂ ಜೋತಿಷ್ಯಶಾಸ್ತ್ರವನ್ನು ತಿಳಿದುಕೊಂಡಿದ್ದರು. ಊರಿನ ಜನರ ನೋವು-ನಲಿವುಗಳಿಗೆ, ಕಷ್ಟ-ನಷ್ಟಗಳಿಗೆ ಸ್ಪಂದಿಸುತ್ತ, ಮಾರ್ಗದರ್ಶನ ಮಾಡುತ್ತ, ಸಹಾಯ-ಸಹಕಾರ ನೀಡುತ್ತ, ಜನರ ಹಲವಾರು ತೊಂದರೆಗಳಿಗೆ, ರೋಗಗಳಿಗೆ ಆರ್ಯುವೇದಿಕ್ ಚಿಕಿತ್ಸೆ ನೀಡುತ್ತ ಹಳ್ಳಿಯ ಜನರ ಗೌರವಾದರಗಳಿಗೆ ಪಾತ್ರರಾಗಿದ್ದರು.

ಇಂತಹ ಸುಸಂಸ್ಕøತ ದಂಪತಿಗಳ ಮಡಿಲಲ್ಲಿ ಉತ್ತಮ ಸಂಸ್ಕಾರವನ್ನು ಪಡೆದ ನಾರಾಯಣ ಗುರು ಆರಂಭದಲ್ಲಿ ಸಂಸ್ಕೃತ ಶಿಕ್ಷಣವನ್ನು ಮತ್ತು ಅದರ ಜೊತೆಜೊತೆಯಲ್ಲಿ ಆಯುರ್ವೇದ ವೈದ್ಯ ಶಾಸ್ತ್ರವನ್ನು ಅಪಾರ ಶ್ರದ್ದೆ ಹಾಗೂ ಆಸಕ್ತಿಯಿಂದ ಅಧ್ಯಯನ ಮಾಡಿ ಎರಡರಲ್ಲಿಯೂ ಪ್ರಬುದ್ದತೆ ಸಾಧಿಸಿ ಪಂಡಿತರೇನಿಸಿದರು. ವೇದಗಳು, ಉಪನಿಷತ್ತುಗಳು, ಪುರಾಣಗಳು, ಮಹಾಕಾವ್ಯಗಳು, ಪುಣ್ಯಕಥೆಗಳು, ಮುಂತಾದವುಗಳ ಕುರಿತು ಅಧ್ಯಯನ ಮಾಡಿ ಅಪಾರ ಜ್ಞಾನವನ್ನು ಸಂಪಾದಿಸಿಕೊಂಡಿದ್ದರು.

ಹಿಂದೂ ಧರ್ಮದಲ್ಲಿನ ಉದಾತ್ತ ಚಿಂತನೆಯ ಪ್ರಭಾವಕ್ಕೆ ಒಳಗಾಗಿದ್ದ ನಾರಾಯಣ ಗುರು ಸಮಾಜದಲ್ಲಿನ ಅಸಮಾನತೆ, ಜಾತಿ ತಾರತಮ್ಯ, ಲಿಂಗತಾರತಮ್ಯ, ಮೌಡ್ಯ ಆಚರಣೆಗಳನ್ನು ಹೊಗಲಾಡಿಸಲು ಬಹಳಷ್ಟು ಶ್ರಮಿಸಿದರು. ಹಿಂದೂ ಧರ್ಮದ ಗ್ರಂಥಗಳನ್ನು ಗಂಭೀರವಾಗಿ, ಆಳವಾಗಿ ಅಧ್ಯಯನ ಮಾಡಿದ್ದ ಅವರು ಆ ಗ್ರಂಥಗಳಲ್ಲಿ ಎಲ್ಲಿಯೂ ಜನರನ್ನು ಮೇಲು-ಕೀಳು, ಶ್ರೇಷ್ಠ-ಕನಿಷ್ಠ ಮುಂತಾದ ತಾರತಮ್ಯ ಭಾವನೆಯಿಂದ ನೋಡಬೇಕು ಎಂಬುದಾಗಿ ಹೇಳಿಲ್ಲ ಎಂದು ಜನರಿಗೆ ತಿಳಿಸಿದರು.

ಇಪ್ಪತ್ತನೇಯ ಶತಮಾನದ ಆರಂಭದ ಕಾಲಗಟ್ಟದಲ್ಲಿ ನಾರಾಯಣ ಗುರು ಅವರು ಒಬ್ಬ ಮಹಾನ್ ಸಾಮಾಜಿಕ ಚಿಂತಕ, ಸುಧಾರಕರು ಎಂದು ಕೇರಳದಾದ್ಯಂತ ಪ್ರಸಿದ್ದಿಯನ್ನು ಪಡೆದಿದ್ದರು. ತಳಸಮುದಾಯಗಳಲ್ಲಿನ ಶೋಷಿತರ, ಬಡವರ, ಅಸಮಾನತೆಗೆ ಒಳಗಾದವರ, ಅಲಕ್ಷೀತರ ಬದುಕನ್ನು ಎತ್ತರಿಸಲು ಉತ್ತಮಗೊಳಿಸಲು, ಸುಧಾರಿಸಲು ಜೀವನಪರ್ಯಂತ ಶ್ರಮಿಸಿದರು.

ಭಾರತದ ಮೂಲೆಮೂಲೆಗಳಲ್ಲಿ ಸಂಚರಿಸಿ ಅನೇಕ ರೀತಿಯ ನಿರ್ಲಕ್ಷ್ಯಕ್ಕೆ ಒಲಗಾಗಿದ್ದ ಕೆಳ, ಮದ್ಯಮ ವರ್ಗದ ಸಮುದಾಯಗಳ ಜನರ ಜೀವನ ಸ್ಥತಿಗತಿಗಳನ್ನು ತಿಳಿದುಕೊಂಡು ಆ ಸಮಾಜಗಳಲ್ಲಿನ ಮೇಳು-ಕೀಳು, ಸ್ಪರ್ಶ-ಅಸ್ಪರ್ಶ, ಬಡವ-ಶ್ರೀಮಂತ ಅನೇಕ ರೀತಿಯ ಅಸಮಾನತೆಗಳನ್ನು ಕಂಡು ಮಮ್ಮಲ ಮರುಗಿದರು.

ಈ ಭೂಮಿಯ ಮೇಲಿರುವ ಸಮಸ್ತ ಮನುಷ್ಯ ಕುಲ ಒಂದೇಯಾಗಿದೆ. ಎಲ್ಲರಿಗೆ ಇರುವವನು ಒಬ್ಬನೇ ದೇವರು ಎಂಬ ಏಕತೆಯ, ಸಮಾನತೆಯ ಸಂದೇಶವನ್ನು ಸಾರಿದರು. ದಕ್ಷಿಣ ಭಾರತದದಾದ್ಯಂತ ಸಂಚರಿಸಿದ ನಾರಾಯಣ ಗುರು ತಮ್ಮ ಅಮೋಘವಾದ ಪ್ರವಚನ, ಉಪನ್ಯಾಸಗಳನ್ನು ನೀಡಿ ಜನರ ಬೌದ್ದಿಕ, ಅಧ್ಯಾತ್ಮಿಕ ದಾಹವನ್ನು ಹಿಂಗಿಸಿದರು. ಅವರ ಪ್ರವಚನಗಳಿಗೆ ಜಾತಿ ಮತಗಳ ವ್ಯತ್ಯಾಸವಿಲ್ಲದೆ ಅಪಾರ ಸಂಖ್ಯೆಯಲ್ಲಿ ಜನರು ಸೇರುತ್ತಿದರು.

ಕೇರಳದ ಅಲಪ್ಪಿಯಲ್ಲಿ ಅದ್ವೈತಾಶ್ರಮವನ್ನು ಸ್ಥಾಪಿಸಿ ಈ ಆಶ್ರಮದಲ್ಲಿ ವಿವಿಧ ಧರ್ಮಗಳ ಕುರಿತು ತುಲನಾತ್ಮಕ ಅಧ್ಯಯನ ನಡೆಸಿದರು. ಮತ್ತು ಬೃಹತ್ ಸಮ್ಮೇಳನ ಆಯೋಜಿಸಿ ತಮ್ಮ ಅಮೂಲ್ಯ ಮನುಷ್ಯ ಕಲ್ಯಾಣದ ತತ್ವಗಳನ್ನು, ನೀತಿಗಳ ಸಂದೇಶವನ್ನು ಜನರಿಗೆ ತಿಳಿಸಿದರು.

