ಕೊರೊನಾ ತಡೆಗೆ ಲಸಿಕೆಯೊಂದೆ ಮದ್ದು- ಆರ್.ಶಂಕರ್
ಕೂಲಿ ಕಾರ್ಮಿಕರಿಗೆ ಸುರಕ್ಷಾ ಕಿಟ್, ಆಹಾರ ಧಾನ್ಯದ ಕಿಟ್ ವಿತರಣೆ
yadgiri, ಶಹಾಪುರಃ ಪ್ರತಿಯೊಬ್ಬರು ಕರೋನಾ ಲಸಿಕೆಯನ್ನು ತಪ್ಪದೆ ಪಡೆಯಬೇಕು. ಕೊರೋನಾ ಮಹಾಮಾರಿ ಎಂಬ ರೋಗದ ವಿರುದ್ದ ಹೋರಾಡಲು ಲಸಿಕೆಯಿಂದ ಮಾತ್ರ ಸಾಧ್ಯ. ಲಸಿಕೆ ಪಡೆಯದಿದ್ದರೆ ನಾವೆಲ್ಲ ತುಂಬಾ ಕಷ್ಟವನ್ನು ಎದುರಿಸುವ ಸ್ಥಿತಿ ಬರಲಿದೆ. ಮೂರನೇ ಅಲೆ ಎದುರಿಸಲು ನಾವು ಈಗಲೇ ತಯಾರಿ ನಡೆಸಬೇಕಿದೆ ಎಂದು ಸಚಿವ ಆರ್.ಶಂಕರ ತಿಳಿಸಿದರು.
ತಾಲೂಕಿನ ದೋರನಹಳ್ಳಿ ಗ್ರಾಮದ ಗ್ರಾಪಂ ಕಟ್ಟಡದಲ್ಲಿ ಕಾರ್ಮಿಕ ಇಲಾಖೆಯಿಂದ ಕೂಲಿ ಕಾರ್ಮಿಕರಿಗೆ ಸುರಕ್ಷಾ ಕಿಟ್, ಆಹಾರ ಧಾನ್ಯದ ಕಿಟ್ ವಿತರಿಸಿ ಅವರು ಮಾತನಾಡಿದರು.
ಸರ್ಕಾರದ ವತಿಯಿಂದಲೇ ಸುರಕ್ಷಾ ಕಿಟ್, ಆಹಾರ ಧಾನ್ಯದ ಕಿಟ್ ವಿತರಣೆ ಮಾಡುತ್ತಿದ್ದೇವೆ. ಲಾಕ್ ಡೌನ್ ಸಂದರ್ಭದಲ್ಲಿ ಜನರು ತೊಂದರೆ ಅನುಭವಿಸಿದ್ದಾರೆ. ಮುಂದೆ ಅಂತಹ ತೊಂದರೆ ಬಾರದಿರಲಿ ಎಂದು ಆಶಿಸುವೆ. ಅದು ನಿಮ್ಮಗಳ ಕೈಯಲ್ಲಿದೆ. ಪ್ರತಿಯೊಬ್ಬರು ತಪ್ಪದೆ ಲಸಿಕೆ ಹಾಕಿಸಿಕೊಂಡಲ್ಲಿ ಮೂರನೇ ಅಲೆ ಬರದಂತೆ ತಡೆಯಲು ಅನುಕೂಲವಾಗಲಿದೆ. ಕೊರೊನಾ ಸಂಕಷ್ಟ ಸಮಯದಲ್ಲಿ ಶ್ರಮಿಸಿದ ಎಲ್ಲಾ ವಿಭಾಗದ ಅಧಿಕಾರಿ ವರ್ಗ ಮತ್ತು ಮಾಧ್ಯಮ ವರ್ಗ ಸೇರಿದಂತೆ ಕೊರೊನಾ ತಡೆಗೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಜೂ. 