ಇತ್ತ ಪತ್ರಕರ್ತೆ ಗೌರಿ ಹಂತಕರ ಬಂಧನ, ಅತ್ತ ಮತ್ತೋರ್ವ ಪತ್ರಕರ್ತನಿಗೆ ಗುಂಡಿಕ್ಕಿ ಹತ್ಯೆ!
ಕರ್ನಾಟಕದಲ್ಲಿ ಕೊನೆಗೂ ಪೊಲೀಸರು ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ. ಹೀಗಾಗಿ, ಹಂತಕರ ಬಂಧನ ಸುದ್ದಿ ವಿಚಾರವಾದಿಗಳು ನಿಟ್ಟುಸಿರು ಬಿಡುವಂತೆ ಮಾಡಿದೆ. ಆದರೆ, ಇದೇ ವೇಳೆ ಮತ್ತೊಂದು ಕಡೆ ಮತ್ತೋರ್ವ ಪತ್ರಕರ್ತನಿಗೆ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಬರಸಿಡಿಲಿನಂತೆ ಬಂದೆರಗಿದೆ.
‘ರೈಸಿಂಗ್ ಕಾಶ್ಮೀರ್’ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಅವರನ್ನು ಇಂದು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಡೆದಿದೆ. ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿನ ಪ್ರೆಸ್ ಕಾಲೋನಿಯಲ್ಲಿರುವ ಬುಖಾರಿ ಕಚೇರಿಯ ಹೊರ ಭಾಗದಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ ಎಂದು ತಿಳಿದು ಬಂದಿದೆ.
ಗುಂಡಿನ ದಾಳಿ ಸಂದರ್ಭದಲ್ಲಿ ಪತ್ರಕರ್ತ ಶುಜಾತ್ ಅವರೊಂದಿಗೆ ಇದ್ದ ಇಬ್ಬರು ರಕ್ಷಣಾ ಸಿಬ್ಬಂದಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. 18ವರ್ಷಗಳ ಹಿಂದೊಮ್ಮೆ ಶುಜಾತ್ ಬುಖಾರಿ ಅವರ ಮೇಲೆ ದಾಳಿ ನಡೆದಿತ್ತು. ಹೀಗಾಗಿ, ಶುಜಾತ್ ಬುಖಾರಿ ಅವರಿಗೆ ರಕ್ಷಣೆ ಒದಗಿಸಲಾಗಿತ್ತು.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿದಂತೆಯೇ ಶುಜಾತ್ ಹಂತಕರನ್ನು ಶೀಘ್ರಗತಿಯಲ್ಲಿ ಪತ್ತೆ ಹಚ್ಚಬೇಕಿದೆ. ಕೊಲೆಗಾರರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಇಂಥ ಪ್ರಕಣಗಳಿಗೆ ಬ್ರೇಕ್ ಹಾಕಬೇಕಿದೆ ಎಂಬುದು ಪತ್ರಕರ್ತರು, ವಿಚಾರವಾದಿಗಳು ಹಾಗೂ ನಾಗರೀಕರ ಆಗ್ರಹವಾಗಿದೆ.