ಅವರ ಶ್ರೇಷ್ಠ ಚಿಂತನೆಗಳಿಗೆ ಪ್ರಭಾವಿತರಾದ ಅನೇಕರು ನಾರಾಯಣ ಗುರುಜಿಯವರ ಶಿಷ್ಯರಾದರು. ಆಶ್ರಮಕ್ಕೆ ಬಂದ ಜನರನ್ನು ಪ್ರೀತಿ, ವಿಶ್ವಾಸ, ಮಮತೆ, ವಾತ್ಸಲ್ಯ, ಅನುಕಂಪದಿಂದ ಕಂಡು ಮಾತಾಡಿಸುತ್ತಿದ್ದರು. ಆರ್ಯವೇದ ವಿದ್ಯೆಯಲ್ಲಿ ಪಾಂಡಿತ್ಯವನ್ನು ಪಡೆದುಕೊಂಡಿದ್ದ ಗುರುಜಿಯವರು ಆಶ್ರಮಕ್ಕೆ ಬಂದ ಅನೇಕ ಜನರ ರೋಗಗಳನ್ನು ಪತ್ತೆಹಚ್ಚಿ ರೋಗ ಮತ್ತು ಹಲವು ಸಮಸ್ಯೆಗಳನ್ನು ನಿವಾರಣೆಯಾಗುವುದರ ಬಗ್ಗೆ ಧೈರ್ಯ ಹೇಳಿ, ಆತ್ಮವಿಶ್ವಾಸ ತುಂಬಿ ಉಚಿತ ಚಿಕಿತ್ಸೆ ನೀಡುತ್ತಿದ್ದರು.

ಬಡವರನ್ನು, ಶೋಷಿತರನ್ನು, ದೀನ-ಧಲಿತರನ್ನು, ಅನೇಕ ಅಸಮಾನತೆಗೆ ಒಳಗಾದವರನ್ನು ಮಾನವೀಯ ಅಂತ:ಕರಣದಿಂದ, ಮಾತೃವಾತ್ಸಲ್ಯದಿಂದ ಕಾಣುತ್ತಿದ್ದ ನಾರಾಯಣ ಗುರುಜಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸುತ್ತಿದ್ದರು. ಜಾತಿ, ಮತ, ಪಂಥ, ಪಂಗಡ, ಲಿಂಗ ಯಾವುದೇ ರೀತಿಯ ಬೇದ, ತಾರತಮ್ಯ ಮಾಡದೆ ಎಲ್ಲರಿಗೂ, ಆಶ್ರಮದಲ್ಲಿ ಮುಕ್ತ ಅವಕಾಶ ನೀಡಿ ಎಲ್ಲರನ್ನೂ ಅಪ್ಪಿಕೊಂಡರು. ದೇವಾಲಯಗಳಲ್ಲಿ ಕೆಳವರ್ಗದವರಿಗೆ ನಿಷೆಧಿಸಿದ್ದ ಆ ಕಾಲದಲ್ಲಿ ಎಲ್ಲರಿಗೂ ಪ್ರವೇಶ ಸಿಗಲೇಬೇಕೆಂದು ಹೋರಾಟ ಮಾಡಿದರು.

ಸರ್ವಧರ್ಮ ಸಮನ್ವಯಚಾರ್ಯರಾಗಿದ್ದ ನಾರಾಯಣ ಗುರುಗಳು ಸಂಸ್ಕøತ ಭಾಷೆಯ “ ದರ್ಶನಮಾಲಾ” ಮತ್ತು ಮಲಯಾಳಮ್ ಭಾಷೆಯ ಆತ್ಮೋಪದೇಶ ಶತಕ ಎಂಬ ಶ್ರೇಷ್ಠ ಕೃತಿಗಳ ಮೂಲಕ ದೈವಸಾಕ್ಷಾತ್ಕಾರದ ಮಾರ್ಗವು ತಾನಾಗಯೇ ದೊರುಕುತ್ತದೆ ಎಂದು ತಿಳಿಸಿದರು. ಒಟ್ಟು ಎಪ್ಪತಕ್ಕೂ ಹೆಚ್ಚು ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ. ಅವರ ಬದುಕು ಮತ್ತು ಸಾಧನೆ ಹಾಗೂ ಕೃತಿಗಳ ಕುರಿತು ದೇಶದ ಹಲವಾರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ, ಸಂಶೋಧನೆಗಳು ನಡೆದಿವೆ ಮತ್ತು ನಡೆಯುತ್ತಿವೆ.

