ಮತ ಎಣಿಕೆ ನಿಷೇಧಾಜ್ಞೆ ಜಾರಿ – ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ
ಎಲ್ಲಾ ವೈನ್ ಶಾಪ್ , ಬಾರ್ ಗಳು, ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟ ನಿಷೇಧಕ್ಕೆ ಸೂಚನೆ
ಯಾದಗಿರಿ; ತಹಶೀಲ್ದಾರರ ಕಾರ್ಯಾಲಯ ಮತ ಎಣಿಕೆ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಆದೇಶಿಸಿದ್ದಾರೆ.
ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ಮತ್ತು ಕಕ್ಕೇರಾ ಪುರಸಭೆ ಸಾರ್ವತ್ರಿಕ ಚುನಾವಣೆ ಮತ್ತು ಗ್ರಾಮ ಪಂಚಾಯತ ಉಪ ಚುನಾವಣೆ ಮತ ಎಣಿಕೆ ಕಾರ್ಯದ ನಿಮ್ಮಿತ್ತ ಸುರಪುರ, ಗುರುಮಿಠಕಲ್, ವಡಿಗೇರಾ, ಶಹಾಪುರ, ಹುಣಸಗಿ ತಹಶೀಲ್ದಾರರ ಕಾರ್ಯಾಲಯದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ.
ಆ ಹಿನ್ನೆಲೆಯಲ್ಲಿ ಡಿ.30 ರಂದು ಬೆಳಿಗ್ಗೆ 6 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಮತ ಎಣಿಕೆ ಕೇಂದ್ರದ ಸುತ್ತಮುತ್ತಲೂ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ 200 ಮೀಟರ್ ವರೆಗೆ ನಿಷೇಧಾಜ್ಞೆ ಘೋಷಿಸಲಾಗಿದೆ.
ಎಣಿಕಾ ಕೇಂದ್ರ ಸುತ್ತುವರೆದ ಪ್ರದೇಶ ವ್ಯಾಪ್ತಿಯಲ್ಲಿ ದಂಡ ಪ್ರಕ್ರಿಯೆ ಸಂಹಿತೆ 1973 ರ ಕಲಂ 144 ರನ್ವಯ ನಿಷೇಧಾಜ್ಞೆ ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1967 ರ ಕಲಂ 10 (ಬಿ) ರನ್ವಯ ಬೆಳಿಗ್ಗೆ 6 ಗಂಟೆಯಿಂದ ಸಾಯಂಕಾಲ 8 ಗಂಟೆಯವರೆಗೆ ಎಲ್ಲಾ ವೈನ್ ಶಾಪ್, ಬಾರ್‍ಗಳು, ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟ ನಿಷೇಧ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.