ಸುರಪುರಕೆ ಎಂಥ ಪಯಣ!? ಹಿರಿಯ ಸಾಹಿತಿ ಡಿ.ಎನ್.ಅಕ್ಕಿ ರಚಿತ ಕಾವ್ಯ ಕಂಬನಿ
ಸುರಪುರಕೆ ಎಂಥ ಪಯಣ!?
ಹೊರಟಿಹೆನು ಇಂದು ನಾನು
ಅವರಿಲ್ಲದೂರಿಗೆ ಅವರಿಲ್ಲ ದೂರಿಗೆ
ಬೇಸತ್ತು ಹೋದಿರೊ ಆತುರದಿ ಹೋದಿರೊ
ಕೈಚಾಚಿ ಬೆಳಕಿನ ತೇರಿಗೆ||
ಕೃಷ್ಣ ಕುಳಿತ ಅರಳಿಮರದೆಲೆಗಳೆಲ್ಲ
ವಿಯೋಗ ದುಃಖದಿ ಮುದುಡಿವೆ
ಬೋಧಿಗಿಡದ ಬೆಳಕ ಕಟ್ಟೆಯ
ಮುಳ್ಳುಕಂಟಿಯು ಮುಚ್ಚಿವೆ| 1 ||
ರಾಜ ಮದನಗೋಪಾಲನಿನಿದನಿಯ
ಕೊಳಲು ಮುರಿದು ಸ್ತಬ್ಧವಾಗಿ ಬಿದ್ದಿದೆ
ಢಾಳಭಸಿತದ ನೊಸಲ ರುಮಾಲು
ಬಸವ ಬೆಳಕನು ಕೂಡಿದೆ || 2 ||
ಗುರು ರೇವಣಾರ್ಯರು ಈಶ್ವರಯ್ಯರು
ತ್ರಿವೇದಿಯವರು ಸೇರಿದರು ಶಿವನ ಪಾದಕೆ
ಕನ್ನಡದ ಕಟ್ಟಾಳು ಚಿನ್ನಕಾರರು
ನಾಡ ಗುಡಿಯ ಸೊಡರಾದರು || 3 ||
ಬೆಳ್ಳಿಕೂದಲ ಅರಿವಿನಜ್ಜ ಆಲ್ದಾಳರೊಂದು
ತಂಪು ನೆರಳಿನ ಅರವಟ್ಟಿಗೆ
ಮನದ ನೋವ ದುಗುಡವೆಲ್ಲವ
ಹಂಚಿಕೊಳ್ಳಲಿನ್ನು ಯಾರೊಟ್ಟಿಗೆ || 4 ||
ಭರವಸೆಯ ಕವಿ ಬೀರಣ್ಣನು ಬಿರ್ರನೆ
ಹೋದ ಬಾರದೂರಿಗೆ
ಆ ರಸಗಳಿಗೆಯ ಅಮರ ನೆನಪು
ನಿಟ್ಟುಸಿರ ಕಡಲಿಗೆ ನೂಕಿದೆ || 5 ||
ಗುರುಹಿರಿಯರು ರಾಜಕುಡಿಗಳು ಭಂಡಾರೆ, ಪ್ರಕಾಶ, ಅಗಸ್ಟಿನ ವಕೀಲರು
ಜಮದರಖಾನಿ ಜಾಲವಾದಿ ಭಕ್ರಿ
ಕಮಲಾಕರ ಆದೋನಿ ಶ್ರೀಹರಿರಾಯರು || 6 ||
ನಿಮ್ಮ ಮೊಗ ಹೃನ್ಮನದಿ ಅಳಿದ
ಅಮರರ ಬೆಳಕು ಹೊಮ್ಮಲಿ
ಸುರಪುರದ ಸರಸತಿಯ ಐಸಿರಿ
ಭಾವೈಕ್ಯದಿ ಬಲಗೊಳ್ಳಲಿ || 7 ||
— ಡಿ.ಎನ್.ಅಕ್ಕಿ.
ದಿನಾಂಕ:20-08-2021.