ತವರಿಲ್ಲದೆ ಅನಾಥ ಪ್ರಜ್ಞೆಗೆ ಜಾರಿದ್ದ ಮಗಳಿಗೆ ಆಸರೆಯಾದ ನೌಕರಿ
ದೋರನಹಳ್ಳಿ ಪ್ರಕರಣಃ ಮಗಳು ಚಂದ್ರಕಲಾಗೆ ಉದ್ಯೋಗ ಅವಕಾಶ ಕಲ್ಪಿಸಿದ ಡಿಸಿ ರಾಗಪ್ರಿಯಾ
ತವರಿಲ್ಲದೆ ಅನಾಥ ಪ್ರಜ್ಞೆಗೆ ಜಾರಿದ್ದ ಮಗಳಿಗೆ ಆಸರೆಯಾದ ನೌಕರಿ
ಶಹಾಪುರಃ ತಾಲೂಕಿನ ದೋರನಹಳ್ಳಿಯಲ್ಲಿ ಇತ್ತೀಚೆಗೆ ಒಂದೇ ಕುಟುಂಬದ ಆರು ಜನ ಕೃಷಿಹೊಂಡಕ್ಕೆ (ಬಾವಿ) ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯ ನಂತರ ಆ ಕುಟುಂಬದಲ್ಲಿ ಬದುಕುಳಿದ ಏಕೈಕ ಮಗಳಾದ ಚಂದ್ರಕಲಾಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಶಹಾಪುರ ನಗರಸಭೆಯಲ್ಲಿ ಉದ್ಯೋಗ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸೋಮವಾರ ಶಹಾಪುರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಮೃತ ಭೀಮರಾಯ ಅವರ ಮಗಳು ಚಂದ್ರಕಲಾ ಅವರಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ನಗರಸಭೆಯಲ್ಲಿ ಸಿಪಾಯಿ ಹುದ್ದೆಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಳಿಸುವ ಆದೇಶ ಪತ್ರ ನೀಡಿದರು. ಚಂದ್ರಕಲಾಗೆ ಸಾಂತ್ವನ ತಿಳಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ ಅಗತ್ಯವಿರುವ ಎಲ್ಲ ನೆರವು ನೀಡಲಿದೆ. ಯಾವುದೇ ಕಾರಣಕ್ಕೂ ಧೈರ್ಯಗೆಡದೆ ಜೀವನದಲ್ಲಿ ಉತ್ಸಾಹದಿಂದ ಮುಂದೆ ಬರುವಂತೆ ಧೈರ್ಯ ತುಂಬಿದರು.
ದೋರನಹಳ್ಳಿ ಗ್ರಾಮದ ರೈತ ಭೀಮರಾಯ ಶಿವಪ್ಪ ಸುರಪುರ ದಂಪತಿಯು ನಾಲ್ಕು ಮಕ್ಕಳ ಸಮೇತ ಜೂನ್ 28 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಹಿರಿಯ ಮಗಳು ಮದುವೆಯಾಗಿ ಗಂಡನ ಮನೆ ಸೇರಿ ತಿಂಗಳು ಕಳೆಯುವಷ್ಟರಲ್ಲಿ ಈ ದುರ್ಘಟನೆ ನಡೆದಿದ್ದು, ತವರು ಮನೆ ಸಂಪೂರ್ಣ ನಾಶವಾದ ಭಾವನೆಯಲ್ಲಿ ಕಂಗಾಲಾಗಿದ್ದ ಮಗಳು ಚಂದ್ರಕಲಾಗೆ ಜಿಲ್ಲಾಧಿಕಾರಿಯವರು, ಇಲ್ಲಿನ ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸಿಪಾಯಿ ನೌಕರಿ ಆದೇಶ ಪ್ರತಿಯನ್ನು ತಹಸೀಲ್ದಾರ ಕಚೇರಿಯಲ್ಲಿ ಆಕೆಗೆ ನೀಡಿದರು.
ಬದುಕಿನಲ್ಲಿ ಕಂಡ ಘಟನೆ ಕುರಿತು ಜರ್ಜರಿತಗೊಂಡಿದ್ದ ಚಂದ್ರಕಲಾಗೆ ಸಿಪಾಯಿ ನೌಕರಿ ಒಂದಿಷ್ಟು ಆಸರೆಯಾಗಿ ನಿಲ್ಲಲಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಶಹಾಪುರ ತಹಶೀಲ್ದಾರ ಜಗನ್ನಾಥರೆಡ್ಡಿ, ಶಹಾಪುರ ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ, ಶಹಾಪುರ ಸಿ.ಪಿ.ಐ. ಚೆನ್ನಯ್ಯ ಎಸ್. ಹಿರೇಮಠ ಇತರರು ಉಪಸ್ಥಿತರಿದ್ದರು.