ಕಾವ್ಯ
ಅಂತ್ಯೋದಯದ ಆಚಾರ್ಯ ಡಿಡಿಎ – ಅಕ್ಕಿ ರಚಿತ ಕಾವ್ಯ
ಮಾಜಿ ಮುಖ್ಯಮಂತ್ರಿ ಶ್ರೀಡಿ.ದೇವರಾಜ ಅರಸುರವರ ಪುಣ್ಯಸ್ಮರಣೆ ನಿಮಿತ್ತ..
ಅಂತ್ಯೋದಯದ ಆಚಾರ್ಯ
ಕಲ್ಲಹಳ್ಳಿಯ ಮಣ್ಣು ಕಣ್ಣು ಬಿಟ್ಟಾಗ ಮೈ
ಸೂರ ತುಂಬೆಲ್ಲ ಕರ್ನಾಟಕದ ಹೊಂಬೆಳಕು.
ತಲೆತಲಾಂತರಗಳಿಂದ ಅದುಮಿಟ್ಟ
ಎದೆಯಾಳದ ಅಳಲಿಗೆ
ಸಂತಸದ ಕೊಳಲನಾದ ಕತ್ತಲ ಭೂ
ಗತದ ಬೀಜ ಭ್ರೂಣಗಳಿಗೆಲ್ಲ
ಮತ್ತೆ ಜೀವಜಲ
ನಿಕೃಷ್ಟ ಗುಡಿಸಲದ ಮುಳ್ಳು
ಬೇಲಿಯ ಮೇಲೆ ಹೊಸರಾಗ
ಹಾಡಿದವು ಹಕ್ಕಿಬಳಗ
ಸೀಳಿದಂಗಳದೆದೆಯ ತುಂಬ ಪುಟಿ
ನೆಗೆದ ಬಣ್ಣಬಣ್ಣದ ಹೂಗಳ ನಗೆಯ ಚಿತ್ತಾರ
ಗವ್ವೆನ್ನುವ ಕಗ್ಗತ್ತಲೆಗೆ
ಜಗ್ಗನೆಯ ಭಾಗ್ಯಜ್ಯೋತಿಯ ಬೆಳಕು
ಬಾಗಿದ ಬೆನ್ನುಗಳಿಗೆ ಹುಮ್ಮಸದ
ಸೆಟೆದೆದೆಯ ಹೊಸನಡಿಗೆ
ಗಂಧದೆಣ್ಣೆಯು ಹೊಲಸು ಹೊತ್ತ ತಲೆಗೆ
ಅಮಾನವೀಯ ಅನಿಷ್ಟಗಳಿಗೆಲ್ಲ
ಮಂಗಳವ ಹಾಡಿದ ಹರಿಕಾರ
ಕನ್ನಡದ ಕನಸುಗಾರ ದಾಪುಗಾಲಿಡುತ
ಸಾಗಿದ ನಿನ್ನ ಸುತ್ತಲೂ ನೆಯ್ದ ಕು
ತಂತ್ರಜಾಲಕೆ ಸಿಲುಕಿ
ವಿಲಿವಿಲಿ ಒದ್ದಾಡಿ,ನಮಗೆಲ್ಲಾ ನೀ
ವಿದಾಯ ಹೇಳಿದ್ದು ನಿಜಕ್ಕೂ
ದೊಡ್ಡ ದುರಂತ ಅರಸು ಎಲ್ಲಿ
ಅರಸಲಿ ನಿನ್ನಂಥ ಹಿರಿದಾದ ಮನಸು.
–ಡಿ.ಎನ್.ಅಕ್ಕಿ. ಹಿರಿಯ ಸಾಹಿತಿ.