ಭೀಮಾತೀರದ ಹಂತಕರು & ಪೊಲೀಸರ ಮದ್ಯೆ ಗುಂಡಿನ ಕಾಳಗ!
ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು…
ವಿಜಯಪುರ: ಇಂಡಿ ತಾಲೂಕಿನ ಕೊಂಕಣಗಾಂವ ಗ್ರಾಮದ ಬಳಿ ಇಂದು ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಮೊಳಗಿದೆ. ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಹಾಗೂ ಚಡಚಣ ಠಾಣೆಯ ಪಿಎಸ್ಐ ಗೋಪಾಲ್ ಹಳ್ಳೂರ್ ಮದ್ಯೆ ಗುಂಡಿನ ಚಕಮಕಿ ನಡೆದಿದೆ. ಹಂತಕ ಧರ್ಮರಾಜ್ ಪೊಲೀಸರ ಮೇಲೆ ಗುಂಡು ಹಾರಿಸುತ್ತಿದ್ದಂತೆ ಆತ್ಮರಕ್ಷಣೆಗಾಗಿ ಪಿಎಸ್ಐ ಗೋಪಾಲ್ ಎರಡು ಸುತ್ತಿನ ಪ್ರತಿದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಗುಂಡಿನ ಚಕಮಕಿ ವೇಳೆ ಎರಡು ಗುಂಡು ಹಂತಕ ಧರ್ಮರಾಜ ಚಡಚಣನ ದೇಹ ಹೊಕ್ಕಿವೆ. ಅಂತೆಯೇ ಹಂತಕ ಧರ್ಮರಾಜ್ ಹಾರಿಸಿದ ಗುಂಡು ಪಿಎಸ್ಐ ಗೋಪಾಲ್ ಅವರಿಗೆ ತಗುಲಿವೆ ಎನ್ನಲಾಗಿದೆ. ಪಿಎಸ್ ಐ ಗೋಪಾಲ್ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿದ್ದ ಖಚಿತ ಮಾಹಿತಿ ಮೇರೆಗೆ ಧರ್ಮರಾಜ್ ಮನೆ ಮೇಲೆ ದಾಳಿ ನಡೆಸಿದಾಗ ಘಟನೆ ನಡೆದಿದೆ. ಪಿಎಸ್ಐ ಗೋಪಾಲ್ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಆದರೆ, ಧರ್ಮರಾಜ ಎದೆಭಾಗಕ್ಕೆ ಗುಂಡು ಬಿದ್ದಿದೆ ಎಂದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ. ಚಡಚಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.