‘ಸತ್ಯ ದರ್ಶನ’ ಸಭೆ ರದ್ದು : ದಿಂಗಾಲೇಶ್ವರ ಸ್ವಾಮೀಜಿ ‘ಲಿಂಗಾಯತ’ರ ಕಾಲೆಳೆದದ್ದು ಹೀಗೆ!
ಗದಗ: ನಾಳೆ ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ನಡೆಯಬೇಕಿದ್ದ ವೀರಶೈವ-ಲಿಂಗಾಯತ ಕುರಿತ ಸತ್ಯ ದರ್ಶನ ಚರ್ಚಾ ಸಭೆ ರದ್ದಾಗಿದ್ದು ನೋವುಂಟು ಮಾಡಿದೆ. ಮೂವರು ಸಚಿವರು, ಪ್ರಭಾವಿ ಮಠಾಧೀಶರು, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಗೌರವ ಕಾಪಾಡಲಿಕ್ಕಾದರೂ ಸಭೆ ನಡೆಸಬೇಕಿತ್ತು ಎಂದು ಹೇಳುವ ಮೂಲಕ ದಿಂಗಾಲೇಶ್ವರ ಸ್ವಾಮೀಜಿ ಅವರು ಲಿಂಗಾಯತ ಪ್ರತ್ಯೇಕ ಧರ್ಮದ ಮುಂಚೂಣಿಯಲ್ಲಿರುವವರ ಕಾಲೆಳೆದಿದ್ದಾರೆ.
ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದಿಂಗಾಲೇಶ್ವರ ಸ್ವಾಮೀಜಿ ನಾವು ಆರು ಜನ ಮಾತ್ರ ಬರುವುದಾಗಿ ಹೇಳಿದ್ದೆವು. ತಕ್ಕ ಉತ್ತರ ನೀಡಲು ನಾವೆಲ್ಲಾ ಸಜ್ಜಾಗಿ ಹೊರಟಿದ್ದೆವು. ಆದರೆ, ಲಿಂಗಾಯತ ಪ್ರತ್ಯೇಕ ಧರ್ಮದ ಪರ ಘಟಾನುಘಟಿಗಳಿದ್ದು ಸಭೆ ನಡೆಸಲು ಪರವಾನಿಗೆ ಪಡೆಯಲು ಆಗದೇ ಇರುವುದು ಅವರ ದೌರ್ಬಲ್ಯಕ್ಕೆ ಸಾಕ್ಷಿ. ಇನ್ನು ಮುಂದೆ ಸವಾಲು ಹಾಕಿದರೆ ಮೊದಲು ಪರವಾನಿಗೆ ಪಡೆಯಬೇಕಿದೆ.
ಹೊರಟ್ಟಿ ಅವರ ಕರೆಗೆ ಬೆಲೆ ಕೊಟ್ಟು ನಾವು ಚರ್ಚೆಗೆ ಸಿದ್ಧರಾಗಿದ್ದೆವು. ಆದರೆ ಈ ಘಟನೆಯಲ್ಲಿ ಬಸವರಾಜ ಹೊರಟ್ಟಿ ಅವರು ಬಲಿಪಶು ಆಗುತ್ತಿದ್ದಾರೆ. ಹೊರಟ್ಟಿ ಅವರನ್ನು ಮುಂದೆ ಬಿಟ್ಟು ಕೆಲವರು ಮೋಜು ನೋಡುತ್ತಿರುವುದು ಕಂಡುಬರುತ್ತಿದೆ. ಅವರ ಬೆಂಬಲಿಗರು ಹೊರಟ್ಟಿ ಅವರನ್ನು ಮುಂದೆಬಿಟ್ಟು ಹಿಂದೆ ಸರಿದಿರುವುದು ವಿಷಾದನೀಯ ಎಂದು ದಿಂಗಾಲೇಶ್ವರ ಸ್ವಾಮೀಜಿ ಕಿಚಾಯಿಸಿದ್ದಾರೆ.