ಯಾದಗಿರಿ ಜಿಲ್ಲಾದ್ಯಂತ ಖಾಸಗಿ ಆಸ್ಪತ್ರೆಗಳ ವೈದ್ಯರಿಂದ ಪ್ರತಿಭಟನೆ
ಶಹಾಪುರ, ಸುರಪುರನಲ್ಲೂ ಖಾಸಗಿ ವೈದ್ಯರಿಂದ ಪ್ರತಿಭಟನೆ
ಯಾದಗಿರಿಃ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿರುದ್ಧ ನೂತನ ಕಾಯ್ದೆ ಜಾರಿಗೊಳಿಸಲು ಮುಂದಾದ ಸರ್ಕಾರದ ನಡೆಯನ್ನು ಖಂಡಿಸಿ ಯಾದಗಿರಿ ಸೇರಿದಂತೆ ಶಹಾಪುರ ಮತ್ತು ಸುರಪುರದಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಧಮನಕಾರಿ ಕಾಯ್ದೆ ಜಾರಗೊಳಿಸುತ್ತಿರುವದನ್ನು ಖಂಡಿಸಿ ಜಿಲ್ಲಾದ್ಯಂತ ಖಾಸಗಿ ವೈದ್ಯರು ಇಂದು ಪ್ರತಿಭಟನೆ ನಡೆಸಿದರು. ಯಾದಗಿರಿಯಲ್ಲಿ ಖಾಸಗಿ ವೈದ್ಯರು ನಡೆಸಿದ ಪ್ರತಿಭಟನಾ ಮೆರವಣಿಗೆ ಜಿಲ್ಲಾ ಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮಂಜುನಾಥ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸರ್ಕಾರ ಧೋರಣೆ ಖಂಡಿಸಿ ಶಹಾಪುರದಲ್ಲಿ ನಡೆದ ಪ್ರತಿಭಟನೆ ವಿವರ
ಪ್ರತಿ ಜಿಲ್ಲಾ ಮಟ್ಟದಲ್ಲಿ ಕುಂದು ಕೊರತೆ ಪರಿಹಾರ ಸಮನ್ವಯ ಸಮಿತಿ ರಚಿಸುವ ಮೂಲಕ ಸರ್ಕಾರ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಧಮನಕಾರಿ ಖಾಯ್ದೆಗಳನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ಶಹಾಪುರ ದಲ್ಲಿ ಖಾಸಗಿ ವೈದ್ಯರು ನಡೆಸಿದ ಪ್ರತಿಭಟನೆಯಲ್ಲಿ ವೈದ್ಯರಿಂದ ಆಕ್ರೋಶ ವ್ಯಕ್ತವಾಯಿತು.
ಈಗಾಗಲೇ ಗ್ರಾಹಕರ ನ್ಯಾಯಾಲಯ, ಮೆಡಿಕಲ್ ಕೌನ್ಸಿಲ್‍ಗಳು ರೋಗಿಗಳಿಗೆ ಸೂಕ್ತ ನ್ಯಾಯ ಒದಗಿಸುತ್ತಿದ್ದರೂ ನೂತನವಾಗಿ ಜಿಲ್ಲಾ ಮಟ್ಟದಲ್ಲಿ ಕುಂದು ಕೊರತೆ ಪರಿಹಾರ ಸಮನ್ವಯ ಸಮಿತಿ ರಚಿಸಿರುವುದು ವೈದ್ಯ ವೃತ್ತಿಗೆ ಅಪಮಾನಿಸದಂತೆ. ಕೂಡಲೇ ಈ ಸಮಿತಿ ರದ್ದುಗೊಳಿಸಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದರು. ಸರ್ಕಾರ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳವವರೆಗೂ ಖಾಸಗಿ ಆಸ್ಪತ್ರೆಗಳ ಸೇವೆ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಖಾಸಗಿ ಆಸ್ಪತ್ರೆಗಳಿಗೆ ದಾಖಲಾದ ರೋಗಿಗಳಿಗೆ ಆರೋಗ್ಯ ಸಮಸ್ಯೆಯಲ್ಲಿ ಏನಾದರೂ ಹೆಚ್ಚುಕಮ್ಮಿ ಆದಲ್ಲಿ ಅದಕ್ಕೆ ವೈದ್ಯರನ್ನೆ ನೇರ ಹೋಣೆಗಾರರನ್ನಾಗಿ ಮಾಡುತ್ತಿದ್ದಾರೆ. ಈ ಕುರಿತು ರಾಜ್ಯ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಹಲವಾರು ಬಾರಿ ಮುಖ್ಯಮಂತ್ರಿಗಳಿಗೆ ಸೇರಿದಂತೆ ಆರೋಗ್ಯ ಸಚಿವರಿಗೂ ಈ ಕುರಿತು ಮನವಿ ಸಲ್ಲಿಸಲಾಗಿದೆ. ಆದರೆ ವೈದ್ಯರ ಮನವಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಅಲ್ಲದೆ ನ್ಯಾಯಮೂರ್ತಿ ವಿಕ್ರಮ್ ಜಿತ್ ಮಂಡಿಸಿದ ತಿರ್ಮಾನವನ್ನೂ ಸರ್ಕಾರ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಅಲ್ಲದೆ ಆಸ್ಪತ್ರೆಯ ವೈದ್ಯರು ಸೇರಿದಂತೆ ಸಿಬ್ಬಂದಿಗಳ ಮೇಲೆ ರೋಗಿಗಳ ಸಂಬಂಧಿಗಳು ಮಾಡುವ ಹಲ್ಲೆಯಿಂದ ಇಡೀ ವೈದ್ಯಕೀಯ ಸಿಬ್ಬಂದಿಗಳ ಅಭದ್ರತೆಯಲ್ಲಿ ಬದುಕುವಂತಾಗಿದೆ. ಇದರಿಂದ ವೈದ್ಯರು ಮಾನಸಿಕವಾಗಿ ಜರ್ಜರಿತಾಗುವಂತಾಗಿದೆ. ವೈದ್ಯಕೀಯ ಸಿಬ್ಬಂದಿ ಕೈಗೊಳ್ಳುವ ಚಿಕಿತ್ಸೆಯ ಹಾಗೂ ಇನ್ನಿತರ ಕುಂದು ಕೊರತೆಗಳ ಪರಿಹಾರಕ್ಕಾಗಿ ಜಿಲ್ಲಾಮಟ್ಟದ ಸಮನ್ವಯ ಸಮಿತಿಯೊಂದನ್ನು ರಚಿಸುವ ಮೂಲಕ ವೈದ್ಯರ ನೆಮ್ಮದಿಗೆ ಭಂಗವನ್ನುಂಟು ಮಾಡಿದೆ ಎಂದು ಆರೋಪಿಸಿದರು. ನಂತರ ತಹಸೀಲ್ ಕಚೇರಿಗೆ ತೆರಳಿ ತಹಸೀಲ್ದಾರ ಸೋಮಶೇಖರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಡಾ.ಬಸವರಾಜ ಮುಂಬೈ, ಡಾ.ಚಂದ್ರಶೇಖರ ಸುಬೇದಾರ, ಡಾ.ಶ್ರೀಕಾಂತ ಸಿನ್ನೂರ, ಡಾ.ವೆಂಕಟೇಶ ಟೊಣಪೆ, ಡಾ.ಬಸವರಾಜ ಇಜೇರಿ, ಡಾ.ಎಂ.ಎನ್.ಪಾಟೀಲ್, ಡಾ.ರಾಜೇಂದ್ರ ತಡಿಬಿಡಿ, ಡಾ.ಶಂಭುಲಿಂಗ ಮನಗೂಲಿ, ಡಾ.ಕೃಷ್ಣಾಮೂರ್ತಿ, ಡಾ.ಚಂದ್ರಶೇಖರ ದರ್ಶನಾಪುರ, ಡಾ.ಮಹಾದೇವಿ ಯಾಳವಾರ, ಡಾ.ಶೋಬಾ ಕೊಲ್ಲೂರ ಸೇರಿದಂತೆ ವಿವಿಧ ಔಷಧ ಮಳಿಗೆ ಮತ್ತು ಕ್ಲಿನಿಕಲ್ ಲ್ಯಾಬ್ ಗಳ ಶಂಕರಗೌಡ ಯಾಳವಾರ, ರಾಯಪ್ಪ ಮೇಟಿ ಸೇರಿದಂತೆ ಇತರರು ಭಾಗವಹಿಸಿದ್ದರು.