ಮುತ್ತಿನರಾಶಿ ಭೂಮಂಡಲಕೆ ತಾಗೀತಲೆ ಪರಾಕ್ : ಗೊರವಯ್ಯ ನುಡಿದ ಕಾರ್ಣಿಕದ ಅರ್ಥವೇನು?
ಬಿಳಿ ಜೋಳದ ತೆನೆ ನೆಲ ತಾಗುವಷ್ಟು ಫಲಭರಿತ!?
ಹಾವೇರಿ: ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಹಾಗೂ ಹಾನಗಲ್ ತಾಲೂಕಿನ ಆಡೂರಿನಲ್ಲಿಂದು ಮಾಲತೇಶ ದೇವಸ್ಥಾನದಲ್ಲಿ ವಿಶೇಷ ಉತ್ಸವ ಜರುಗಿತು. ಉತ್ಸವದ ಅಂಗವಾಗಿ ಗೊರವಯ್ಯ ನುಡಿಯುವ ಕಾರ್ಣಿಕ ವರ್ಷದ ಭವಿಷ್ಯವಾಣಿ ಆಗಿರುತ್ತದೆ ಎಂಬುದು ಜನರ ನಂಬಿಕೆ. ಹೀಗಾಗಿ, ಗೊರವಯ್ಯ ನುಡಿಯುವ ಕಾರ್ಣಿಕವೇ ಇಲ್ಲಿ ಪ್ರಮುಖವಾಗಿರುತ್ತದೆ. ಸಾವಿರಾರು ಜನ ಗೊರವಯ್ಯನ ಕಾರ್ಣಿಕ ನುಡಿಗಳಿಗಾಗಿ ಕಾದು ನಿಂತಿದ್ದರು. ಆಡೂರಿನಲ್ಲಿ ಜನರ ಮದ್ಯದಿಂದಲೇ ಬಂದು ಸರಸರನೇ ಕಂಬ ಏರಿದ ಗೊರವಯ್ಯ ‘ಮುತ್ತಿನ ರಾಶಿ ಭೂಮಂಡಲಕೆ ತಾಗೀತಲೆ ಪರಾಕ್’ ಎಂದು ನುಡಿದರು.
ಕಾರ್ಣಿಕ ಕೇಳಿಸಿಕೊಂಡ ಹೊಸ ತಲೆಮಾರಿನ ಜನ ಗೊರವಯ್ಯ ನುಡಿದ ಕಾರ್ಣಿಕ ನುಡಿಯ ಅರ್ಥವೇನೆಂದು ತಲೆಕೆಡಿಸಿಕೊಂಡು ಒಬ್ಬರಿಗೊಬ್ಬರು ವಿಚಾರಿಸತೊಡಗಿದ್ದಾರೆ. ಈ ಬಗ್ಗೆ ‘ವಿನಯವಾಣಿ‘ ಹಿರಿಯ ರೈತ ಶರಣಪ್ಪ ಅವರನ್ನು ಕೇಳಿದಾಗ ಮುತ್ತಿನ ರಾಶಿ ಅಂದರೆ ಬಿಳಿಯ ಧಾನ್ಯಗಳು. ಜೋಳ, ಕುಸುಬಿಯಂತ ಧಾನ್ಯಗಳು ರೈತರು ಹೆಚ್ಚಾಗಿ ಬೆಳೆದು ಸಫಲರಾಗುತ್ತಾರೆ. ಜೋಳದ ತೆನೆ ನೆಲಕ್ಕೆ ತಾಗುವಷ್ಟು ಉತ್ತಮ ಫಲ ನೀಡುತ್ತದೆ ಎಂಬರ್ಥವಾಗಿದೆ ಎಂದು ಖುಷಿಯಿಂದಲೇ ಹೇಳಿದರು. ಹಿರಿಯ ರೈತರ ಅಭಿಪ್ರಾಯವೇ ನಿಜವಾಗಲಿ. ನಮ್ಮ ನಾಡಲಿ ಮಳೆ, ಬೆಳೆ ಚನ್ನಾಗಿ ಆಗಲಿ, ರೈತನ ಬಾಳು ಹಸಿರಾಗಲಿ ಎಂಬುದು ವಿನಯವಾಣಿ ಆಶಯ.