ಮಹಾನ ಶಿವಭಕ್ತರಾಗಿದ್ದ ನಾರಾಯಣ ಗುರುಜಿಯವರು ಕೇರಳದ “ ವರ್ಕಳ ”ದಲ್ಲಿ ಶಿವ ದೇವಾಲಯವನ್ನು ಕಟ್ಟಿಸಿದರು. ಅಲ್ಲದೆ ಅದೇ ದೇವಾಲಯದಲ್ಲಿ ಶಾರದಾ ಮಾತೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಆ ದೇವಾಲಯ ಶಿವಗಿರಿ ಎಂದು ಮತ್ತು ದಕ್ಷಿಣ ಭಾರತದ ಕಾಶಿ ಎಂದೂ ಪ್ರಸಿದ್ದಿಯನ್ನು ಪಡೆಯಿತು.

ಸರ್ವರಿಗೂ ಸರಿಸಮಾನವಾದ ಶಿಕ್ಷಣ ದೊರೆಯಬೇಕೆಂಬ ಕಾಳಜಿಯನ್ನು ಹೊಂದಿದ್ದ ನಾರಾಯಣ ಗುರುಜಿಯವರು ಮಕ್ಕಳು ಮಾತೃ ಭಾಷೆ, ಸಂಸ್ಕೃತ ಭಾಷೆ ಹಾಗೂ ಇಂಗ್ಲೀಷ್ ಭಾಷಾ ಕಲಿಕೆಗೆ ಹೆಚ್ಚು ಮಹತ್ವ ಕೊಡಬೇಕೆಂದು ತಿಳಿಸಿದರು. ವಯಸ್ಕರಿಗಾಗಿ ರಾತ್ರಿ ಶಾಲೆಗಳನ್ನು ಆರಂಭಿಸಿದವರಲ್ಲಿ ಇಡೀ ದಕ್ಷಿಣ ಭಾರತದಲ್ಲೇ ನಾರಾಯಣ ಗುರುಗಳು ಮೊದಲಿಗರಾಗಿದ್ದಾರೆ.

ಹಿಂದುಳಿದ, ದಲಿತ, ಶೋಷಿತ ವರ್ಗದ ಮಕ್ಕಳಿಗೆ ಶಿವಗಿರಿ, ಚೆಂಬಳಾಂತಿ, ವೆಟ್ಟೂರ ಮುಂತದವುಗಳಲ್ಲಿ ರಾತ್ರಿ ಶಾಲೆಗಳನ್ನು ಪ್ರಾರಂಭಿಸಿದರು. ತಮ್ಮ ಶಿಷ್ಯರಾದ ಸತ್ರವ್ರತ ಸ್ವಾಮಿಗಳ ಮೂಲಕ ಶ್ರೀಲಂಕಾದಲ್ಲೂ ನಲವತ್ತೆರಡಕ್ಕೂ ಹೆಚ್ಚು ರಾತ್ರಿ ಶಾಲೆ ಮತ್ತು ಪ್ರಾರ್ಥನ ಮಂದಿರಗಳನ್ನು ಸ್ಥಾಪಿಸಿದರು.

