ವಕೀಲ ವೃತ್ತಿಗೆ ವಿದಾಯ ಹೇಳಿದ ಖ್ಯಾತ ವಕೀಲ ರಾಮ್ ಜೇಠ್ಮಲಾನಿ
ಪ್ರತಿಷ್ಠಿತ ಹೈಪ್ರೊಫೈಲ್ ಕೇಸ್ ಗಳನ್ನು ಪಡೆದು ಸಮರ್ಥವಾಗಿ ವಾದ ಮಂಡಿಸುವ ಮೂಲಕ ಖ್ಯಾತಿಗಳಿಸಿದ್ದ ಹಿರಿಯ ವಕೀಲ ರಾಮ್ ಜೇಠ್ಮಲಾನಿ ವಕೀಲ ವೃತ್ತಿಗೆ ನಿವೃತ್ತಿ ಘೋಷಿಸಿದ್ದಾರೆ. 94ವರ್ಷದ ರಾಮ್ ಜೇಠ್ಮಲಾನಿ ಅವರು ಏಳು ದಶಕಗಳಿಂದ ವಕೀಲ ವೃತ್ತಿಯಲ್ಲಿ ತೊಡಗಿದ್ದು ಯಶಸ್ಸಿನ ಶಿಖರವೇರಿದವರು. ಜೀವಮಾನವಿಡೀ ಕರಿಕೋಟು ಧರಿಸಿ ವಕೀಲ ವೃತ್ತಿಯಲ್ಲಿ ನಿರತರಾಗಿದ್ದ ಜೇಠ್ಮಲಾನಿ ಕೊನೆಗೂ ತಮ್ಮ ಸುದೀರ್ಘ ವೃತ್ತಿಗೆ ಅಂತ್ಯವಾಡಿದ್ದಾರೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಭಾಗವಹಿಸಿದ್ದ ಅವರು ನನ್ನ ವೃತ್ತಿಯಿಂದ ನಿವೃತ್ತಿ ಹೊಂದುತ್ತೇನೆ ಎಂದು ತಿಳಿಸಿದ್ದಾರೆ. ಆದರೆ, ನಿವೃತ್ತಿ ಬಳಿಕ ವಿಶ್ರಾಂತಿ ಪಡೆಯುವುದಿಲ್ಲ ಬದಲಾಗಿ ಉತ್ತಮ ಭಾರತ ನಿರ್ಮಾಣಕ್ಕಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇನೆಂದು ತಿಳಿಸಿದ್ದಾರೆ. ಆ ಮೂಲಕ ವೃತ್ತಿ ನಿಷ್ಠೆ, ಸಾಮಾಜಿಕ ಕಾಳಜಿ, ರಾಷ್ಟ್ರಪ್ರೇಮದ ಬಗ್ಗೆ ಯುವ ವಕೀಲರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ ಇಳಿ ವಯಸ್ಸಿನಲ್ಲೂ ವಿಶ್ರಾಂತಿ ಪಡೆಯದೆ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆಂದು ಹೇಳುವ ಮೂಲಕ ಯುವಕರಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಧುಮುಕುವ ಕಿಚ್ಚು ಹೊತ್ತಿಸಿದ್ದಾರೆಂದರೆ ಅತಿಶಯೋಕ್ತಿಯಾಗದು.