ಕಠಿಣ ಆಂಗ್ಲ ಭಾಷೆ ಸರಳಗೊಳಿಸುವ ರಾಮಬಾಣ ‘ಸಹ್ಯಾದ್ರಿ’ ಮೇಷ್ಟ್ರು ಬಳಿಯಿದೆ!
-ವಿನಯ ಮುದನೂರ್
ಗುರು ಬ್ರಹ್ಮ ಗುರು ವಿಷ್ಣು
ಗುರು ದೇವೋ ಮಹೇಶ್ವರ
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮ:
ಶಿಕ್ಷಣ ಸೇವೆಯೂ ಒಂದು ಉದ್ಯಮವಾಗಿ ಮಾರ್ಪಟ್ಟಿದೆ. ಶ್ರೇಷ್ಠ ಗುರು ಪದವಿಯ ಶಿಕ್ಷಕ ವೃತ್ತಿಯೂ ಸಹ ಗುರುತ್ವದ ಗುರುತ್ವಾಕರ್ಷಣೆಯನ್ನು ಕಳೆದುಕೊಳ್ಳುತ್ತ ಸಾಗಿದೆ. ಅಂದು ಪಂಚೆ, ಜುಬ್ಬಾ, ಕನ್ನಡ ಧರಿಸಿ ಒಂದು ಕೈಲಿ ಪುಸ್ತಕ ಮತ್ತೊಂದು ಕೈಲಿ ಛತ್ರಿ ಹಿಡಿದು ಬರುತ್ತಿದ್ದ ಮೇಷ್ಟ್ರಗಳು ನಾಡಿಗೆಲ್ಲಾ ನೆರಳಾಗುವ ವಿದ್ಯಾರ್ಥಿ ವೃಂದವನ್ನು ಹುಟ್ಟು ಹಾಕುತ್ತಿದ್ದರು. ಆದರೆ, ಇಂದು ಅಂತ ಸರಳ, ಸಜ್ಜನ, ಮೇಷ್ಟ್ರುಗಳು, ಶಿಕ್ಷಣ ಒಂದು ಸೇವೆಯೆಂದು ಭಾವಿಸಿ ನಿಜ ಗುರುವಾಗಿ ವಿದ್ಯಾರ್ಥಿಗಳ ಪಾಲಿಗೆ ಸಾಕ್ಷಾತ್ ಪರಬ್ರಹ್ಮನಾಗಿ ಕಾಣುವ ಮೇಷ್ಟುಗಳು ಮರೆಯಾಗಿದ್ದಾರೆ.
ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಯುವ ಉತ್ಸಾಹಿ ಶಿಕ್ಷಕರೊಬ್ಬರು ಗುರುವಾಗುವ ಭರವಸೆ ಮೂಡಿಸಿದ್ದಾರೆ. ಉಚಿತ ಶಿಕ್ಷಣ ಸೇವೆ ಮೂಲಕ ಭರವಸೆಯ ಶಿಕ್ಷಕರಾಗಿ ಹೊರ ಹೊಮ್ಮಿದ್ದಾರೆ. ಅವರ ಹೆಸರು ಯೋಗೀಶ್ ಸಹ್ಯಾದ್ರಿ. ಶಿವಮೊಗ್ಗ ಮೂಲದವರಾದ ಯೋಗೀಶ್ ಓದಿದ್ದು ಎಮ್.ಎ, ಬಿ.ಇಡಿ (ಇಂಗ್ಲಿಷ್ ಮೇಜರ್). ಚಿತ್ರದುರ್ಗ ನಗರದ ಪ್ರತಿಷ್ಠಿತ ಎಸ್.ಆರ್.ಎಸ್ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಖಾಸಗಿ ಶಾಲಾ ಶಿಕ್ಷಕರಾಗಿ ಉತ್ತಮ ಸಂಬಳವನ್ನೇ ಪಡೆಯುತ್ತಿರುವ ಯೋಗೀಶ್ ಶಿಕ್ಷಣ ಸೇವಾ ಮನೋಭಾವ ಮೈಗೂಡಿಸಿಕೊಂಡಿದ್ದಾರೆ. ಬಡ ಕುಟುಂಬದಿಂದ ಬೆಳೆದು ಬಂದಿರುವ ಯೋಗೀಶ್ ಗೂ ಆಂಗ್ಲ ಭಾಷೆ ಕಬ್ಬಿಣದ ಕಡಲೆಯೇ ಆಗಿತ್ತು. ಹೀಗಾಗಿ, ಇಂದಿಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆ ಕಠಿಣವೇ ಆಗಿದೆ. ಪರಿಣಾಮ ಯೋಗೀಶ್ ಸಹ್ಯಾದ್ರಿ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಆಂಗ್ಲ ಭಾಷಾ ಕಲಿಕೆ ಶಿಬಿರ ನಡೆಸುತ್ತಿದ್ದಾರೆ. ಪರಿಣಾಮ ಚಿತ್ರದುರ್ಗದ ಗ್ರಾಮೀಣ ಭಾಗದ ಮಕ್ಕಳಿಗೆ ಅಚ್ಚುಮೆಚ್ಚಿನ ಇಂಗ್ಲೀಷ್ ಮೇಷ್ಟ್ರಾಗಿದ್ದಾರೆ.