ಅಲ್ಲದೆ ವಸತಿ ಶಾಲೆಗಳನ್ನು ಪ್ರಾರಂಭಿಸುವುದರ ಮೂಲಕ ಎಲ್ಲಾ ಜಾತಿ ಜನಾಂಗಗಳ, ಪಂಥ ಪಂಗಡಗಳ ಮಕ್ಕಳು ಯಾವುದೇ ರೀತಿಯಾದ ತಾರತಮ್ಯ ಮಾಡದೇ ಸರಿಸಮಾನವಾಗಿ, ಜೊತೆಯಾಗಿ ಕೂಡಿಕೊಂಡು ಶಿಕ್ಷಣ ಕಲಿಯಲು ಮುಕ್ತ ವಾತಾವರಣ ನಿರ್ಮಿಸಿದರು. ಇಂತಹ ರಚನಾತ್ಮಕ ಕಾರ್ಯಗಳಿಂದ ಜಾತಿ ರಹಿತ, ವರ್ಗ ರಹಿತ ಸಮಾನತೆಯ ಸಮಾಜ ಸೃಷ್ಟಿಯಗುತ್ತದೆ ಎಂಬುದು ಗುರುಜಿಯವರ ನಂಬೀಕೆಯಾಗಿತ್ತು.

ನಿರ್ಲ ಕ್ಷಕ್ಕೆ ಒಳಗಾಗಿರುವ ಹಲವಾರು ಶೋಷಿತ ಸಮುದಾಯಗಳ ಜನರು ವಿದ್ಯಾವಂತರಾದರೆ ಆ ಸಮುದಯಗಳು ಇತರ ಸಮುದಾಯಗಳಂತೆ ತಮ್ಮ ಸ್ಥಾನಮಾನಗಳನ್ನು ಎತ್ತರಿಸಿಕೊಳ್ಳಲು ಸಾಧ್ಯವಗುತದೆ ಎಂದು ತಿಳಿಸಿದರು. ಈ ಹಿನ್ನಲೆಯಲ್ಲಿ ಗುರುಜಿಯವರು ಅನೇಕ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದರು.

ಕಾವಿ ತೊಡದೆ ಬಿಳಿ ಬಟ್ಟೆ ತೊಟ್ಟು ಸನ್ಯಾಸಿಯ ಸಂತನ ಸನ್ಮಾರ್ಗದಲ್ಲಿ ಬದುಕಿ ಬಾಳಿದ ನಾರಾಯಣ ಗುರುಜಿ “ ಮನುಷ್ಯನ ಧರ್ಮ ಯಾವುದೇ ಆಗಿರಲಿ, ಅವನು ಒಳ್ಳೆಯ ಮನುಷ್ಯನಾಗಬೇಕಾದದ್ದು ಮುಖ್ಯ” ಎಂದು ಸಾರಿದರು. ಧರ್ಮ ಪರಿಪಾಲನಾ ಯೋಗಮ್ ಸಂಸ್ಥೆಯ ಮೂಲಕ ಅತ್ಯಂತ ಹಿಂದುಳಿದ, ಅಲಕ್ಷಿತ ಇಳವಾ ಸಮಾಜದ ಕಲ್ಯಾಣಕ್ಕಾಗಿ, ಅಭಿವೃದ್ದಿಗಾಗಿ ಶ್ರಮಿಸಿದರು. ಈ ಸಂಸ್ಥೆಯ ಮೂಲಕ ಹಲವಾರು ಧಾರ್ಮಿಕ್, ಸಾಂಸ್ಕøತಿಕ ಕಾರ್ಯಚಟುವಟಿಕೆಗಳು ಸಡೆಸಿದರು.

ನಾರಾಯಣ ಗುರುಗಳ ಉಪದೇಶಗಳು ಮತ್ತು ಶ್ರೇಷ್ಠ ವಿಚಾರಗಳು, ಅವುಗಳ ಅನುಷ್ಠಾನ, ಆಚರಣೆಗಳನ್ನು ಕಂಡು ಮಹಾತ್ಮ ಗಾಂಧೀಜಿಯವರು ಮತ್ತು ವಿಶ್ವ ಕವಿ ರವೀಂದ್ರನಾಥ ಠಾಗೂರ್ ಅವರು ಪ್ರಭಾವಿತರಾಗಿದ್ದರು. “ ನಾನು ಈ ಜಗತ್ತಿನಲ್ಲಿ ಅನೇಕ ಸ್ಥಳಗಳಿಗೆ ಬೇಟಿ ನೀಡಿದ್ದೇನೆ, ಸಂತರನ್ನು ಬೇಟಿ ಮಾಡಿದ್ಧೇನೆ ಆದರೆ ನಾರಾಯಣ ಗುರುಗಳ ಮಹಾನ್ ವ್ಯಕ್ತಿತ್ವ, ಅವರ ಆಗಾದ್ದ ಸಂತನತನಕ್ಕೆ ಸರಿಸಾಟಿಯಾಗುವವರನ್ನು ನಾನು ಇನ್ನೂ ಬೇಟಿಯಾಗಿಲ್ಲ.

