ಬಿಜೆಪಿಯಲ್ಲಿ 4 ಹೈಕಮಾಂಡಗಳಿವೆ-ಖಂಡ್ರೆ
ಕಲ್ಯಾಣ ಭಾಗಕ್ಕೆ ಪ್ರಾತಿನಿಧ್ಯ ನೀಡದ ಬಿಜೆಪಿ- ಈಶ್ವರ ಖಂಡ್ರೆ ಖಂಡನೆ
yadgiri, ಶಹಾಪುರಃ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿ ಬಿಟ್ಟರೆ ಈ ಪ್ರದೇಶದ ಜನರ ಕಲ್ಯಾಣ ವಾಗುವುದಿಲ್ಲ. ಆ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ಆಗಬೇಕು. ಆದರೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೆಲ್ಲ ಕಲ್ಯಾಣ ಭಾಗಕ್ಕೆ ಅನ್ಯಾಯ ಮಾಡುತ್ತಲೆ ಬಂದಿದೆ ಇದನ್ನು ಖಂಡಿಸುತ್ತೇವೆ. ಮುಂದೆ ಬಿಜೆಪಿ ಇದಕ್ಕೆ ತಕ್ಕ ಬೆಲೆ ಕಟ್ಟಲಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ದೋರನಹಳ್ಳಿ ಗ್ರಾಮದ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಭೇಟಿ ನೀಡಿದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಿಂದ ದುರಾಡಳಿತ ನಡೆಯುತ್ತಿದೆ. ಅದು ಸಮರ್ಥವಾಗಿ ಸರ್ಕಾರ ನಡೆಸುವ ಸ್ಥಿತಿಯಲ್ಲಿಲ್ಲ. ಈ ಬಾರಿಯೂ ಸಚಿವ ಸಂಪುಟದಲ್ಲಿ ಕಲ್ಯಾಣ ಭಾಗಕ್ಕೆ ಮತ್ತೆ ಅನ್ಯಾಯವೆಸಗಿದೆ. ಇದರಿಂದ ಕಲ್ಯಾಣ ಭಾಗದ ಅಭಿವೃದ್ಧಿಗೆ ಹಿನ್ನಡೆ ಆಗಲಿದೆ. ಮಲತಾಯಿ ಧೋರಣೆ ನಡೆಸುವ ಬಿಜೆಪಿಯದ್ದು, ಕಲ್ಯಾಣ ಕರ್ನಾಟಕ ಹೆಸರಿಗೆ ಮಾತ್ರ ಬದಲಾಯಿಸಿದೆ ಎಂದು ಖಂಡಿಸಿದರು.
ಈ ಕುರಿತು ಮುಂದಿನ ಚುನಾವಣೆಯಲ್ಲಿ ಬಿಜೆಪಿಯವರ ಅಸಲಿಯತ್ತು ಜನರ ಮುಂದೆ ಇಡಲಿದ್ದೇವೆ. ರೈತ, ಕಾರ್ಮಿಕ, ಬಡವರ ವಿರೋಧಿ ನೀತಿ ಅನುಸರಿಸುವ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಬಿಜೆಪಿಯಲ್ಲಿ 4 ಹೈ ಕಮಾಂಡಗಳಿವೆಃ ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದರೆ ಒಂದೇ ಹೈ ಕಮಾಂಡ ಆಗಿರುತ್ತಿತ್ತು. ಆದರೆ ಅದಕ್ಕೆ ಬರೋಬ್ಬರಿ 4 ಹೈ ಕಮಾಂಡಗಳಿವೆ. ದೇಹಲಿ ಹೈ ಕಮಾಂಡ, ಕಾವೇರಿ ಹೈ ಕಮಾಂಡ, ಆರ್‍ಎಸ್‍ಎಸ್ ಕೇಶವ ಹೈ ಕಮಾಂಡ, ಬಾಂಬೆ ಟೀಮ್ ಹೈ ಕಮಾಂಡ್ ಹೀಗಾಗಿ ಅಲ್ಲಿ ಅಭಿವೃದ್ಧಿಗಿಂತಲೂ ಅಧಿಕಾರ, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.
ರೈತನ ಮೇಲೆ ಕೇಸು ಖಂಡನೆಃ ತಾಲೂಕಿನ ಕೊಳ್ಳುರು (ಎಂ) ಗ್ರಾಮಕ್ಕೆ ಜು.24 ರಂದು ಸಚಿವ ಆರ್.ಶಂಕರ ಭೇಟಿ ವೇಳೆ ರೈತರಿಗೆ ಕಳೆದ ಬಾರಿಯ ಪರಿಹಾರವೇ ನೀಡಿರುವದಿಲ್ಲ. ಈ ಬಾರಿ ಪರಿಹಾರ ಯಾವಾಗ ರೈತರ ಕೈಸೇರಬೇಕೆಂದು ನೊಂದ ರೈತ ಬಸ್ಸಣ್ಣ ಭಂಗಿ ಆಕ್ರೋಶ ವ್ಯಕ್ತಪಡಿಸಿರುವದಕ್ಕಾಗಿ, ಆ ರೈತನ ಮೇಲೆ ಪ್ರಕರಣ ದಾಖಲಿಸಿರುವದು ಸರಿಯಲ್ಲ. ಇದು ಬಿಜೆಪಿ ದಬ್ಬಾಳಿಕೆ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.