ಸುಮಾರು 2ವರ್ಷಗಳಿಂದ ಯೋಗೀಶ್ ಪ್ರತಿ ಶನಿವಾರ ಮತ್ತು ರವಿವಾರ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ತೆರಳಿ ಉಚಿತವಾಗಿ ಇಂಗ್ಲಿಷ್ ಪಾಠ ಹೇಳಿಕೊಡುವ ಕೆಲಸವನ್ನು ಆರಂಭಿಸಿದ್ದಾರೆ. ಎಸ್ .ಪಿ .ಇ.ಕೆ ಎಜುಕೇಷನ್ ಟ್ರಸ್ಟ್ ಹೆಸರಿನಲ್ಲಿ ಉಚಿತ ಶಿಕ್ಷಣ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ವಿವಿಧ ಗ್ರಾಮಗಳ ಶಾಲೆಗಳು, ವಿದ್ಯಾರ್ಥಿಗಳ ವಸತಿ ಗೃಹಗಳಿಗೆ ತೆರಳಿ ಉಚಿತ ಕಾರ್ಯಾಗಾರ ನಡೆಸುತ್ತಾರೆ.
ಹೆಚ್ಚಾಗಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ವಾರದ ಪ್ರತಿ ಶನಿವಾರ ಮತ್ತು ಭಾನುವಾರದ ದಿನ ಆಯಾ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಉಚಿತವಾಗಿ ಇಂಗ್ಲಿಷ್ ಕಲಿಸುವ ಕಾರ್ಯ ಆರಂಭಿಸುತ್ತಾರೆ. ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕರಗತವಾಗಿದೆ ಎಂದು ಮನದಟ್ಟಾದ ಬಳಿಕವೇ ಕಾರ್ಯಾಗಾರವನ್ನು ಬೇರೆ ಶಾಲೆಗೆ ಸ್ಥಳಾಂತರಿಸುತ್ತಾರೆ. ಸುಮಾರು ಎರಡು, ಮೂರು ವಾರಗಳವರೆಗೆ ಒಂದು ಶಾಲೆಯಲ್ಲಿ ಕಾರ್ಯಾಗಾರ ನಡೆಸುತ್ತಾರೆ. ಈಗಾಗ್ಲೇ ಕಳೆದ 2ವರ್ಷದಿಂದ ಜಿಲ್ಲೆಯ ಹತ್ತಾರು ಶಾಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಯೊಗೀಶ್ ಮೇಷ್ಟ್ರು ಇಂಗ್ಲಿಷ್ ಕಲಿಸಿಕೊಟ್ಟಿದ್ದಾರೆ.
ತಮಿಳುನಾಡಿನ ಅಣ್ಣಾ ವಿಶ್ವ ವಿದ್ಯಾಲಯ ಹಾಗೂ ಪಾಂಡಿಚೇರಿಯ ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಇಂಗ್ಲಿಷ್ ಬಾಷೆ ಕುರಿತು ವಿಚಾರ ಮಂಡಿಸಿರುವ ಯೋಗೀಶ್ ಆಂಗ್ಲ ಭಾಷೆಯ ಮೇಲೆ ಹಿಡಿತ ಹೊಂದಿದ್ದಾರೆ. ಅಲ್ಲದೆ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ವಿಭಿನ್ನವಾಗಿ ಹೇಳಿಕೊಡುವ ಕಲೆಯನ್ನೂ ಕರಗತ ಮಾಡಿಕೊಂಡಿದ್ದಾರೆ. ಹೀಗಾಗಿ, ತಮ್ಮದೇ ಶೈಲಿಯಲ್ಲಿ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಆಟದೊಂದಿಗೆ ಪಾಠ ಹೇಳಿಕೊಡುತ್ತಾರೆ. ಅರ್ಥವಾಗದ ಭಾಷೆ ಎಂಬ ಕೀಳರಿಮೆಯನ್ನು ಹೋಗಲಾಡಿಸಿ ಸರಳ ಭಾಷೆ ಎಂಬುದನ್ನು ಮನದಟ್ಟು ಮಾಡಿಕೊಡುತ್ತಾರೆ.
ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿರುವ ಯೊಗೀಶ್ ತಮ್ಮ ಉದ್ಯೋಗದ ಜತೆಗೆ ಉಚಿತ ಶಿಕ್ಷಣ ಸೇವೆಯನ್ನು ಮೈಗೂಡಿಸಿಕೊಂಡಿದ್ದಾರೆ. ಆ ಮೂಲಕ ಕೋಟೆನಾಡಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಇಂಗ್ಲಿಷ್ ಮೇಷ್ಟ್ರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿರುವ ಯೋಗೀಶ ಮಕ್ಕಳ ಸಾಹಿತ್ಯ ವೇದಿಕೆ ಜಿಲ್ಲಾದ್ಯಕ್ಷರೂ ಆಗಿದ್ದಾರೆ. ಗ್ರಾಮೀಣ ಮಕ್ಕಳ ಮನಗೆದ್ದು ಕಠಿಣ ಭಾಷೆಯನ್ನು ಬಿಡಿಸಿ ಹೇಳುವ ಮೂಲಕ ಶಿಕ್ಷಣ ಸೇವೆಯಲ್ಲಿ ತೊಡಗಿಸಿಕೊಂಡಿರುವ ಯೋಗೀಶ್ ಅವರ ಶಿಕ್ಷಣ ಸೇವೆ ಶ್ಲಾಘನೀಯ.