ಮಣ್ಣಣುಗೆ
ತಂಪ ನೆಲದೊಡಲು
ಅಪ್ಯಾಯಮಾನದ ಹಸಿರು
ನಿರಾಳ ನಿಶ್ಚಲತೆ ನಿತಾಂತೆಯ
ಮಡಿಲ ಬಿಟ್ಟು
ಎಲ್ಲರ ಸಲಹುವ ಕೈ ಹಿಡಿದರೂ
ತಪ್ಪದ ಬವಣೆ ಬದುಕು!
ದುರುಳ ಕರಾಳ ಕರಗಳ
ಹರಿತ ಉಗುರುಗಳಿಂದ
ಪಾರಾಗುವುದರಲ್ಲೆ
ಸವೆದ ಬದುಕು.
ವನವೋ ವಸಂತವೋ
ಚಿಗುರೋ ಚೆಲುವೋ ಹೀರಿ
ನಲಿವ ಉಮೇದು ದಕ್ಕದೆ
ಹೆಜ್ಜೆ ಹೆಜ್ಜೆಗೂ ದುಗುಡ ದುಮ್ಮಾನ,
ಮಾಯಾವಿಗಳ ಆಕ್ರಮಣ ಅಪಹರಣ!!
ವಿರಹ ಕೊರಗುಗಳ
ಸಂಗಾತದಲ್ಲಿ ಕೊರಳ ದನಿ
ಕಳೆದುಕೊಂಡ ಅಬಲೆ!
ಚಂಚಲ,ಚೇಷ್ಟೆಗಳನ್ನೆಲ್ಲ
ಒಟ್ಟುಗೂಡಿಸಿ,ವಿವೇಚನೆ
ವಿವೇಕ ಕಳೆದುಕೊಂಡ
ಅರಿವಿನೋಜನ
ಲಾಲಸೆಯ ಉಪಟಳದಿಂದ
ಬಿಡಿಸಿ ತಂದರೂ,ಶುಚಿಯಾಗದ
ಮನದ ಕಿಲುಬು ಸಂಶಯದ ದಿಟ್ಟಿ!!
ಧಗಧಗಿಸುವ ಕೆನ್ನಾಲಗೆಯ
ಉರಿ ಉರಿ ಉರಿಯ ಹಾಯ್ದು
ಬೆಂದು ಬಂದರೂ ತಪ್ಪದ
ಘನಘೋರ ವನವಾಸ!!!
ನರಳುವ ಗರ್ಭದಿ ಸಿಡಿದ
ಸಿಡಿಲ ಮರಿಗಳ,ಮರ್ಯಾದಾ
ಮಾನವೋತ್ತಮನಿಗಿತ್ತು
ಸೋತು ಮತ್ತೆ ಮಣ್ಣ
ಸೇರಿದಳು ಮಣ್ಣಣುಗೆ.
–– ಡಿ.ಎನ್.ಅಕ್ಕಿ
–9448577898.