21 ರಂದು ಲಸಿಕಾ ಅಭಿಯಾನ ನಡೆಸಿ ಒಂದೇ ದಿನ 91 ಲಕ್ಷ ಜನರಿಗೆ ಕೊರೋನಾ ಲಸಿಕೆಯನ್ನು ನೀಡಿದ ದೇಶ ಭಾರತ ಮತ್ತು ಅದರ ಕೀರ್ತಿ ನರೇಂದ್ರ ಮೋದಿಜಿಗೆ ಸಲ್ಲುತ್ತದೆ. ಕೊರೋನಾದಂತಹ ಮಹಾಮಾರಿ ಸಂದರ್ಭದಲ್ಲಿ ದೇಶದಲ್ಲಿಯೇ ಲಸಿಕೆಯನ್ನು ಕಂಡು ಹಿಡಿದು ಅದನ್ನು ಉಚಿತವಾಗಿ ದೇಶದ ಎಲ್ಲಾ ಜನರಿಗೆ ನೀಡಲು ಕಾರಣ ನಮ್ಮ ಪ್ರಧಾನಿ ಮೋದಿಜಿ. ಅವರ ಈ ಕಾರ್ಯಕ್ಕೆ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಪ್ರತಿಯೊಬ್ಬರು ಲಸಿಕೆ ಪಡೆದು ಕೊರೋನಾ ಮೂರನೇ ಅಲೆ ಬರದಂತೆ ತಡೆಗಟ್ಟೋಣ ಎಂದು ಆಶಯ ವ್ಯಕ್ತಪಡಿಸಿದರು.
ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ಸಚಿವರು ಬಂದಿಲ್ಲ, ಸಂಸದರು ಬಂದಿಲ್ಲ ಎಂದು ಅನ್ನುವುದು ಬೇಡ ಶಾಸಕ, ಸಂಸದ, ಸಚಿವರು ನಾವು ಮೂರು ಜನರಿದ್ದು ಒಂದು ಟೀಮ್ ಇದೆ. ಇದರಲ್ಲಿ ಯಾರೊಬ್ಬರು ಬಂದರು ಸಮಸ್ಯೆಗೆ ಪರಿಹಾರ ಇದ್ದೇ ಇದೆ. ನಾನಂತು ಇಲ್ಲಿ ಇದ್ದೇ ಇರುತ್ತೇನೆ. ಪ್ರಭು ಚವ್ಹಾಣ ಅವರು ಇದ್ದಾಗ ಚೂರು ಸಮಸ್ಯೆ ಆಗಿರಬಹುದು ಆದರೆ ಆರ್.ಶಂಕರ್ ಅವರು ಬಂದ ಮೇಲೆ ತಿಂಗಳಲ್ಲಿ ಎರಡು ಮೂರು ಬಾರಿ ಜಿಲ್ಲೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ, ಅಭಿವೃದ್ಧಿಗೆ ಮುಂದಾಗಿದ್ದಾರೆ. ಮೊದಲು ಪ್ರತಿಯೊಬ್ಬರು ಲಸಿಕೆ ಪಡೆದು ಜೀವವನ್ನು ಉಳಿಸಿಕೊಳ್ಳೋಣ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಎಸ್ಪಿ ಸಿ.ಬಿ.ವೇದಮೂರ್ತಿ, ಎಡಿಸಿ ಶಂಕರಗೌಡ ಸೋಮನಾಳ್, ತಹಶೀಲ್ದಾರ್ ಜಗನ್ನಾಥ ರೆಡ್ಡಿ, ಜೆಡಿಎ ದೇವಿಕಾ, ಮುಖಂಡರಾದ ಬಸವರಾಜ ಚಂಡ್ರಿಕಿ, ರುದ್ರಗೌಡ, ಶರಣಗೌಡ ಬಾಡಿಯಾಳ, ಸಿದ್ದಣ್ಣಗೌಡ ಕಾಡಂನೋರ್, ಗುರು ಕಾಮಾ, ದೇವೆಂದ್ರ ನಾದ, ಪರಶುರಾಮ ಕುರಕುಂದಿ, ದೇವಪ್ಪ ಮುನಮುಟಗಿ ಸೇರಿದಂತೆ ಇತರರಿದ್ದರು.