ಅನಂತತೆಯತ್ತ ಆ ಮಹಾನ್ ಯೋಗಿಯ ದೃಷ್ಟಿ, ಅವರ ವ್ಯಕ್ತಿತ್ವ ಸುತ್ತ ಆವರಿಸಿರುವ ದೈವಿಕ ಪ್ರಭೆ, ಅವರ ಅಲೌಕಿಕ ಶಕ್ತಿ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರಿತು” ಎಂದು ರವೀಂದ್ರನಾಥ ಠಾಗೂರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೈಕಂ ಸತ್ಯಾಗ್ರಹದಲ್ಲಿ ಮಹಾತ್ಮ ಗಾಂಧೀಜಿಯವರು ನಾರಾಯಣ ಗುರೂಜಿಯವರನ್ನು ಬೇಟಿಯಾದರು. ಅಸ್ಪ್ರಶತೆಯ ನಿವಾರಣೆ, ದೇವಾಲಯಗಳಿಗೆ ಹರಿಜನರ ಪ್ರವೇಶ, ಹರಿಜನೋದ್ದಾರ, ಸಾಮಾಜಿಕ ಅಸಮಾನತೆಯ ನಿವಾರಣೆ ಮುಂತಾದ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗೋಪಾಯಗಳನ್ನು ಕುರಿತು ಇಬ್ಬರು ಮಹಾತ್ಮರು ಚರ್ಚಿಸಿದರು. ದಕ್ಷಿಣ ಭಾರತಕ್ಕೆ ನಾನು ಬೇಟಿ ನೀಡಿದ ಬೇಟಿಯು ನಾರಾಯಣ ಗುರುಗಳ ದರ್ಶನದಿಂದ ಸಾರ್ಥಕವಾಯಿತೆಂದು ಗಾಂಧೀಜಿಯವರು ಶ್ಲಾಘನೀಯ ಮಾತುಗಳನ್ನಾಡಿದರು.

ಜಾತಿರಹಿತ, ವರ್ಗರಹಿತ ಸಮಾಜವನ್ನು ಕಟ್ಟಬೇಕೆಂಬ ಕನಸುಗಳನ್ನು ಕಟ್ಟಿಕೊಂಡು ಆ ಕನಸುಗಳನ್ನು ನನಸಾಗಿಸಲು ಅಸಮಾನ್ಯ ರೀತಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ್, ಸಂಸ್ಕೃತಿಕ ಕಾರ್ಯಸಾಧನೆಗಳ ಮೂಲಕ ಲೋಕಕಲ್ಯಾಣಕರವಾದ ಮಹತ್ಕಾರ್ಯಗಳನ್ನು ಮಾಡಿದ ಸಂತ, ಮಾನವೀಯತೆಯ ಜೀವ ಪರ ಕಾಳಜಿಯ ಸಾಮಾಜಿಕ ಸುಧಾರಕ ನಾರಾಯಣ ಗುರುಜಿಯವರ ಜೀವನ ಮತ್ತು ಸಾಧನೆ ಮನಕುಲಕ್ಕೆ ಒಂದು ಮಾರ್ಗದರ್ಶನ, ಅನುಕರಣೀಯ, ಆದರ್ಶವಾಗಿದೆ ಎಂದು ಹೇಳಿದರೆ ಅತೀಶಿಯೋಕ್ತಿಯಾಗಲಾರದು.

-ರಾಘವೇಂದ್ರ ಹಾರಣಗೇರಾ.

ಸಮಾಜಶಾಸ್ತ್ರ ಉಪನ್ಯಾಸಕರು.

ಮೊ.9901559873.

Related Articles

Leave a Reply

Your email address will not be published. Required fields are marked *

Back to top button