ಜಲ ಪರಧಿ ಹಿಂದಿರುವ ಸಿದ್ಧಲಿಂಗೇಶ್ವರ ಗವಿ
ಸದಾ ಮೈಮನ ತಣಿಸುವ ಗವಿ ಸಿದ್ಧಲಿಂಗೇಶ್ವರ ಜಲಪಾತ
ಯಾದಗಿರಿ: ದಟ್ಟ ಕಾಡಿನ ನಡುವೆ ಜುಳು ಜುಳು ಹರಿಯುವ ಜೀವಜಲ. ಎತ್ತ ನೋಡಿದರೂ ಮನ ಸೆಳೆಯುವ ನಿಸರ್ಗದ ನೋಟ. ಚಿಲಿಪಿಲಿಗಳ ಸದ್ದಿನ ಆಟ.
ಇದು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಸುಕ್ಷೇತ್ರ ಸಿದ್ಧಲಿಂಗೇಶ್ವರರು ನೆಲೆಸಿರುವ ಚಿಂತನಹಳ್ಳಿ ಗವಿ ಪ್ರವಾಸಿ ತಾಣದ ತಣ್ಣನೆಯ ತುಣುಕು.
ದಟ್ಟ ಅರಣ್ಯದ ಮಧ್ಯೆದಲ್ಲಿ ಜಲಬೀಳುವ ಗುಹೆಯ ಅಂತರ್ಗತದಲ್ಲಿ ಕಂಗೊಳಿಸುವ ಪ್ರಾಚೀನ ಕಾಲದ ಗವಿಸಿದ್ಧಲಿಂಗೇಶ್ವರ ದೇವಸ್ಥಾನ ಯಾದಗಿರಿ ಜಿಲ್ಲಾ ಕೇಂದ್ರದಿಂದ ೨೯ ಕಿ.ಮೀ. ಅಂತರದಲ್ಲಿ ಹಾಗೂ ಗುರುಮಠಕಲ್ದಿಂದ ೧೨ ಕಿ.ಮೀ. ದೂರದಲ್ಲಿದೆ.
ಮಹಾತ್ಮ ಗವಿಸಿದ್ಧಲಿಂಗ ಐಕ್ಯವಾದ ಗವಿಯಲ್ಲಿ ಗೋಲದ ಲಿಂಗವಿದ್ದು, ಮೇಲೆ ನೈಸರ್ಗಿಕವಾದ ಸಪ್ತಹೆಡೆಯ ಸರ್ಪದಾಕಾರ ಕಲ್ಲಿನ ನಾಗರಾಜ ರಕ್ಷಣೆಯಂತೆ ನಿಂತಿದ್ದಾನೆ.
ವರ್ಷದ ಎಲ್ಲಾ ದಿನಗಳಲ್ಲಿ ಗವಿಯ ಮೇಲ್ಭಾಗದಿಂದ ಹರಿಯುವ ಜಲಪಾನ ನೋಡುವುದೇ ಕಣ್ಣಿಗೆ ಹಬ್ಬ. ಗವಿಯ ಸುತ್ತ ಸದಾ ಹರಿಯುವ ನೀರು ಪ್ರಕೃತಿಯ ವಿಸ್ಮಯ ನೋಟ ಮನಕ್ಕೆ ಮುದ ನೀಡುತ್ತದೆ.
ಪ್ರತಿ ವರ್ಷ ಭರತ ಹುಣ್ಣಿಮೆಯಂದು ಇಲ್ಲಿ ಜರುಗುವ ಜಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿಯಾಗುತ್ತಾರೆ. ಜಾತ್ರೆಗೆ ಬರುವ ಭಕ್ತಾದಿಗಳಿಗೆ ದೇವಸ್ಥಾನ ಸಮಿತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ.
ಜಲ ಮತ್ತು ಅರಣ್ಯದಿಂದ ಸುತ್ತುವರೆದಿರುವ ಇಲ್ಲಿನ ಪ್ರವಾಸಿ ತಾಣಕ್ಕೆ ಪ್ರತಿನಿತ್ಯ ನೂರಾರು ಜನರು ಕುಟುಂಬ ಸಮೇತ ದರ್ಶನಕ್ಕಾಗಿ ಬರುವರು. ಪ್ರಕೃತಿಯ ಸೊಬಗಯ ಸವಿಯಲು ಬರುವ ಯುವ ಸಮೂಹದ ದಂಡೆ ಇಲ್ಲಿ ನೋಡಬಹುದು.
ಬಂದವರು ಮರಳಿ ಹೋಗಲು ಒಲ್ಲೆ ಎನ್ನುವವರೆ ಹೆಚ್ಚು. ಕಾರಣ ಪ್ರಕೃತಿಯ ಸೌಂದರ್ಯ ಪ್ರವಾಸಿಗನನ್ನು ತನ್ನತ್ತ ಸೆಳೆಯುತ್ತದೆ. ಇಲ್ಲಿನ ನಿಸರ್ಗ ಸೌಂದರ್ಯ ನೋಡಿ ಕ್ಷಣ ಕಾಲ ಪ್ರವಾಸಿಗರು ಧ್ಯಾನಾಸಕ್ತದಲ್ಲಿ ಮಗ್ನರಾಗಿ ತಮ್ಮನ್ನು ತಾವೇ ಮರೆತುಬಿಡುವ ಸೊಬಗು ಇಲ್ಲಿನದು.
ಜಲಪಾತದಿಂದ ಬೀಳುವ ನೀರು ಕೆಳಗೆ ಸಣ್ಣ ಕೊಳ್ಳಕ್ಕೆ ಬಿದ್ದು ಅಲ್ಲಿಂದ ಜುಳು ಜುಳು ನಾದದ ಮೂಲಕ ಗಂಗೆ ಮುಂದೆ ಸಾಗುವಳು. ಕೊಳ್ಳದಲ್ಲಿ ಪ್ರವಾಸಿಗರು ಈಜಾಡಿ ಮೈ ಹಗೂರ ಮಾಡಿಕೊಳ್ಳುತ್ತಾರೆ.
ಜುಳು-ಜುಳು ಹರಿಯುವ ಇಲ್ಲಿನ ಕೊಳ್ಳದ ನೀರು ಭೀಕರ ಬರಗಾಲದಲ್ಲಿಯೂ ಬತ್ತದೆ ಸುತ್ತಲಿನ ಜೀವ ಸಂಕುಲದ ದಾಹವನ್ನು ತಣಿಸುತ್ತಿರುವುದು ಇದರ ಹೆಗ್ಗಳಿಕೆ. ಗವಿ’ಯನ್ನು ಪ್ರವೇಶಿಸಬೇಕಾದರೆ ಮೇಲಿಂದ ದುಮ್ಮಿಕ್ಕುವ ನೀರಿನಲ್ಲಿ ನೆಂದು ಒಳಹೊಕ್ಕಿ ದರ್ಶನ ಪಡೆಯಬೇಕು.
ಹೀಗೆ ನೀರಿನಲ್ಲೇ ನೆನೆಯುತ್ತ ಒಳಹೊಕ್ಕರೆ ಒಳಗಿನ ಒಳಗಿನ ಕತ್ತಲು ಹಾಗೂ ನೀರಿನ ಜುಳು-ಜುಳು ನಾದದಿಂದ ಮನಸ್ಸಿಗೆ ಸಂತೋಷ ಹಾಗೂ ನೆಮ್ಮದಿ.
ಬಿರು ಬೇಸಿಗೆಯಲ್ಲಿಯೂ ಇಲ್ಲಿ ನೀರು ಹರಿಯುವುದರಿಂದ ಯುವಕರ ನೆಚ್ಚಿನ ತಾಣ ಇದಾಗಿದೆ. ಅರಣ್ಯ ಇಲಾಖೆಯಿಂದ ಇಲ್ಲಿ ದೈವೀವನ ನಿರ್ಮಾಣವಾಗಿದ್ದು, ಪ್ರವಾಸಿಗರ ಮನಸೆಳೆಯುತಿದೆ. ಮಕ್ಕಳ ಆಟಕ್ಕೆ ಕಾಲ ಕಳೆಯಲು ಉದ್ಯಾನವನವು ಇಲ್ಲಿದೆ.
ಗವಿ ಸಿದ್ಧಲಿಂಗೇಶ್ವರಕ್ಕೆ ತೆರಳುವ ಮಾರ್ಗಃ
ಕಲಬುರಗಿಯಿಂದ ಚಿಂತನಹಳ್ಳಿ ಗವಿಸಿದ್ಧೇಶ್ವರವು ೧೦೦ ಕಿ.ಮೀ., ಯಾದಗಿರಿಯಿಂದ ಚಿಂತನಹಳ್ಳಿ ಗವಿಸಿದ್ಧೇಶ್ವರವು ೨೯ ಕಿ.ಮೀ ಹಾಗೂ ಗುರುಮಠಕಲ್ನಿಂದ ಚಿಂತನಹಳ್ಳಿ ಗವಿಸಿದ್ಧೇಶ್ವರವು ೧೨ ಕಿ.ಮೀ. ದೂರದಲ್ಲಿದೆ.